ಸೋತಿದ್ದಲ್ಲ ಬೇಜಾರು... ಟೀಮ್ ಇಂಡಿಯಾ ಗೆಲುವಿನ ಬೆನ್ನಲ್ಲೇ ಜಪಾನ್​ ಕ್ಯಾಪ್ಟನ್ ಅಚ್ಚರಿ ಹೇಳಿಕೆ​ | Vaibhav Sooryavanshi

ಸನೋ ನಗರದಲ್ಲಿ ನಡೆದ ಪಂದ್ಯದಲ್ಲಿ ಭಾರತ ರೋಚಕ ಗೆಲುವು ದಾಖಲಿಸಿದ್ದೇ ಆದರೂ ಎಂದಿನಂತೆ ವೈಭವ್ ಸೂರ್ಯವಂಶಿಯನ್ನು ಆಡಿಸದೆ ಬೆಂಚ್​ನಲ್ಲಿ ಕೂರಿಸಿದ್ದು ಇದೀಗ ಹಲವರ ಬೇಸರಕ್ಕೆ ಕಾರಣವಾಗಿದೆ.
Vaibhav Sooryavanshi
ಟೀಮ್ ಇಂಡಿಯಾ ಗೆಲುವಿನ ಬೆನ್ನಲ್ಲೇ ಜಪಾನ್​ ಕ್ಯಾಪ್ಟನ್ ಅಚ್ಚರಿ ಹೇಳಿಕೆ
Published on
Summary
  • ಜಪಾನ್ ವಿರುದ್ಧ ನಡೆದ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಭಾರತ ತಂಡವು (Team India ) ರೋಚಕ ಗೆಲುವು

  • ಕೊನೆಯ ಹಂತದಲ್ಲಿ ಸೋಲುಂಡ ಜಪಾನ್​ ತಂಡದ ಕ್ಯಾಪ್ಟನ್​ ಕೊಟ್ಟ ಹೇಳಿಕೆ ವೈರಲ್​

  • ಪಂದ್ಯ ಸೋತಿದ್ದಕ್ಕಿಂತ ಯುವ ಬ್ಯಾಟಿಂಗ್​ ಸೆನ್ಸೇಷನ್​ ಅನುಪಸ್ಥಿತಿ ಬಗ್ಗೆ ಬೇಸರ

ಟೊಕಿಯೋ: ಜಪಾನ್ ವಿರುದ್ಧ ನಡೆದ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಭಾರತ ತಂಡವು (Team India ) ರೋಚಕ ಗೆಲುವು ಸಾಧಿಸುವ ಮೂಲಕ ಸಂಭವನೀಯ ಮುಖಭಂಗದಿಂದ ತಪ್ಪಿಸಿಕೊಂಡಿತು. ಮೊದಲ ಪಂದ್ಯವನ್ನು ಗೆಲ್ಲಲು ಸಖತ್ ಪೈಪೋಟಿ ನೀಡಿ, ಕೊನೆಯ ಹಂತದಲ್ಲಿ ಸೋಲುಂಡ ಜಪಾನ್​ ತಂಡದ ಕ್ಯಾಪ್ಟನ್​ ಕೊಟ್ಟ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರತ ಹಾಗೂ ಜಪಾನ್ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ 75ನೇ ವರ್ಷಾಚರಣೆಯ ಹಿನ್ನೆಲೆ 'ಸುಜುಕಿ ಕಪ್' ಏಕೈಕ ಟಿ20 ಪಂದ್ಯ ಆಯೋಜಿಸಲಾಗಿತ್ತು. ಟಿ20 ಹಾಲಿ ವಿಶ್ವ ಚಾಂಪಿಯನ್ ಭಾರತ ತಂಡ, ಸೂರ್ಯ ಉದಯಿಸುವ ನಾಡಿನಲ್ಲಿ ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದೆ. ಸನೋ ನಗರದಲ್ಲಿ ನಡೆದ ಪಂದ್ಯದಲ್ಲಿ ಭಾರತ ರೋಚಕ ಗೆಲುವು ದಾಖಲಿಸಿದ್ದೇ ಆದರೂ ಎಂದಿನಂತೆ ವೈಭವ್ ಸೂರ್ಯವಂಶಿಯನ್ನು ಆಡಿಸದೆ ಬೆಂಚ್​ನಲ್ಲಿ ಕೂರಿಸಿದ್ದು ಇದೀಗ ಹಲವರ ಬೇಸರಕ್ಕೆ ಕಾರಣವಾಗಿದೆ.

ಮಳೆ ಕಾರಣದಿಂದ ಕೇವಲ 5 ಓವರ್​ಗಳಿಗೆ ಸೀಮಿತವಾದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು ಜಪಾನ್ ಬೌಲರ್‌ಗಳ ದಾಳಿಗೆ ತತ್ತರಿಸಿಹೋಯಿತು. 4 ವಿಕೆಟ್ ಕಳೆದುಕೊಂಡು ಕೇವಲ 32 ರನ್‌ಗಳನ್ನು ಮಾತ್ರ ಕಲೆಹಾಕಿತು. ಜಪಾನ್ ತಂಡದ ಶಿಸ್ತಿನ ಬೌಲಿಂಗ್ ಮುಂದೆ ಭಾರತದ ಸ್ಟಾರ್ ಬ್ಯಾಟ್ಸ್‌ಮನ್‌ಗಳು ರನ್​ ಗಳಿಸಲು ಪರದಾಡಬೇಕಾಯಿತು.

ಬ್ಯಾಟಿಂಗ್ ಆರಂಭಿಸಿದ ಭಾರತದ ಪರವಾಗಿ ಆರಂಭಿಕರು ಸೇರಿದಂತೆ ಪ್ರಮುಖ ಆಟಗಾರರು ಬೇಗನೆ ಪೆವಿಲಿಯನ್‌ ಸೇರಿಕೊಂಡರು. ಅಭಿಷೇಕ್ ಶರ್ಮಾ ಯಾವುದೇ ರನ್ ಗಳಿಸದೆ ಔಟಾದರೆ, ಇಶಾನ್ ಕಿಶನ್ ಕೇವಲ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸಂಜು ಸ್ಯಾಮ್ಸನ್ 9 ರನ್ ಗಳಿಸಿ ಔಟಾದರು. ಇನ್ನು, ಶ್ರೇಯಸ್ ಅಯ್ಯರ್ ಮಾತ್ರ ಕೊಂಚ ಪ್ರತಿರೋಧ ತೋರಿ 16 ರನ್ ಗಳಿಸಿ ಔಟಾದರು. ಉಳಿದಂತೆ ಕ್ರೀಸ್‌ಗೆ ಬಂದ ತಿಲಕ್ ವರ್ಮಾ (1*) ಮತ್ತು ಶಿವಂ ದುಬೆ (0*) ರನ್ ಗಳಿಸಿ ಅಜೇಯರಾಗಿ ಉಳಿದರು.

ಜಪಾನ್ ಬೌಲರ್‌ಗಳು ಸ್ಪಿನ್ ಪಿಚ್‌ನ ಸಂಪೂರ್ಣ ಲಾಭ ಪಡೆದುಕೊಂಡು ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಜಪಾನ್ ಪರವಾಗಿ ಇಬ್ರಾಹಿಂ ತಕಾಹಶಿ ಮತ್ತು ಚಾರ್ಲಿ ಹರಾ-ಹಿಂಜೆ ಅವರು ಮಾರಕ ದಾಳಿ ನಡೆಸಿ ಭಾರತದ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಚಾರ್ಲಿ ಹರಾ-ಹಿಂಜೆ 2 ವಿಕೆಟ್ ಪಡೆದರೆ, ಇಬ್ರಾಹಿಂ ತಕಾಹಶಿ 1 ವಿಕೆಟ್ ಪಡೆದು ಭಾರತದ ರನ್ ವೇಗಕ್ಕೆ ತಡೆಹಾಕಿದರು. ಪಂದ್ಯದ ಮೊದಲ ಎಸೆತದಿಂದಲೂ ಚೆಂಡು ತಿರುವು ಪಡೆದುಕೊಳ್ಳುತ್ತಿದ್ದುದರಿಂದ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಪಿಚ್‌ನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ.

ಪಂದ್ಯ ಸೋತ ಬಳಿಕ ಮಾತನಾಡಿದ ಜಪಾನ್ ತಂಡದ ನಾಯಕ ಕೆಂಡೆಲ್ ಕಡೊವಾಕಿ-ಫ್ಲೆಮಿಂಗ್, ಇಂದಿನ ಪಂದ್ಯದಲ್ಲಿ ಯುವ ಬ್ಯಾಟರ್​ ವೈಭವ್​ ಸೂರ್ಯವಂಶಿ ಅವರನ್ನು ತಂಡದಲ್ಲಿ ನೋಡಲು ಆಗಲಿಲ್ಲ ಎಂಬುದು ಬೇಸರ ಮೂಡಿಸಿತು ಎಂದರು. ಟೀಮ್​ನ ಇತರೆ ಸದಸ್ಯರ ಪೈಕಿ ಪ್ಲೇಯಿಂಗ್​ ಎಲೆವನ್​ನಲ್ಲಿ ಸ್ಥಾನ ಪಡೆಯದ ವೈಭವ್​ ಬಗ್ಗೆ ಜಪಾನ್​ ಕ್ಯಾಪ್ಟನ್​ ಆಡಿದ ಮಾತುಗಳು ಸದ್ಯ ಬೇಬಿ ಬಾಸ್​ ಅಭಿಮಾನಿಗಳ ದಿಲ್​ ಖುಷ್​ ಆಗಿಸಿದೆ. ಮತ್ತೊಂದೆಡೆ, ತಂಡದಲ್ಲಿ ಸ್ಥಾನ ಕೊಟ್ಟಿದ್ದೇ ಆದರೂ ಯಾವ ಕಾರಣಕ್ಕೆ ವೈಭವ್​ಗೆ ಅವಕಾಶ ಕೊಡುತ್ತಿಲ್ಲ ಎಂಬ ಪ್ರಶ್ನೆಗಳು ಕ್ರಿಕೆಟ್​ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net