ನಿಮಗೆಲ್ಲ ನಾನು ಮೊದಲೇ ಹೇಳಿದ್ದೆ...ವೈಭವ್​ ಸೂರ್ಯವಂಶಿಯ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಜೋಫ್ರಾ ಆರ್ಚರ್! Vaibhav Suryavanshi

ನಿಮಗೆಲ್ಲ ನಾನು ಮೊದಲೇ ಹೇಳಿದ್ದೆ...ವೈಭವ್​ ಸೂರ್ಯವಂಶಿಯ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಜೋಫ್ರಾ ಆರ್ಚರ್! Vaibhav Suryavanshi
ನಿಮಗೆಲ್ಲ ನಾನು ಮೊದಲೇ ಹೇಳಿದ್ದೆ...ವೈಭವ್​ ಸೂರ್ಯವಂಶಿಯ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಜೋಫ್ರಾ ಆರ್ಚರ್! Vaibhav Suryavanshi
Published on

ಪ್ರಮುಖ ಮುಖ್ಯಾಂಶಗಳು

  • ನಿನ್ನೆ ಆರ್ಚರ್ ಬೌಲಿಂಗ್‌ನಲ್ಲಿ ವೈಭವ್ ಭರ್ಜರಿ ಸಿಕ್ಸರ್ ಬಾರಿಸಿ ಮುಂದಿನ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು
  • ವೈಭವ್​ರನ್ನು ಔಟ್ ಮಾಡುವ ಸೀಕ್ರೆಟ್ ನನಗೆ ಮೊದಲೇ ಗೊತ್ತಿತ್ತು ಎಂದು ಆರ್ಚರ್​
  • ನಾನು ಅಂದೇ ಹೇಳಿದ್ದೆ ಇಂದು ಮಾಡಿ ತೋರಿಸಿದ್ದೇನೆ ಎಂದ ಜೋಫ್ರಾ ಆರ್ಚರ್
  • ನೆಟ್ಸ್‌ನಲ್ಲಿ ಅರಿತ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ವೈಭವ್​ ಔಟ್​ ಮಾಡಿದ ಆರ್ಚರ್
Vaibhav Suryavanshi : ಭಾರತದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮತ್ತು ಇಂಗ್ಲೆಂಡ್‌ನ ಅನುಭವಿ ವೇಗಿ ಜೋಫ್ರಾ ಆರ್ಚರ್ ನಡುವೆ ನಿನ್ನೆ ನಡೆದ ರೋಚಕ ಹಣಾಹಣಿ ಇದೀಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವೆ ನಿನ್ನೆ ನಡೆದ ಮೂರನೇ ಟಿ20 ಪಂದ್ಯದಲ್ಲಿ ವೈಭವ್​ ಮತ್ತು ಆರ್ಚರ್​ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಈ ಪಂದ್ಯದಲ್ಲಿ ಆರ್ಚರ್​ ಬೌಲಿಂಗ್​ನಲ್ಲಿ ವೈಭವ್​ ಭರ್ಜರಿ ಸಿಕ್ಸರ್ ಬಾರಿಸಿದರು. ಈ ಕುರಿತು ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಆರ್ಚರ್, ಸಿಕ್ಸರ್​ ಹೊಡೆಸಿಕೊಂಡ ಬಳಿಕ ಅವರದ್ದೇ ವಿಕೆಟ್ ಪಡೆಯುವ ಮೂಲಕ ನಾನು ಲೆಕ್ಕ ಚುಕ್ತಾ ಮಾಡಿದೆ ಎಂದು ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ಇವರಿಬ್ಬರೂ ಐಪಿಎಲ್ 2026ರ ಸೀಸನ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಸಹ ಆಟಗಾರರಾಗಿ ಆಡಿದ್ದಾರೆ.
ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಒಟ್ಟಿಗೆ ಆಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡ ಜೋಫ್ರಾ ಆರ್ಚರ್, ಆಗಿನ ಒಂದು ಆಸಕ್ತಿದಾಯಕ ಕತೆಯನ್ನು ಬಿಚ್ಚಿಟ್ಟಿದ್ದಾರೆ. ಐಪಿಎಲ್ ಪಂದ್ಯವೊಂದರ ಬಳಿಕ ಮಾತನಾಡಿದ್ದ ಆರ್ಚರ್, ಎದುರಾಳಿ ತಂಡಗಳ ಅನೇಕ ಬೌಲರ್‌ಗಳು ಯುವ ಆಟಗಾರ ವೈಭವ್ ಸೂರ್ಯವಂಶಿಯನ್ನು ಔಟ್ ಮಾಡಲು ಪಡಬಾರದ ಪಾಡು ಪಡುತ್ತಿದ್ದಾರೆ ಎಂದು ಹೇಳಿದ್ದರು. ಆದರೆ, ತಮಗೆ ಮಾತ್ರ ವೈಭವ್ ವಿಕೆಟ್ ಪಡೆಯುವ ರಹಸ್ಯ ಚೆನ್ನಾಗಿ ಗೊತ್ತು ಎಂಬ ಆತ್ಮವಿಶ್ವಾಸವನ್ನು ಆರ್ಚರ್ ಆಗಲೇ ವ್ಯಕ್ತಪಡಿಸಿದ್ದರು.
ನೆಟ್ಸ್‌ನಲ್ಲಿ ವೈಭವ್‌ಗೆ ನಿರಂತರವಾಗಿ ಬೌಲಿಂಗ್ ಮಾಡುತ್ತಿದ್ದ ಕಾರಣ, ಅವರು ಯಾವ ರೀತಿಯ ಎಸೆತಕ್ಕೆ ವಿಕೆಟ್ ಒಪ್ಪಿಸುತ್ತಾರೆ ಎಂಬ ಸೀಕ್ರೆಟ್ ತಮಗೆ ತಿಳಿದಿದೆ ಎಂದು ಆರ್ಚರ್ ಅಂದು ಹೇಳಿಕೊಂಡಿದ್ದರು. ಆದರೆ, ಅದು ಎಂತಹ ಎಸೆತ ಎಂಬುದನ್ನು ಬಹಿರಂಗಪಡಿಸದೆ ಇಡೀ ವಿಷಯವನ್ನು ಸಸ್ಪೆನ್ಸ್ ಆಗಿ ಕಾಯ್ದುಕೊಂಡಿದ್ದರು.
ಇದೀಗ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರ ವಿಕೆಟ್ ಉರುಳಿಸಿದ ಬೆನ್ನಲ್ಲೇ ಆರ್ಚರ್ ತಮ್ಮ ಹಳೆಯ ಚಾಲೆಂಜ್ ಅನ್ನು ನೆನಪಿಸಿಕೊಂಡಿದ್ದಾರೆ. ವೈಭವ್‌ನನ್ನು ಹೇಗೆ ಪೆವಿಲಿಯನ್‌ಗೆ ಕಳುಹಿಸಬೇಕು ಎಂದು ನನಗೆ ಮೊದಲೇ ತಿಳಿದಿದೆ ಎಂದು ನಾನು ಹಿಂದೆ ಹೇಳಿದ್ದೆ, ಈಗ ಅದನ್ನು ಮೈದಾನದಲ್ಲಿ ಮಾಡಿ ತೋರಿಸಿದ್ದೇನೆ ಎಂದು ಜೋಫ್ರಾ ಆರ್ಚರ್ ತಮ್ಮ ಹಳೆಯ ಸಸ್ಪೆನ್ಸ್ ಕಥೆಗೆ ಕಂಪ್ಲೀಟ್ ಕ್ಲೈಮ್ಯಾಕ್ಸ್ ನೀಡಿದ್ದಾರೆ.

ವೈಭವ್​ ಯಾವ ರೀತಿ ಔಟಾದರು?

ನಿನ್ನೆ ಆರ್ಚರ್ ತಮ್ಮ ಎರಡನೇ ಓವರ್​ನಲ್ಲಿ ಬೌನ್ಸರ್ ಎಸೆದರು. ಈ ವೇಳೆ ವೈಭವ್ ಪುಲ್/ಹುಕ್ ಶಾಟ್‌ಗೆ ಪ್ರಯತ್ನಿಸಿದರು. ಆದರೆ, ಚೆಂಡು ಗ್ಲೌಸ್​ಗೆ ತಗುಲಿ ವಿಕೆಟ್‌ಕೀಪರ್ ಬಟ್ಲರ್‌ ಕೈಗೆ ಹೋಯಿತು. ಇದಕ್ಕೂ ಮುನ್ನ ವೈಭವ್​, ಆರ್ಚರ್‌ಗೆ ಒಂದು ಸಿಕ್ಸರ್ ಹೊಡೆದಿದ್ದರು. ಆರ್ಚರ್ ತನ್ನ ಐಪಿಎಲ್​ ತಂಡದ ಸಹ ಆಟಗಾರನನ್ನು ಶಾರ್ಟ್ ಬಾಲ್ ಯೋಜನೆಯಿಂದ ಔಟ್ ಮಾಡಿದರು.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಇಂಗ್ಲೆಂಡ್ ಪಡೆ ಅಬ್ಬರದ ಪ್ರದರ್ಶನ ನೀಡಿತು. ಆರಂಭಿಕ ಆಟಗಾರ ಫಿಲ್ ಸಾಲ್ಟ್ ಭರ್ಜರಿ ಬ್ಯಾಟಿಂಗ್ ನಡೆಸಿ ಕೇವಲ 44 ಎಸೆತಗಳಲ್ಲಿ 70 ರನ್ ಚಚ್ಚಿ ತಂಡಕ್ಕೆ ಬಲವಾದ ಅಡಿಪಾಯ ಹಾಕಿಕೊಟ್ಟರು. ಇನಿಂಗ್ಸ್ ಅಂತ್ಯದಲ್ಲಿ ಸ್ಯಾಮ್ ಕರನ್ (24 ಎಸೆತಗಳಲ್ಲಿ ಅಜೇಯ 41) ಮತ್ತು ವಿಲ್ ಜಾಕ್ಸ್ (7 ಎಸೆತಗಳಲ್ಲಿ 14) ಸ್ಫೋಟಕ ಆಟ ಪ್ರದರ್ಶಿಸಿದ್ದರಿಂದ, ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 201 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು.
202 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತದ ಬ್ಯಾಟಿಂಗ್ ಲೈನ್-ಅಪ್ ಸಂಪೂರ್ಣವಾಗಿ ತತ್ತರಿಸಿತು. ಇಂಗ್ಲೆಂಡ್ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಭಾರತದ ಯಾವುದೇ ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಟೀಮ್ ಇಂಡಿಯಾ ಕೇವಲ 11.4 ಓವರ್‌ಗಳಲ್ಲಿ 76 ರನ್‌ಗಳಿಗೆ ಆಲೌಟ್ ಆಗುವ ಮೂಲಕ 125 ರನ್‌ಗಳ ಹೀನಾಯ ಸೋಲನ್ನು ಒಪ್ಪಿಕೊಂಡಿತು. ಭಾರತದ ಪರ ವೈಭವ್ ಸೂರ್ಯವಂಶಿ ಮತ್ತು ಇಶಾನ್ ಕಿಶನ್ ತಲಾ 13 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಎನಿಸಿತು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net