ಬೆಂಗಳೂರು: ಹಾಲಿ ಚಾಂಪಿಯನ್ ಆರ್ಸಿಬಿ (RCB) ತಂಡ ಮುಂಬರುವ ಐಪಿಎಲ್ (IPL) 19ನೇ ಆವೃತ್ತಿಯಲ್ಲಿ ತನ್ನ ತವರಿನ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ರಾಜ್ಯ ಸರ್ಕಾರ ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಷರತ್ತು ಬದ್ಧ ಒಪ್ಪಿಗೆ ನೀಡಿತ್ತು. ಆದರೂ ಆರ್ಸಿಬಿ ಫ್ರಾಂಚೈಸಿ ಬೆಂಗಳೂರಿನಲ್ಲಿ ತನ್ನ ಪಂದ್ಯಗಳನ್ನು ಆಡಲು ಇನ್ನೂ ಹಿಂದೇಟು ಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ನ್ಯಾ.ಡಿ. ಕುನ್ಹಾ ವರದಿಯ ಅನುಷ್ಠಾನಕ್ಕಾಗಿ ಈಗಾಗಲೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಮಗಾರಿಯನ್ನು ನಡೆಸುತ್ತಿದ್ದು, ಮಾರ್ಚ್ 15ರೊಳಗೆ ಎಲ್ಲ ಕೆಲಸವನ್ನು ಮುಗಿಸುವ ವಿಶ್ವಾಸವನ್ನೂ ಹೊಂದಿದೆ. ಐಪಿಎಲ್ ಪಂದ್ಯಗಳಿಗೆ ರಾಜ್ಯ ಸರ್ಕಾರದಿಂದ ಅನುಮತಿ ಕೊಡಿಸುವುದರೊಂದಿಗೆ ಕೆಎಸ್ಸಿಎ ಜವಾಬ್ದಾರಿ ಮುಗಿದಿದೆ. ಇನ್ನು ಪಂದ್ಯ ಆಡುವ ತೀರ್ಮಾನ ತೆಗೆದುಕೊಳ್ಳಬೇಕಾಗಿರುವುದು ಆರ್ಸಿಬಿ ಫ್ರಾಂಚೈಸಿ ಆಗಿದೆ. ಆದರೆ ಷರತ್ತುಬದ್ಧ ಒಪ್ಪಿಗೆ ನೀಡಿರುವುದಕ್ಕೆ ಆರ್ಸಿಬಿ ಅಸಮಾಧಾನ ಹೊಂದಿದೆ. ಅದು ಬೇಷರತ್ ಒಪ್ಪಿಗೆಯ ನಿರೀಕ್ಷೆಯಲ್ಲಿತ್ತು ಎನ್ನಲಾಗಿದೆ.
ಇದರಿಂದಾಗಿ ಆರ್ಸಿಬಿ ಫ್ರಾಂಚೈಸಿ, ಛತ್ತೀಸ್ಗಢದ ರಾಯ್ಪುರದಲ್ಲಿ ತನ್ನ ತವರಿನ ಪಂದ್ಯಗಳನ್ನು ಆಡುವ ಬಗ್ಗೆ ಒಲವು ಹೊಂದಿದೆ ಎನ್ನಲಾಗಿದೆ. ಐಪಿಎಲ್ ಮಾರ್ಚ್ 26ಕ್ಕೆ ಶುರುವಾಗಬೇಕಿದೆ. ಆದರೆ ಬಿಸಿಸಿಐ ಇನ್ನೂ ಪಂಚರಾಜ್ಯಗಳ ಚುನಾವಣಾ ದಿನಾಂಕಕ್ಕೆ ಕಾಯುತ್ತಿರುವುದರಿಂದ ಐಪಿಎಲ್ ವೇಳಾಪಟ್ಟಿ ಬಿಡುಗಡೆಯನ್ನು ವಿಳಂಬಗೊಳಿಸುತ್ತಿದೆ.