ಐಪಿಎಲ್​ ಆಟಗಾರರ ರಿಟೇನ್​ ಪಟ್ಟಿ ಇಂದು ಪ್ರಕಟ: ವೆಂಕಟೇಶ್​ ಅಯ್ಯರ್​, ಮ್ಯಾಕ್ಸ್​ವೆಲ್​ ರಿಲೀಸ್​ ನಿರೀಕ್ಷೆ

ಐಪಿಎಲ್​ ಆಟಗಾರರ ರಿಟೇನ್​ ಪಟ್ಟಿ ಇಂದು ಪ್ರಕಟ: ವೆಂಕಟೇಶ್​ ಅಯ್ಯರ್​, ಮ್ಯಾಕ್ಸ್​ವೆಲ್​ ರಿಲೀಸ್​ ನಿರೀಕ್ಷೆ
ಐಪಿಎಲ್​ ಆಟಗಾರರ ರಿಟೇನ್​ ಪಟ್ಟಿ ಇಂದು ಪ್ರಕಟ: ವೆಂಕಟೇಶ್​ ಅಯ್ಯರ್​, ಮ್ಯಾಕ್ಸ್​ವೆಲ್​ ರಿಲೀಸ್​ ನಿರೀಕ್ಷೆ
Published on
ಬೆಂಗಳೂರು: ಮುಂದಿನ ವರ್ಷದ ಐಪಿಎಲ್​ 19ನೇ ಆವೃತ್ತಿಯ (IPL cricket) ಆಟಗಾರರ ಮಿನಿ ಹರಾಜು (MINI auction) ಪ್ರಕ್ರಿಯೆಗೆ ಪೂರ್ವಭಾವಿಯಾಗಿ ಎಲ್ಲ 10 ತಂಡಗಳು ಆಟಗಾರರ ರಿಟೇನ್​ (retain) ಪಟ್ಟಿಯನ್ನು ಸಲ್ಲಿಸಲು ಶನಿವಾರ ಅಂತಿಮ ದಿನವಾಗಿದೆ. ಸಂಜೆ 5 ಗಂಟೆಯ ನಂತರ ಎಲ್ಲ ತಂಡಗಳ ಆಟಗಾರರ ರಿಟೇನ್​ ಮತ್ತು ರಿಲೀಸ್​ ಪಟ್ಟಿ ಬಿಡುಗಡೆಯಾಗಲಿದೆ. ಜತೆಗೆ ಕೆಲ ಆಟಗಾರರ ವರ್ಗಾವಣೆಯೂ ಅಧಿಕೃತವಾಗಿ ಪ್ರಕಟವಾಗುವ ನಿರೀಕ್ಷೆ ಇದೆ.ಮಿನಿ ಹರಾಜಿನ ಕಾರಣ ಈ ಬಾರಿ ಹೆಚ್ಚಿನ ಸ್ಟಾರ್​ ಆಟಗಾರರು ತಂಡಗಳಿಂದ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಆದರೆ ಕಳೆದ ಆವೃತ್ತಿಯಲ್ಲಿ ನಿರೀಕ್ಷೆಗೆ ತಕ್ಕ ನಿರ್ವಹಣೆ ತೋರದ ಕೆಲ ಸ್ಟಾರ್​ ಮತ್ತು ಅನುಭವಿ-ಯುವ ಆಟಗಾರರು ಈ ಬಾರಿ ರಿಲೀಸ್​ ಆಗುವ ನಿರೀಕ್ಷೆ ಇದೆ. 
ರಿಟೇನ್​ ನಿಯಮವೇನು?: ಈ ಬಾರಿ ಮೆಗಾ ಹರಾಜು ಇರಲ್ಲ. ಮಿನಿ ಹರಾಜು ಮಾತ್ರ ನಡೆಯಲಿದೆ. ಹೀಗಾಗಿ ಎಲ್ಲ 10 ತಂಡಗಳಿಗೆ ಇಂತಿಷ್ಟೇ ಆಟಗಾರರನ್ನು ರಿಟೇನ್​ ಮಾಡಬೇಕು ಅಥವಾ ಇಷ್ಟು ಆಟಗಾರರನ್ನು ರಿಲೀಸ್​ ಮಾಡಬೇಕೆಂಬ ಇತಿಮಿತಿಗಳಿಲ್ಲ. ಐಪಿಎಲ್​ ನಿಯಮ ಪ್ರಕಾರ ತಂಡವೊಂದು ಗರಿಷ್ಠ 25 ಆಟಗಾರರನ್ನು ಹೊಂದಬಹುದು ಮತ್ತು ಇದಕ್ಕೆ ಒಟ್ಟಾರೆ ಗರಿಷ್ಠ 120 ಕೋಟಿ ರೂ. ವ್ಯಯಿಸಬಹುದಾಗಿದೆ. ಇದರಲ್ಲಿ ಆಟಗಾರರ ರಿಟೇನ್​ಗೆ ವ್ಯಯಿಸುವ ಹಣವು, ಒಟ್ಟು ಮೊತ್ತದಿಂದ ಕಡಿತವಾಗಲಿದ್ದು, ಆ ಬಾಕಿ ಹಣವನ್ನು ಹರಾಜಿನಲ್ಲಿ ಆಟಗಾರರ ಖರೀದಿಗೆ ಬಳಸಿಕೊಳ್ಳಬಹುದು.
ಪ್ರಮುಖ ರಿಲೀಸ್​ ಸಾಧ್ಯತೆ (ರೂಪಾಯಿಗಳಲ್ಲಿ)
ವೆಂಕಟೇಶ್​ ಅಯ್ಯರ್​ (ಕೆಕೆಆರ್​, 23.75 ಕೋಟಿ), ದೀಪಕ್​ ಚಹರ್​ (ಮುಂಬೈ, 9.25 ಕೋಟಿ), ರವಿ ಬಿಷ್ಣೋಯಿ (ಲಖನೌ, 11 ಕೋಟಿ), ಡೇವಿಡ್​ ಮಿಲ್ಲರ್​ (ಲಖನೌ, 7.5 ಕೋಟಿ), ಅನ್ರಿಚ್​ ನೋಕಿಯಾ (ಕೆಕೆಆರ್​, 6.5 ಕೋಟಿ), ಲಿಯಾಮ್​ ಲಿವಿಂಗ್​ಸ್ಟೋನ್​ (ಆರ್​ಸಿಬಿ, 8.75 ಕೋಟಿ), ಗ್ಲೆನ್​ ಮ್ಯಾಕ್ಸ್​ವೆಲ್​ (ಪಂಜಾಬ್​, 4.20 ಕೋಟಿ), ವಿಲ್​ ಜಾಕ್ಸ್​ (ಮುಂಬೈ, 5.25 ಕೋಟಿ), ಜೇಕ್​ ಫ್ರೇಸರ್​ ಮೆಕ್​ಗುರ್ಕ್​ (ಡೆಲ್ಲಿ, 9 ಕೋಟಿ), ಕ್ವಿಂಟನ್​ ಡಿಕಾಕ್​ (ಕೆಕೆಆರ್​, 3.6 ಕೋಟಿ), ಮಹೀಶ್​ ತೀಕ್ಷಣ (ರಾಜಸ್ಥಾನ, 4.40 ಕೋಟಿ), ಡೆವೊನ್​ ಕಾನ್​ವೇ (ಸಿಎಸ್​ಕೆ, 6.25 ಕೋಟಿ), ರಚಿನ್​ ರವೀಂದ್ರ (ಸಿಎಸ್​ಕೆ, 4 ಕೋಟಿ), ಕರುಣ್​ ನಾಯರ್​ (ಡೆಲ್ಲಿ, 50 ಲಕ್ಷ), ಮಯಾಂಕ್​ ಅಗರ್ವಾಲ್​ (ಆರ್​ಸಿಬಿ, 1 ಕೋಟಿ).
ಐಪಿಎಲ್​ ರಿಟೇನ್​ ಪ್ರಕಟ
ಆರಂಭ: ಸಂಜೆ 5.00
ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.
ಡಿ.16ಕ್ಕೆ ಮಿನಿ ಹರಾಜು
ತಂಡಗಳಿಂದ ರಿಲೀಸ್​ ಆಗುವ ಮತ್ತು ಹರಾಜಿಗೆ ಹೆಸರು ನೋಂದಾಯಿಸಿಕೊಳ್ಳುವ ಹೊಸ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್​ 16ಕ್ಕೆ ಅಬುಧಾಬಿಯಲ್ಲಿ ನಡೆಯಲಿದೆ. ಸತತ 3ನೇ ವರ್ಷ ವಿದೇಶಿ ನೆಲದಲ್ಲಿ ಹರಾಜು ನಡೆಯಲಿದೆ. 
ಜಡೇಜಾ-ಸ್ಯಾಮ್ಸನ್​ ವರ್ಗ?
ಚೆನ್ನೈ ಸೂಪರ್​ಕಿಂಗ್ಸ್​ ತಂಡದ ರವೀಂದ್ರ ಜಡೇಜಾ ಮತ್ತು ರಾಜಸ್ಥಾನ ರಾಯಲ್ಸ್​ ತಂಡದ ಸಂಜು ಸ್ಯಾಮ್ಸನ್​ ಅವರ ಬಹುನಿರೀಕ್ಷಿತ ವರ್ಗಾವಣೆ ಪ್ರಕ್ರಿಯೆಯೂ ಶನಿವಾರ ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆ ಇದೆ. ಜಡೇಜಾ ಜತೆಗೆ ಇಂಗ್ಲೆಂಡ್​ ಆಲ್ರೌಂಡರ್​ ಸ್ಯಾಮ್​ ಕರನ್​ ಕೂಡ ರಾಜಸ್ಥಾನ ತಂಡಕ್ಕೆ ವರ್ಗಾವಣೆಯಾಗಲಿದ್ದಾರೆ ಎನ್ನಲಾಗಿದೆ. ಆದರೆ ರಾಜಸ್ಥಾನ ತಂಡದಲ್ಲಿ ಈಗಾಗಲೆ 8 ವಿದೇಶಿ ಆಟಗಾರರ ಕೋಟಾ ಭರ್ತಿಯಾಗಿರುವುದರಿಂದ, ಶನಿವಾರ ಕೆಲ ವಿದೇಶಿ ಆಟಗಾರರನ್ನು ರಿಲೀಸ್​ ಮಾಡಿದ ಬಳಿಕವೇ ಜಡೇಜಾ, ಕರನ್​ರನ್ನು ಸೇರಿಸಿಕೊಂಡ ಬಗ್ಗೆ ಪ್ರಕಟಿಸಲಿದೆ ಎನ್ನಲಾಗಿದೆ. ಇದಲ್ಲದೆ ಜಡೇಜಾ ವರ್ಗಾವಣೆಯೊಂದಿಗೆ ರಾಜಸ್ಥಾನ ತಂಡದ ನಾಯಕತ್ವವನ್ನೂ ಕೇಳಿದ್ದಾರೆ ಎಂದೂ ವರದಿಯಾಗಿದೆ. ಸ್ಯಾಮ್ಸನ್​-ಜಡೇಜಾ/ಕರನ್​ ವಿನಿಮಯವು ಉಭಯ ತಂಡಗಳ ತಲಾ 18 ಕೋಟಿ ರೂ. ಮೊತ್ತವನ್ನು ಒಳಗೊಂಡಿದೆ ಎನ್ನಲಾಗಿದೆ. ಜಡೇಜಾ ರಾಜಸ್ಥಾನ ಮೂಲಕವೇ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದರು ಮತ್ತು ಚೊಚ್ಚಲ ಆವೃತ್ತಿಯ ಚಾಂಪಿಯನ್​ ತಂಡದ ಪ್ರಮುಖ ಭಾಗವಾಗಿದ್ದರು. 
ಲಖನೌಗೆ ಶಮಿ ಟ್ರೇಡ್​?
ಸನ್​ರೈಸರ್ಸ್​ ಹೈದರಾಬಾದ್​ ತಂಡದಲ್ಲಿರುವ ಅನುಭವಿ ವೇಗಿ ಮೊಹಮದ್​ ಶಮಿ ಲಖನೌ ಸೂಪರ್​ಜೈಂಟ್ಸ್​ಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷದ ಹರಾಜಿನಲ್ಲಿ ಸನ್​ರೈಸರ್ಸ್​ 10 ಕೋಟಿ ರೂ. ವ್ಯಯಿಸಿ ಶಮಿ ಅವರನ್ನು ಸೇರ್ಪಡೆಗೊಳಿಸಿತ್ತು. ಉಭಯ ತಂಡಗಳ ನಡುವೆ ಈಗಾಗಲೆ ವರ್ಗಾವಣೆ ಮಾತುಕತೆ ಮುಗಿದಿದೆ ಎಂದು ಹೇಳಲಾಗುತ್ತಿದೆ. ಜತೆಗೆ ದಿಗ್ಗಜ ಸಚಿನ್​ ತೆಂಡುಲ್ಕರ್​ ಪುತ್ರ ಅರ್ಜುನ್​ ತೆಂಡುಲ್ಕರ್​ ಮುಂಬೈನಿಂದ ಲಖನೌಗೆ ಮತ್ತು ಸ್ಪಿನ್ನರ್​ ಮಯಾಂಕ್​ ಮಾರ್ಕಂಡೆ ಕೆಕೆಆರ್​ನಿಂದ ಮುಂಬೈಗೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net