IPL 2026; ವೈಭವ್ ಸೂರ್ಯವಂಶಿ ದಾಖಲೆಯ ಆಟ ವ್ಯರ್ಥ: ಫೈನಲ್ ತಲುಪಿದ ಗಿಲ್ ಪಡೆ

IPL 2026
IPL 2026
Published on

ಮುಲ್ಲನ್‌ಪುರ: ನಾಯಕ ಶುಭಮನ್ ಗಿಲ್ ಅವರ ಆಕರ್ಷಕ ಶತಕದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡ IPL 2026ರ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಶುಕ್ರವಾರ ನಡೆದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಗೆದ್ದ ಗುಜರಾತ್, ಪ್ರಶಸ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದೊಂದಿಗೆ ಫೈನಲ್‌ನಲ್ಲಿ ಹೋರಾಡಲು ಟಿಕೆಟ್ ಪಡೆದುಕೊಂಡಿದೆ.

ರಾಜಸ್ಥಾನ್ ರಾಯಲ್ಸ್ ನೀಡಿದ್ದ 215 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡಕ್ಕೆ ಆರಂಭಿಕರೇ ಜಯದ ಹಾದಿ ಸುಗಮಗೊಳಿಸಿದರು. ನಾಯಕನ ಆಟವಾಡಿದ ಶುಭಮನ್ ಗಿಲ್ ಕೇವಲ 53 ಎಸೆತಗಳಲ್ಲಿ 15 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 104 ರನ್ ಚಚ್ಚಿದರು. ಇವರಿಗೆ ಭರ್ಜರಿ ಸಾಥ್ ನೀಡಿದ ಸಾಯ್ ಸುದರ್ಶನ್ 32 ಎಸೆತಗಳಲ್ಲಿ 58 ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ ಬರೋಬ್ಬರಿ 167 ರನ್‌ಗಳ ಜೊತೆಯಾಟವಾಡಿ ತಂಡದ ಗೆಲುವನ್ನು ಸುಲಭಗೊಳಿಸಿತು.

ಸೂರ್ಯವಂಶಿ ದಾಖಲೆಯ ಆಟ ವ್ಯರ್ಥ:ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ಪರ ಯುವ ಆಟಗಾರ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 47 ಎಸೆತಗಳಲ್ಲಿ 96 ರನ್ ಗಳಿಸಿದ ಅವರು ಕೇವಲ 4 ರನ್‌ಗಳಿಂದ ಶತಕ ವಂಚಿತರಾದರು. ರಾಜಸ್ಥಾನ್ ತಂಡ 6 ವಿಕೆಟ್ ನಷ್ಟಕ್ಕೆ 214 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ಸೂರ್ಯವಂಶಿ ಅವರ ಈ ಇನಿಂಗ್ಸ್ ಕಾರಣವಾಯಿತು. ಗುಜರಾತ್ ಪರ ಜೇಸನ್ ಹೋಲ್ಡರ್ ಮತ್ತು ಕಗಿಸೊ ರಬಾಡ ತಲಾ 2 ವಿಕೆಟ್ ಪಡೆದರು.

ದಾಖಲೆ ಬರೆದ ಯುವ ಆಟಗಾರ:ಇದೇ ಪಂದ್ಯದಲ್ಲಿ ರಾಜಸ್ಥಾನ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು. ಅತ್ಯಂತ ಕಡಿಮೆ ಎಸೆತಗಳಲ್ಲಿ (440 ಎಸೆತ) 1,000 ಐಪಿಎಲ್ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಆಂಡ್ರೆ ರಸೆಲ್ (545 ಎಸೆತ) ಅವರ ದಾಖಲೆಯನ್ನು ಮುರಿದರು. ಅಷ್ಟೇ ಅಲ್ಲದೆ, ಒಂದೇ ಐಪಿಎಲ್ ಸೀಸನ್‌ನ ಪವರ್‌ಪ್ಲೇನಲ್ಲಿ 500 ರನ್ ಬಾರಿಸಿದ ಮೊದಲ ಆಟಗಾರ ಎಂಬ ಹೆಮ್ಮೆಯೂ ಇವರ ಮುಡಿಗೇರಿತು. ಆದರೆ, ಅವರ ಈ ಐತಿಹಾಸಿಕ ಆಟ ತಂಡವನ್ನು ಫೈನಲ್‌ಗೆ ತಲುಪಿಸಲು ಸಾಧ್ಯವಾಗಲಿಲ್ಲ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net