ಕೊಲಂಬೊದಲ್ಲೂ ಕನ್ನಡಿಗ ಪಡಿಕ್ಕಲ್ ಶತಕದಾಟ: ಮೂರನೇ ಕ್ರಮಾಂಕಕ್ಕೆ ದೇವದತ್​ ಸುಭದ್ರ!

ಕೊಲಂಬೊದಲ್ಲೂ ಕನ್ನಡಿಗ ಪಡಿಕ್ಕಲ್ ಶತಕದಾಟ: ಮೂರನೇ ಕ್ರಮಾಂಕಕ್ಕೆ ದೇವದತ್​ ಸುಭದ್ರ!
ಕೊಲಂಬೊದಲ್ಲೂ ಕನ್ನಡಿಗ ಪಡಿಕ್ಕಲ್ ಶತಕದಾಟ: ಮೂರನೇ ಕ್ರಮಾಂಕಕ್ಕೆ ದೇವದತ್​ ಸುಭದ್ರ!
Published on

ಕೊಲಂಬೊ: ಕನ್ನಡಿಗ ಹಾಗೂ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ (117 ರನ್, 193 ಎಸೆತ, 12 ಬೌಂಡರಿ) ಸತತ ಎರಡನೇ ಶತಕದ ನೆರವಿನಿಂದ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲುೃಟಿಸಿ) ಭಾಗವಾಗಿರುವ ಶ್ರೀಲಂಕಾ ವಿರುದ್ಧದ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ಮೊದಲ ದಿನದ ಗೌರವ ಸಂಪಾದಿಸಿದ್ದು, ಬೃಹತ್ ಮೊತ್ತ ಕಲೆಹಾಕುವ ನಿರೀಕ್ಷೆ ಮೂಡಿಸಿದೆ. ಎರಡು ಪಂದ್ಯಗಳ ಸರಣಿಯಲ್ಲಿ ಶುಭಮಾನ್ ಗಿಲ್ ಬಳಗ 1-0 ಮುನ್ನಡೆಯಲ್ಲಿದ್ದು, 3 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಸರಣಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಉತ್ತಮ ಆರಂಭವನ್ನೇ ಕಂಡಿದೆ.


ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಭಾನುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಶುಭಮಾನ್ ಗಿಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. 26 ವರ್ಷದ ದೇವದತ್ ಪಡಿಕ್ಕಲ್ ಹಾಗೂ ನಾಯಕ ಶುಭಮಾನ್ ಗಿಲ್ (50 ರನ್, 108 ಎಸೆತ, 6 ಬೌಂಡರಿ) ಶತಕದ ಜತೆಯಾಟದ ನೆರವಿನಿಂದ ಭಾರತ ದಿನದಂತ್ಯಕ್ಕೆ 85 ಓವರ್‌ಗಳಲ್ಲಿ 5 ವಿಕೆಟ್‌ಗೆ ಭರ್ತಿ 300 ರನ್ ಕಲೆಹಾಕಿದೆ. ಬ್ಯಾಟರ್ ಧ್ರುವ ಜುರೆಲ್ (7*) ಜತೆಗೆ, ಪದಾರ್ಪಣೆ ಪಂದ್ಯವನ್ನಾಡುತ್ತಿರುವ ಸಾರಾಂಶ್ ಜೈನ್ (4*) ಮುರಿಯದ 6ನೇ ವಿಕೆಟ್‌ಗೆ 5 ಎಸೆತಗಳಲ್ಲಿ 4 ರನ್‌ಗಳಿಸಿ, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

2. ದೇವದತ್ ಪಡಿಕ್ಕಲ್ ಶ್ರೀಲಂಕಾದಲ್ಲಿ ಎರಡು ಟೆಸ್ಟ್ ಶತಕ ಸಿಡಿಸಿದ ಕರ್ನಾಟಕದ ಮೊದಲ ಬ್ಯಾಟರ್ ಎನಿಸಿದರು. ರಾಹುಲ್ ದ್ರಾವಿಡ್, ಕೆಎಲ್ ರಾಹುಲ್ ತಲಾ ಒಂದು ಸೆಂಚುರಿ ಗಳಿಸಿದ್ದಾರೆ.


2. ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯೊಂದರಲ್ಲಿ ಅವಳಿ ಶತಕ ಸಿಡಿಸಿದ 7ನೇ ಭಾರತೀಯ ದೇವದತ್ ಪಡಿಕ್ಕಲ್. ವಿನೋದ್ ಕಾಂಬ್ಳಿ (1993), ಅಜರುದ್ದೀನ್ (1997), ತೆಂಡುಲ್ಕರ್ (1997), ಸೆಹ್ವಾಗ್ (2010), ಧವನ್ (2017), ಪೂಜಾರ (2017) ಹಿಂದಿನ ಸಾಧಕರು. ಸಚಿನ್ ತೆಂಡುಲ್ಕರ್ (5) ಲಂಕಾದಲ್ಲಿ ಗರಿಷ್ಠ ಶತಕಗಳಿಸಿರುವ ಭಾರತೀಯ ಬ್ಯಾಟರ್ .

ಮೂರನೇ ಕ್ರಮಾಂಕಕ್ಕೆ ಪಡಿಕ್ಕಲ್ ಸುಭದ್ರ!


ಗಾಯದ ಸಮಸ್ಯೆಯಿಂದ ಎಡಗೈ ಬ್ಯಾಟರ್ ಸಾಯಿ ಸುದರ್ಶನ್ ಸರಣಿಯಿಂದ ಹೊರಬಿದ್ದ ನಂತರ ಆಡುವ ಹನ್ನೊಂದರ ಬಳಗಕ್ಕೆ ಮರಳಿರುವ ದೇವದತ್ ಪಡಿಕ್ಕಲ್ ಮೂರನೇ ಕ್ರಮಾಂಕ ಬ್ಯಾಟರ್ ಆಗಿ ಬಹುತೇಕ ಸ್ಥಾನ ಖಾತ್ರಿಪಡಿಸಿಕೊಂಡಿದ್ದಾರೆ. ಚೇತೇಶ್ವರ ಪೂಜಾರ ನಂತರ ಭಾರತ ಆಡಿದ 27 ಟೆಸ್ಟ್‌ಗಳಲ್ಲಿ 7 ಆಟಗಾರರು ವನ್‌ಡೌನ್ ಬ್ಯಾಟರ್ ಆಗಿ ಆಡಿದ್ದಾರೆ. ಆದರೆ, ಲಂಕಾದಲ್ಲಿ ಸತತ ಎರಡು ಪಂದ್ಯಗಳಲ್ಲಿ ಶತಕ ಗಳಿಸುವ ಮೂಲಕ ಮೂರನೇ ಕ್ರಮಾಂಕ ಸ್ಥಾನ ತುಂಬಲು ಸಜ್ಜಾಗಿರುವ ಸಂದೇಶ ಆಯ್ಕೆ ಸಮಿತಿಗೆ ರವಾನಿಸಿದ್ದಾರೆ.
2018-19ರ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ನಂತರ ಭಾರತದ ಮೂರನೇ ಕ್ರಮಾಂಕ ಬ್ಯಾಟರ್ ಸತತ 2 ಸೆಂಚುರಿಗಳಿಸಿದ ಮೊದಲ ದೃಷ್ಟಾಂತ ಇದಾಗಿದ್ದು, ಚೇತೇಶ್ವರ ಪೂಜಾರ ಕೊನೇ ಸಾಧಕ. ಸರಣಿಗೆ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲೂ ಪಡಿಕ್ಕಲ್ ಶತಕ ಸಿಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net