2004-05ರ ಗಾಬಾ ಟೆಸ್ಟ್ ಪಂದ್ಯದಲ್ಲಿ ಆಸೀಸ್ ವೇಗಿ ಜೇಸನ್ ಗಿಲೆಸ್ಪಿ ಎಸೆತದಲ್ಲಿ ಚೆಂಡು ಸಚಿನ್ ಅವರ ಪ್ಯಾಡ್ನ ಮೇಲಿನ ಭಾಗಕ್ಕೆ ಬಡಿದಿತ್ತು. ಆಗ ಬಕ್ನರ್ ಆಸೀಸ್ ಆಟಗಾರ ಮನವಿ ಪುರಸ್ಕರಿಸಿ ಔಟ್ ನೀಡಿದ್ದರು. ಆದರೆ ಬಳಿಕ ಟಿವಿ ಮರುಪ್ರಸಾರದಲ್ಲಿ ಚೆಂಡು ವಿಕೆಟ್ನಿಂದ ಮೇಲೆ ಹೋಗುವಂತಿದ್ದುದು ಸ್ಪಷ್ಟವಾಗಿ ಕಾಣಿಸಿತ್ತು.
ಇದೀಗ ವೆಸ್ಟ್ ಇಂಡೀಸ್ ಅಂಪೈರ್ಸ್ ಸಂಸ್ಥೆಯ ಸಂದರ್ಶನವೊಂದರಲ್ಲಿ ತನ್ನ ವೃತ್ತೀಜಿವನದ ಅತ್ಯಂತ ಕಠಿಣ ತೀರ್ಪಿನ ಬಗ್ಗೆ ಮಾತನಾಡಿರುವ 79 ವರ್ಷದ ಬಕ್ನರ್, "ಸಚಿನ್ ವಿರುದ್ಧ ನೀಡಿದ್ದ ಆ ಎಲ್ಬಿಡಬ್ಲ್ಯು ತೀರ್ಪು ಈಗಲೂ ನನ್ನನ್ನು ಕಾಡುತ್ತಿದೆ. ಅದೊಂದು ತಪ್ಪು ನಿರ್ಧಾರವಾಗಿತ್ತು. ಜನರು ಈಗಲೂ ಅದರ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.
ಆದರೆ ಸಚಿನ್ ವಿರುದ್ಧ ಬಕ್ನರ್ ವಿವಾದಾತ್ಮಕ ತೀರ್ಪು ನೀಡಿದ ದೃಷ್ಟಾಂತ ಅದೊಂದೇ ಆಗಿರಲಿಲ್ಲ. 2005ರ ಈಡನ್ ಗಾರ್ಡನ್ಸ್ ಟೆಸ್ಟ್ನಲ್ಲೂ ಪಾಕ್ ಆಲ್ರೌಂಡರ್ ಅಬ್ದುಲ್ ರಜಾಕ್ ಎಸೆತದಲ್ಲಿ ಬಕ್ನರ್, ಸಚಿನ್ ವಿರುದ್ಧ ತಪ್ಪಾದ ಕಾಟ್ ಬಿಹೈಂಡ್ ತೀರ್ಪು ನೀಡಿದ್ದರು. ಆಗ ಟಿವಿ ಮರುಪ್ರಸಾರದಲ್ಲಿ ಬ್ಯಾಟ್ಅನ್ನು ಚೆಂಡು ಸ್ಪರ್ಶಿಸದೆ ಇದ್ದುದು ಸ್ಪಷ್ಟವಾಗಿತ್ತು. ಬಕ್ನರ್ 1989ರಿಂದ 2009ರ ನಡುವೆ 128 ಟೆಸ್ಟ್ಗಳಲ್ಲಿ ಮತ್ತು ಸತತ 5 ಏಕದಿನ ವಿಶ್ವಕಪ್ ಫೈನಲ್ಗಳಲ್ಲಿ ಅಂಪೈರ್ (umpire) ಆಗಿ ಕಾರ್ಯನಿರ್ವಹಿಸಿದ್ದರು.