ಏಷ್ಯಾಡ್‌ಗೂ ಕನ್ನಡಿಗ ಮೋಹಿತ್ ಆಯ್ಕೆ: ಭಾರತ ಪುರುಷರ ಹಾಕಿ ತಂಡ ಪ್ರಕಟ

ಕನ್ನಡಿಗ ಮೋಹಿತ್
ಕನ್ನಡಿಗ ಮೋಹಿತ್
Published on
ನವದೆಹಲಿ: ಕರ್ನಾಟಕದ ಗೋಲು ಕೀಪರ್ ಎಚ್.ಎಸ್. ಮೋಹಿತ್ ಹಾಗೂ ಉಡುಪಿ ಮೂಲದ ಸೂರಜ್ ಕರ್ಕೆರಾ ಮುಂಬರುವ ಏಷ್ಯನ್ ಗೇಮ್ಸ್‌ಗೆ ಭಾರತ ಪುರುಷರ ಹಾಕಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸೆ.19ರಿಂದ ಅ.4ರವರೆಗೆ ಜಪಾನ್‌ನ ಐಚಿ ನಗೋಯಾದಲ್ಲಿ ನಡೆಯಲಿರುವ ಕೂಟಕ್ಕೆ ಹಾಕಿ ಇಂಡಿಯಾ 20 ಆಟಗಾರರ ಹೆಸರು ಪ್ರಕಟಿಸಿದೆ.
ಆಗಸ್ಟ್ 15ಕ್ಕೆ ಆರಂಭವಾಗಲಿರುವ ಹಾಕಿ ವಿಶ್ವಕಪ್‌ಗೆ ಸ್ಥಾನ ಪಡೆದಿರುವ 19 ಆಟಗಾರರು ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗಿದ್ದು, ಆದಿತ್ಯ ಅರ್ಜುನ್ ಲಾಲಗೆ ಬದಲಿಗೆ ರಾಜ್ ಕುಮಾರ್ ಪಾಲ್ ಸ್ಥಾನ ಪಡೆದಿದ್ದಾರೆ. 24 ವರ್ಷದ ಮೋಹಿತ್ ಹಾಸನದ ಅರಸೀಕೆರೆ ತಾಲೂಕಿನ ಹೊನ್ನೆನಹಳ್ಳಿ ಗ್ರಾಮದವರಾಗಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಕಂಚು ವಿಜೇತ ತಂಡದ ನಾಯಕ ಹರ್ಮನ್​ಪ್ರೀತ್ ಸಿಂಗ್ ಸಾರಥ್ಯವಹಿಸಲಿದ್ದು, ಹಾಲಿ ಚಾಂಪಿಯನ್ ಆಗಿ ಏಷ್ಯನ್ ಗೇಮ್ಸ್‌ನಲ್ಲಿ ಕಣಕ್ಕಿಳಿಯಲಿದೆ.
ಆತಿಥೇಯ ಜಪಾನ್, ಕೊರಿಯಾ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಇಂಡೋನೇಷ್ಯಾ ತಂಡಗಳ ಜತೆಗೆ ಭಾರತ ಎ ಗುಂಪಿನಲ್ಲಿದ್ದು, ಲಾಸ್ ಏಂಜಲೀಸ್‌ಗೆ ನೇರ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದೆ.ಸೆ.20ರಂದು ಇಂಡೋನೇಷ್ಯಾ ಎದುರು ಭಾರತ ತನ್ನ ಅಭಿಯಾನ ಆರಂಭಿಸಲಿದ್ದು, ಶ್ರೀಲಂಕಾ (ಸೆ.22), ಕೊರಿಯಾ (ಸೆ.24), ಜಪಾನ್ (ಸೆ.26), ಬಾಂಗ್ಲಾದೇಶ (ಸೆ.28) ವಿರುದ್ಧ ಆಡಲಿದೆ.
ಗೋಲು ಕೀಪರ್ಸ್‌: ಮೋಹಿತ್, ಸೂರಜ್ ಕರ್ಕೆರ;ಡಿಫೆಂಡರ್ಸ್‌: ಜರ್ಮನ್‌ಪ್ರೀತ್, ಹರ್ಮನ್‌ಪ್ರೀತ್, ಅಮಿತ್, ಜುಗ್ರಾಜ್, ಸಂಜಯ್, ಸುಮಿತ್, ಯಶ್‌ದೀಪ್;ಮಿಡ್ ಫೀಲ್ಡರ್ಸ್‌: ರಜಿಂದರ್, ರಾಜ್ ಕುಮಾರ್, ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್, ನೀಲಕಂಠ, ವಿವೇಕ್ ಸಾಗರ್;ಫಾರ್ವರ್ಡ್ಸ್: ದಿಲ್‌ಪ್ರೀತ್, ಶೈಲಾನಂದ್, ಸುಖ್‌ಜೀತ್, ಮಂದೀಪ್ ಸಿಂಗ್, ಅಭಿಷೇಕ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net