ಬೆಲ್ಜಿಯಂ ಎದುರು ಅಂಕ ಹಂಚಿಕೊಂಡ ಇರಾನ್: ಅಮೆರಿಕಕ್ಕೆ ಶಾಂತಿಯ ಸಂದೇಶ
ಬೆಲ್ಜಿಯಂ ಎದುರು ಅಂಕ ಹಂಚಿಕೊಂಡ ಇರಾನ್: ಅಮೆರಿಕಕ್ಕೆ ಶಾಂತಿಯ ಸಂದೇಶ
Published on:
Copied
Follow Us
ಲಾಸ್ ಏಂಜಲೀಸ್: ಗೋಲು ಕೀಪರ್ ಅಲಿರೆಜಾ ಬೀರನ್‌ವಾಂಡ್ ಏಳು ಗೋಲುಗಳನ್ನು ಸೇವ್ ಮಾಡಿದ ಬಲದಿಂದ ಇರಾನ್ ತಂಡ ಫಿಫಾ ವಿಶ್ವಕಪ್ 23ನೇ ಆವೃತ್ತಿಯಲ್ಲಿ ರೆಡ್ ಡೆವಿಲ್ಸ್ ಖ್ಯಾತಿಯ ಬೆಲ್ಜಿಯಂ ವಿರುದ್ಧ ಗೋಲು ರಹಿತ ಡ್ರಾ ಸಾಧಿಸಿ ಅಂಕ ಹಂಚಿಕೊಂಡಿದೆ. ಬೆಲ್ಜಿಯಂ ತಂಡ ಪಂದ್ಯದ ಕೊನೆಯ ಸುಮಾರು ಅರ್ಧಗಂಟೆ ಕಾಲ 10 ಆಟಗಾರರೊಂದಿಗೆ ಆಡಿದರೂ, ಸೋಲಿನ ಅಪಾಯದಿಂದ ಪಾರಾಯಿತು. ಟೂರ್ನಿಯ ಮೊದಲ ಪಂದ್ಯದಲ್ಲೂ ಡ್ರಾಕ್ಕೆ ತೃಪ್ತಿಪಟ್ಟಿದ್ದ ಉಭಯ ತಂಡಗಳು ಜಿ ಗುಂಪಿನಿಂದ ನಾಕೌಟ್ ಹಂತಕ್ಕೇರುವ ಆಸೆ ಜೀವಂತ ಉಳಿಸಿಕೊಂಡಿವೆ.
ಬೆಲ್ಜಿಯಂ ಡಿೆಂಡರ್ ನಾಥನ್ ಎನ್‌ಗೋಯ್ ಪಂದ್ಯದ 66ನೇ ನಿಮಿಷದಲ್ಲಿ ರೆಡ್ ಕಾರ್ಡ್ ಪಡೆದು ಹೊರನಡೆದರು. ಚೆಂಡನ್ನು ಹಿಮ್ಮುಖವಾಗಿ ತಪ್ಪಾಗಿ ಒದ್ದ ಅವರು, ನಂತರ ಇರಾನ್ ಆಟಗಾರ ಮೆಹದಿ ತರೇಮಿ ಗೋಲು ಗಳಿಸುವುದನ್ನು ತಡೆಯಲು ಫೌಲ್ ಮಾಡಿದ ತಪ್ಪಿಗೆ ರೆಡ್‌ಕಾರ್ಡ್ ಪಡೆದರು. ಆದರೆ ಇದರ ಲಾಭವೆತ್ತಲು ಇರಾನ್ ಸಲವಾಗಲಿಲ್ಲ.
ಸಹ-ಆತಿಥೇಯ ಅಮೆರಿಕದ ಜತೆಗಿನ ಯುದ್ಧದಿಂದಾಗಿ ಪ್ರಯಾಣ ನಿರ್ಬಂಧ ಮತ್ತು ವೀಸಾ ಸಮಸ್ಯೆಗಳನ್ನು ಎದುರಿಸಿರುವ ಇರಾನ್, ಫಿಫಾ ರ‌್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ಬೆಲ್ಜಿಯಂ ವಿರುದ್ಧ ಗೆಲುವಿನ ಅತ್ಯುತ್ತಮ ಅವಕಾಶ ಪಡೆದಿದ್ದರೂ, ಅದನ್ನು ಕೈಚೆಲ್ಲಿತು.
ರೋಮೆಲು ಲುಕಾಕು, ಕೆವಿನ್ ಡಿ ಬ್ರುಯ್ನ ಮುಂತಾದ ತಾರಾ ಆಟಗಾರರಿರುವ ಬೆಲ್ಜಿಯಂ ತಂಡ ಟೂರ್ನಿಯಲ್ಲಿ ಇನ್ನೂ ಗೋಲು ಬಾರಿಸಿಲ್ಲ. ಮೊದಲ ಪಂದ್ಯದಲ್ಲಿ ಈಜಿಪ್ಟ್‌ನ ಸ್ವಗೋಲಿನಿಂದಾಗಿ ಬೆಲ್ಜಿಯಂ ಡ್ರಾ ಸಾಧಿಸಿತ್ತು.
2: ಇರಾನ್ ತಂಡ ಫಿಫಾ ವಿಶ್ವಕಪ್‌ನ ಆರಂಭಿಕ 2 ಪಂದ್ಯಗಳಲ್ಲೂ ಸೋಲು ಕಾಣದಿರುವುದು ಇದೇ ಮೊದಲಾಗಿದೆ. ಬೆಲ್ಜಿಯಂ 2002ರ ನಂತರ ಮೊದಲ ಸಲ ಆರಂಭಿಕ 2 ಪಂದ್ಯಗಳಲ್ಲಿ ಗೆಲ್ಲಲು ವಿಲವಾಗಿದೆ.
406: ಬೆಲ್ಜಿಯಂ ಫಿಫಾ ವಿಶ್ವಕಪ್‌ನಲ್ಲಿ ಕಳೆದ 406 ನಿಮಿಷಗಳ ಆಟದಲ್ಲಿ ಗೋಲು ಸಿಡಿಸಲು ವಿಲವಾಗಿದೆ. 2022ರಲ್ಲಿ ಕೆನಡಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಬೆಲ್ಜಿಯಂನ ಕೊನೇ ಗೋಲು ದಾಖಲಾಗಿದೆ.
ಅಮೆರಿಕಕ್ಕೆ ಇರಾನ್ ಶಾಂತಿಯ ಸಂದೇಶ
‘ನಾವು ಹೆಮ್ಮಯಿಂದ ಲಾಸ್ ಏಂಜಲೀಸ್‌ಗೆ ಬಂದೆವು. ಗೌರವದಿಂದ ಸ್ಪರ್ಧಿಸಿದೆವು ಮತ್ತು ಘನತೆಯಿಂದ ಹೊರನಡೆದೆವು. ಥ್ಯಾಂಕ್ ಯೂ ಲಾಸ್ ಏಂಜಲೀಸ್ ನಿಮ್ಮ ಆತಿಥ್ಯಕ್ಕೆ. ಎಲ್ಲ ರಾಷ್ಟ್ರಗಳಲ್ಲಿ ಶಾಂತಿ, ಗೌರವ ಮತ್ತು ಸ್ನೇಹ ಮೇಲುಗೈ ಸಾಧಿಸಲಿ’ ಎಂದು ಇರಾನ್ ತಂಡ ಲಾಸ್ ಏಂಜಲೀಸ್‌ನಲ್ಲಿ ತನ್ನ ಆರಂಭಿಕ 2 ಲೀಗ್ ಪಂದ್ಯಗಳನ್ನು ಆಡಿದ ಬಳಿಕ ಡ್ರೆಸ್ಸಿಂಗ್ ರೂಮ್‌ನಲ್ಲಿ ಕೈಯಿಂದ ಬರೆದ ಸಂದೇಶದ ಪತ್ರವೊಂದನ್ನು ಬಿಟ್ಟುಹೋಗಿದೆ. ಈ ಮೂಲಕ ಇರಾನ್ ಫುಟ್‌ಬಾಲ್ ತಂಡ ಅಮೆರಿಕಕ್ಕೆ ಶಾಂತಿಯ ಸಂದೇಶ ರವಾನಿಸಿದೆ.
ಇರಾನ್ ತನ್ನ ಕೊನೇ ಪಂದ್ಯವನ್ನು ಅಮೆರಿಕದ ಸಿಯಾಟಲ್‌ನಲ್ಲಿ ಆಡಲಿದೆ. ನೆರೆಯ ಮೆಕ್ಸಿಕೋದ ಶಿಬಿರದಲ್ಲಿ ಉಳಿದುಕೊಂಡಿರುವ ಇರಾನ್ ತಂಡ, ತನ್ನ ಪಂದ್ಯಕ್ಕೆ ಕೆಲವೇ ಗಂಟೆ ಮೊದಲಷ್ಟೇ ಲಾಸ್ ಏಂಜಲೀಸ್‌ಗೆ ಆಗಮಿಸಲು ಅನುಮತಿ ಹೊಂದಿತ್ತು. ಜತೆಗೆ ಪಂದ್ಯ ಮುಗಿದ ಕೆಲವೇ ಗಂಟೆಗಳಲ್ಲಿ ಅಮೆರಿಕವನ್ನು ತೊರೆಯಬೇಕಾಗಿದೆ.