IPL 2026: ಈ ಆಟಗಾರ ಆರಂಭಿಕನಾಗಿ ಕಣಕ್ಕಿಳಿದ್ರೆ 'ಆರೆಂಜ್ ಕ್ಯಾಪ್' ಗ್ಯಾರಂಟಿ; ಡೆಲ್ಲಿಗೆ ಆರ್. ಅಶ್ವಿನ್ ಅಡ್ವೈಸ್!

IPL 2026
IPL 2026
Published on
ಬೆಂಗಳೂರು: IPL 2026ರ ಹಬ್ಬಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಕ್ಕೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ತಂಡವು ಈ ಬಾರಿ ಟ್ರೋಫಿ ಗೆಲ್ಲಬೇಕಾದರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಶ್ವಿನ್, "ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿರುವ ಕೆ.ಎಲ್. ರಾಹುಲ್ ಈ ಬಾರಿ ಕಡ್ಡಾಯವಾಗಿ ಇನ್ನಿಂಗ್ಸ್ ಆರಂಭಿಸಬೇಕು (Open the batting). ಕಳೆದ ಸೀಸನ್‌ನಲ್ಲಿ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ರಾಹುಲ್ ಅದ್ಭುತವಾಗಿ ಆಡಿದ್ದರು, ಆದರೂ ಅವರನ್ನು ನಂತರದ ಪಂದ್ಯಗಳಲ್ಲಿ ಓಪನರ್ ಆಗಿ ಬಳಸಿಕೊಳ್ಳಲಿಲ್ಲ. ಈ ಬಾರಿ ರಾಹುಲ್ ಮತ್ತು ಪತುಮ್ ನಿಸ್ಸಾಂಕ ಆರಂಭಿಕರಾಗಿ ಕಣಕ್ಕಿಳಿದರೆ, ಕೆ.ಎಲ್. ರಾಹುಲ್ ಆರೆಂಜ್ ಕ್ಯಾಪ್ ಗೆಲ್ಲುವುದು ಖಚಿತ," ಎಂದು ಭವಿಷ್ಯ ನುಡಿದಿದ್ದಾರೆ.

ತಂಡದ ಆಯ್ಕೆಯಲ್ಲಿ ಗೊಂದಲ ಬೇಡ!

ಡೆಲ್ಲಿ ತಂಡವು ಪದೇ ಪದೇ ಆಡುವ 11ರ ಬಳಗವನ್ನು ಬದಲಿಸುವುದನ್ನು ನಿಲ್ಲಿಸಬೇಕು ಎಂದು ಅಶ್ವಿನ್ ಕಿವಿಮಾತು ಹೇಳಿದ್ದಾರೆ. "ಸಪೋರ್ಟ್ ಸ್ಟಾಫ್ ಅತಿಯಾಗಿ ಮಧ್ಯಪ್ರವೇಶ ಮಾಡುವುದರಿಂದ ತಂಡದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅಶುತೋಷ್ ಶರ್ಮಾ ಮತ್ತು ಸಮೀರ್ ರಿಜ್ವಿ ಅವರಂತಹ ಆಟಗಾರರನ್ನು ಸರಿಯಾಗಿ ಬಳಸಿಕೊಳ್ಳಬೇಕು. ತಂಡದಲ್ಲಿ ಸ್ಥಿರತೆ ಇದ್ದರೆ ಮಾತ್ರ ಮುಂಬೈ ಇಂಡಿಯನ್ಸ್ ಅಂತಹ ಬಲಿಷ್ಠ ತಂಡಗಳಿಗೂ ಡೆಲ್ಲಿ ಸವಾಲು ನೀಡಬಲ್ಲದು," ಎಂದು ಅವರು ವಿಶ್ಲೇಷಿಸಿದ್ದಾರೆ.

ಬೌಲಿಂಗ್ ವಿಭಾಗದ ಬಗ್ಗೆ ಅಶ್ವಿನ್ ಮಾತು

ಡೆಲ್ಲಿಯ ಬೌಲಿಂಗ್ ಪಡೆಯನ್ನು ಶ್ಲಾಘಿಸಿದ ಅಶ್ವಿನ್, "ನಟರಾಜನ್ ಅವರ ವೇಗ ಸ್ವಲ್ಪ ಕುಸಿದಿರಬಹುದು, ಆದರೆ ಅವರು ತಂಡಕ್ಕೆ ಮೌಲ್ಯಯುತ ಆಟಗಾರ. ಮಿಚೆಲ್ ಸ್ಟಾರ್ಕ್ ಆಡದಿದ್ದರೆ ಲುಂಗಿ ಎನ್ಗಿಡಿ ಇದ್ದಾರೆ. ಮುಖೇಶ್ ಕುಮಾರ್ ಅವರ ಯಾರ್ಕರ್ ಮತ್ತು ಕುಲದೀಪ್ ಯಾದವ್-ಅಕ್ಷರ್ ಪಟೇಲ್ ಅವರ ಸ್ಪಿನ್ ಜೋಡಿ ತಂಡಕ್ಕೆ ದೊಡ್ಡ ಶಕ್ತಿ. ಜೊತೆಗೆ ಆಕಿಬ್ ನಬಿ ಹೊಸ ಚೆಂಡಿನಲ್ಲಿ ಬೌಲಿಂಗ್ ಆರಂಭಿಸಬೇಕು," ಎಂದಿದ್ದಾರೆ.
ಒಟ್ಟಾರೆಯಾಗಿ, ಡೆಲ್ಲಿ ತಂಡವು ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡರೆ ಈ ಬಾರಿ ಪ್ಲೇ ಆಫ್ ಹಂತಕ್ಕೇರುವ ಎಲ್ಲಾ ಸಾಧ್ಯತೆಗಳಿವೆ ಎಂಬುದು ಅಶ್ವಿನ್ ಅವರ ಅಭಿಪ್ರಾಯವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net