ಮುಗಿದು ಹೋಯ್ತಾ ಶಮಿ ಕ್ರಿಕೆಟ್​ ಕೆರಿಯರ್​? BCCI ಮುಂದಿದೆ ಈ ಮೆಗಾ ಪ್ಲಾನ್, ಶಮಿ ಮತ್ತೆ ನೀಲಿ ಜರ್ಸಿ ಧರಿಸೋದು ಡೌಟು! Mohammed Shami

ಟೀಮ್​ ಇಂಡಿಯಾ ಬೌಲರ್​ ಮೊಹಮ್ಮದ್ ಶಮಿ
ಟೀಮ್​ ಇಂಡಿಯಾ ಬೌಲರ್​ ಮೊಹಮ್ಮದ್ ಶಮಿ
Published on

ಪ್ರಮುಖ ಮುಖ್ಯಾಂಶಗಳು

  • ಮೊಹಮ್ಮದ್ ಶಮಿ ಟೀಮ್​ ಇಂಡಿಯಾದ ಶ್ರೇಷ್ಠ ಬೌಲರ್​ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ
  • ತಮ್ಮ ವೇಗದ ಬೌಲಿಂಗ್‌ ಪ್ರತಿಭೆಯಿಂದ ವಿಶ್ವ ಕ್ರಿಕೆಟ್​ನಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ
  • ಏಕದಿನ ವಿಶ್ವಕಪ್‌ಗಳಲ್ಲಿ ಟೀಮ್​ ಇಂಡಿಯಾಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಕೀರ್ತಿ ಗಳಿಸಿದ್ದಾರೆ
  • ಆದರೆ, ಬಿಸಿಸಿಐ ಆಯ್ಕೆದಾರರು ಮಾತ್ರ ಶಮಿಯನ್ನು ಕಡೆಗಣಿಸುತ್ತಲೇ ಇದಾರೆ
ನವದೆಹಲಿ: ಮೊಹಮ್ಮದ್ ಶಮಿ ( Mohammed Shami ) ಟೀಮ್​ ಇಂಡಿಯಾದ ಶ್ರೇಷ್ಠ ಬೌಲರ್​ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಸಾಹಸಪುರ್​ ಅಲಿನಗರ ಎಂಬ ಸಣ್ಣ ಹಳ್ಳಿಯಿಂದ ಬಂದು, ತಮ್ಮ ವೇಗದ ಬೌಲಿಂಗ್‌ ಪ್ರತಿಭೆಯಿಂದ ವಿಶ್ವ ಕ್ರಿಕೆಟ್​ನಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಏಕದಿನ ವಿಶ್ವಕಪ್‌ಗಳಲ್ಲಿ ಟೀಮ್​ ಇಂಡಿಯಾಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಕೀರ್ತಿ ಗಳಿಸಿದ್ದಾರೆ.
ಪ್ರಸ್ತುತ ರಣಜಿಯಲ್ಲಿ ಬಂಗಾಳದ ಪರ ಆಡುತ್ತಿರುವ ಶಮಿ, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್​ ಪ್ರಯಣದಲ್ಲಿ ವಿಶೇಷ ದಾಖಲೆಗಳ ಮುದ್ರೆ ಒತ್ತಿದ್ದಾರೆ. ಕೇವಲ 108 ಏಕದಿನ ಪಂದ್ಯಗಳಲ್ಲಿ 200 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪುವ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಏಕದಿನ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಅತ್ಯಂತ ವೇಗದ ಭಾರತೀಯ ಬೌಲರ್ ಶಮಿ ಆಗಿದ್ದಾರೆ.
ತವರಿನಲ್ಲಿ 2023ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್​ವರೆಗೆ ಒಂದೂ ಪಂದ್ಯವನ್ನು ಸೋಲದ ಭಾರತ, ಫೈನಲ್​ ಪಂದ್ಯದಲ್ಲಿ ಮುಗ್ಗರಿಸಿತು. ಈ ಮೆಗಾ ಟೂರ್ನಿಯಲ್ಲಿ ಶಮಿ ಅವರ ಬೌಲಿಂಗ್ ಪ್ರದರ್ಶನವನ್ನು ಯಾವುದೇ ಕ್ರಿಕೆಟ್ ಅಭಿಮಾನಿ ಎಂದಿಗೂ ಮರೆಯುವುದಿಲ್ಲ. ಶಮಿ ಅವರು ಕೇವಲ 7 ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟೂರ್ನಮೆಂಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆದರು. ಇಷ್ಟೇ ಅಲ್ಲದೆ, 2025ರ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿಯೂ ಶಮಿ ತಮ್ಮ ಪಾತ್ರವನ್ನು ನಿರ್ವಹಿಸಿದರು. ಅಂತಹ ಶಮಿ ಈಗ ರಾಷ್ಟ್ರೀಯ ತಂಡಕ್ಕೆ ಮತ್ತೆ ಪ್ರವೇಶಿಸಲು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಬಿಸಿಸಿಐ ಆಯ್ಕೆದಾರರು ಮಾತ್ರ ಶಮಿಯನ್ನು ಕಡೆಗಣಿಸುತ್ತಲೇ ಇದಾರೆ.

ಮುಗಿದು ಹೋಯ್ತಾ ಶಮಿ ವೃತ್ತಿಜೀವನ?

ಕಳೆದ ವರ್ಷ ಮಾರ್ಚ್‌ನಿಂದ ಮೊಹಮ್ಮದ್ ಶಮಿ ರಾಷ್ಟ್ರೀಯ ತಂಡದಿಂದ ದೂರವಿದ್ದಾರೆ. ಆದಾಗ್ಯೂ, ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಶಮಿ ಮುಂದುವರಿಸಿದ್ದಾರೆ. ಆದರೂ, ಆಯ್ಕೆದಾರರು ಶಮಿ ಅವರನ್ನು ಪರಿಗಣಿಸುತ್ತಿಲ್ಲ. ಹೀಗಾಗಿ ಆಯ್ಕೆದಾರರ ವಿರುದ್ಧ ದೇಶದೆಲ್ಲೆಡೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಹೀಗಿರುವಾಗ, ಜನವರಿ 11 ರಿಂದ ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಶಮಿ ಆಯ್ಕೆಯಾಗುತ್ತಾರೆ ಎಂಬ ಭರವಸೆ ಇತ್ತು. ಆದರೆ, ಆ ಭರವಸೆ ಇದೀಗ ಸುಳ್ಳಾಗಿದೆ.
ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಮತ್ತೊಮ್ಮೆ ಶಮಿ ಅವರ ಮೇಲೆ ತಮ್ಮ ಹಠಮಾರಿ ಧೋರಣೆ ತೋರಿಸಿದೆ. ಕಿವೀಸ್ ಸರಣಿಗೆ ಇತ್ತೀಚೆಗೆ ಭಾರತ ತಂಡವನ್ನು ಪ್ರಕಟಿಸಲಾಯಿತು. ಆದರೆ, ಆಯ್ಕೆ ಸಮಿತಿ ಶಮಿ ಅವರ ಹೆಸರನ್ನು ಮತ್ತೆ ಕೈಬಿಟ್ಟಿದೆ. ಏಕೆ ಎಂದು ಪ್ರಶ್ನೆ ಮಾಡಿದರೆ, ಶಮಿ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರೂ, ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಗತ್ಯವಿರುವ ಅತ್ಯುನ್ನತ ಫಿಟ್‌ನೆಸ್ ಮಟ್ಟವನ್ನು ತಲುಪಿಲ್ಲ ಎಂಬ ಉತ್ತರ ಬರುತ್ತಿದೆ. ಆದರೆ, ಶಮಿ ಅವರು ತಾನು ಫಿಟ್​ ಆಗಿದ್ದೇನೆ ಎಂದು ಹೇಳಿಕೊಂಡು ಬರುತ್ತಲೇ ಇದಾರೆ.
ಇನ್ನು ಬಿಸಿಸಿಐ ಮೂಲಗಳು ಬಹಿರಂಗಪಡಿಸಿರುವ ಮಾಹಿತಿ ಪ್ರಕಾರ, ಗಾಯದ ನಂತರ ಶಮಿ ಅವರ ಬೌಲಿಂಗ್ ವೇಗ ಕಡಿಮೆಯಾಗಿದೆಯಂತೆ. ಅಲ್ಲದೆ, ಶಮಿ ಅವರು ತಮ್ಮ ಸೀಮ್ ಸ್ಥಾನವನ್ನು ಮಾತ್ರ ಅವಲಂಬಿಸಿದ್ದಾರಂತೆ. ಹೀಗಾಗಿ, ಬಿಸಿಸಿಐ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ಪ್ರಸಿದ್ಧ ಕೃಷ್ಣ ಅವರಂತಹ ಯುವ ವೇಗಿಗಳನ್ನು 2027ರ ಏಕದಿನ ವಿಶ್ವಕಪ್‌ಗೆ ಸಿದ್ಧಪಡಿಸಲು ಪ್ರಯತ್ನಿಸುತ್ತಿದೆ ಎಂಬುದು ಕ್ರಿಕೆಟ್ ತಜ್ಞರು ಅಭಿಪ್ರಾಯವಾಗಿದೆ.

ಅಗರ್ಕರ್ ವಿರುದ್ಧ ಟೀಕೆ

ಸೆಂಟರ್ ಆಫ್ ಎಕ್ಸಲೆನ್ಸ್ ವೈದ್ಯಕೀಯ ತಂಡ ಅನುಮತಿ ನೀಡಿದ್ದರೂ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್​, ಶಮಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂಬ ಟೀಕೆಗಳಿವೆ. ಈ ಬಗ್ಗೆ ಶಮಿ ಅವರು ಬಹಿರಂಗವಾಗೇ ಅಸಮಾಧಾನ ಹೊರಹಾಕಿದ್ದಾರೆ. ದೇಶೀಯ ಕ್ರಿಕೆಟ್ ಆಡುವ ಯಾರಾದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ಸಾಧ್ಯವಿಲ್ಲವೇ ಎಂದು ಶಮಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಅಗರ್ಕರ್, ಫಿಟ್ನೆಸ್ ಸಮಸ್ಯೆಗಳಿಂದಾಗಿ ಅವರನ್ನು ತೆಗೆದುಕೊಳ್ಳಲಾಗುತ್ತಿಲ್ಲ ಎಂದರು.

ದೇಶೀಯ ಕ್ರಿಕೆಟ್ ಅವ್ಯವಸ್ಥೆ

ಶಮಿ ಪ್ರಸ್ತುತ ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ. 2025-26ರ ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಅವರು ಸೈಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲು ಸಹ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಸೀಸನ್​ನಲ್ಲಿ ಇದುವರೆಗೆ ಸುಮಾರು 45 ವಿಕೆಟ್‌ಗಳನ್ನು ಪಡೆಯುವ ಮೂಲಕ ಶಮಿ ಅವರು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ.

ಕಿವೀಸ್ ವಿರುದ್ಧದ ಏಕದಿನ ಪಂದ್ಯಗಳಿಗೆ ಭಾರತ ತಂಡ

ಶುಭಮಾನ್ ಗಿಲ್ (ನಾಯಕ), ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ಫಿಟ್‌ನೆಸ್‌ಗೆ ಒಳಪಟ್ಟಿರುತ್ತಾರೆ), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ ಕೃಷ್ಣ, ಕುಲದೀಪ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಯಶಸ್ವಿ ಜೈಸ್ವಾಲ್ ಹಾಗೂ ಅರ್ಷದೀಪ್ ಸಿಂಗ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net