ನ್ಯೂಜಿಲೆಂಡ್​ ವಿರುದ್ಧ ಏಕದಿನ ಸರಣಿಗೆ ರಿಷಭ್​ ಪಂತ್​ ಬದಲು ಇಶಾನ್​ ಕಿಶನ್​?

ನ್ಯೂಜಿಲೆಂಡ್​ ವಿರುದ್ಧ ಏಕದಿನ ಸರಣಿಗೆ ರಿಷಭ್​ ಪಂತ್​ ಬದಲು ಇಶಾನ್​ ಕಿಶನ್​?
ನ್ಯೂಜಿಲೆಂಡ್​ ವಿರುದ್ಧ ಏಕದಿನ ಸರಣಿಗೆ ರಿಷಭ್​ ಪಂತ್​ ಬದಲು ಇಶಾನ್​ ಕಿಶನ್​?
Published on
ನವದೆಹಲಿ: ದೇಶೀಯ ಕ್ರಿಕೆಟ್​ನಲ್ಲಿ ರನ್​ಮಳೆ ಹರಿಸುವ ಮೂಲಕ ರಾಷ್ಟ್ರೀಯ ಟಿ20 ತಂಡಕ್ಕೆ ಮರಳಿರುವ ವಿಕೆಟ್​ ಕೀಪರ್​-ಬ್ಯಾಟರ್​ ಇಶಾನ್​ ಕಿಶನ್​ (Ishan kishan) ಮುಂಬರುವ ಪ್ರವಾಸಿ ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಗೂ ಭಾರತ ತಂಡದಲ್ಲಿ (Team India) ಸ್ಥಾನ ಸಂಪಾದಿಸುವ ಸಾಧ್ಯತೆಗಳಿವೆ. ರಿಷಭ್​ ಪಂತ್ (rishabh pant)​ ಬದಲಿಗೆ ಕಿಶನ್​ಗೆ ಅವಕಾಶ ಒಲಿಯುವ ನಿರೀಕ್ಷೆ ಇದೆ.

ಭಾರತ ಏಕದಿನ ತಂಡದಲ್ಲಿ ಸದ್ಯ ಕನ್ನಡಿಗ ಕೆಎಲ್​ ರಾಹುಲ್​ ಮೊದಲ ಆದ್ಯತೆಯ ವಿಕೆಟ್​ ಕೀಪರ್​ ಆಗಿದ್ದಾರೆ. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಪಂತ್​ ಭಾರತ ತಂಡದಲ್ಲಿದ್ದರೂ ಆಡುವ ಅವಕಾಶ ಪಡೆದಿರಲಿಲ್ಲ. ಅವರು 2024ರ ಆಗಸ್ಟ್​ 7ರಂದು ಶ್ರೀಲಂಕಾ ವಿರುದ್ಧ ಕೊನೆಯದಾಗಿ ಭಾರತ ಪರ ಏಕದಿನ ಪಂದ್ಯವೊಂದನ್ನು ಆಡಿದ್ದರು.

ಇನ್ನು ಕಿಶನ್​ 2023ರ ತವರಿನ ವಿಶ್ವಕಪ್​ನಲ್ಲಿ ಕೊನೆಯದಾಗಿ ಅಫ್ಘಾನಿಸ್ತಾನ ವಿರುದ್ಧ ಏಕದಿನ ಪಂದ್ಯವೊಂದನ್ನು ಆಡಿದ್ದರು. ಗಿಲ್​ ಅನಾರೋಗ್ಯದಿಂದಾಗಿ ವಿಶ್ವಕಪ್​ನ ಮೊದಲೆರಡು ಪಂದ್ಯ ತಪ್ಪಿಸಿಕೊಂಡಾಗ ಕಿಶನ್​ ಆರಂಭಿಕರಾಗಿ ಆಡುವ ಅವಕಾಶ ಪಡೆದಿದ್ದರು. ಇತ್ತೀಚೆಗೆ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ಜಾರ್ಖಂಡ್​ ಪರ ಮಿಂಚಿದ ಬಳಿಕ ವಿಜಯ್​ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲೂ ಕಿಶನ್​ ಭರ್ಜರಿ ಫಾರ್ಮ್​ ಮುಂದುವರಿಸಿದ್ದಾರೆ.
ಟಿ20 ವಿಶ್ವಕಪ್​ಗೆ ಪೂರ್ವಭಾವಿಯಾಗಿ ಆಯ್ಕೆಗಾರರು ಕಿಶನ್​ಗೆ ವಿಶ್ರಾಂತಿ ನೀಡಲು ಬಯಸಿದರೆ, ಮೀಸಲು ವಿಕೆಟ್​ ಕೀಪರ್​ ಸ್ಥಾನಕ್ಕೆ ಜಿತೇಶ್​ ಶರ್ಮ ಆಯ್ಕೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಜಿತೇಶ್​ ಇತ್ತೀಚೆಗೆ ಟಿ20 ವಿಶ್ವಕಪ್​ಗೆ ಭಾರತ ತಂಡದಲ್ಲಿ ಸ್ಥಾನ ವಂಚಿತರಾಗಿದ್ದರು. ನ್ಯೂಜಿಲೆಂಡ್​ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಜನವರಿ 11ರಿಂದ ನಡೆಯಲಿದ್ದು, ಜನವರಿ 3 ಅಥವಾ 4ಕ್ಕೆ ಭಾರತ ತಂಡ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಈಗಾಗಲೆ ಟಿ20 ವಿಶ್ವಕಪ್​ಗೂ ಕಡೆಗಣಿಸಲ್ಪಟ್ಟಿರುವ ರಿಷಭ್​ ಪಂತ್​, ಏಕದಿನ ತಂಡದಿಂದಲೂ ಹೊರಬಿದ್ದರೆ ಟೆಸ್ಟ್​ ಕ್ರಿಕೆಟ್​ ಸೀಮಿತವಾಗಲಿದ್ದಾರೆ. ಟೆಸ್ಟ್​ ತಂಡದಲ್ಲಿ ಅವರು ಉಪನಾಯಕರಾಗಿರುವುದರಿಂದ ಸ್ಥಾನ ಭದ್ರವೆನಿಸಿದೆ.
ಶ್ರೇಯಸ್​ ವಾಪಸ್​ ನಿರೀಕ್ಷೆ
ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಗೆ ಉಪನಾಯಕ ಶ್ರೇಯಸ್​ ಅಯ್ಯರ್​ ಫಿಟ್​ ಆಗುವ ನಿರೀಕ್ಷೆ ಹರಡಿದೆ. ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ (ಸಿಒಇ) ಶ್ರೇಯಸ್​ ಈಗಾಗಲೆ ಅಭ್ಯಾಸ ಆರಂಭಿಸಿದ್ದು, ಡಿಸೆಂಬರ್​ 30ರವರೆಗೂ ಅಲ್ಲಿ ಇರಲಿದ್ದಾರೆ. ನಂತರ ಜನವರಿ 2ರಂದು ಜೈಪುರಕ್ಕೆ ತೆರಳಿ ಜನವರಿ 3 ಮತ್ತು 6ರಂದು ವಿಜಯ್​ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ 2 ಪಂದ್ಯ ಆಡುವ ನಿರೀಕ್ಷೆ ಇದೆ. ಶ್ರೇಯಸ್​ ಫಿಟ್ನೆಸ್​ ಬಗ್ಗೆ ಇದುವರೆಗೆ ಸಕಾರಾತ್ಮಕ ವರದಿಗಳು ಬಂದಿದ್ದು, ಸಿಒಇನಿಂದ ಹಸಿರು ನಿಶಾನೆ ಸಿಕ್ಕರೆ ಮರಳಿ ಕಣಕ್ಕಿಳಿಯಲಿದ್ದಾರೆ. ಸದ್ಯ ನೆಟ್ಸ್​ನಲ್ಲಿ ಯಾವುದೇ ತೊಂದರೆ ಇಲ್ಲದೆ ಉತ್ತಮ ಬ್ಯಾಟಿಂಗ್​ ಪ್ರದರ್ಶಿಸುತ್ತಿದ್ದಾರೆ ಎಂದು ಮುಂಬೈ ಕ್ರಿಕೆಟ್​ ಸಂಸ್ಥೆ ಮೂಲಗಳು ತಿಳಿಸಿವೆ. ಶ್ರೇಯಸ್​ ಏಕದಿನ ತಂಡಕ್ಕೆ ಮರಳದಿದ್ದರೆ ಋತುರಾಜ್​ ಗಾಯಕ್ವಾಡ್​ ಕಿವೀಸ್​ ವಿರುದ್ಧ ಸರಣಿಗೂ ಸ್ಥಾನ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net