ಬೆಂಗಳೂರು: ಮಧ್ಯಪ್ರದೇಶದ ಬ್ಯಾಟರ್ ರಜತ್ ಪಾಟೀದಾರ್ (rajat patidar) 2022ರ ಐಪಿಎಲ್ ನಡುವೆ ಬದಲಿ ಆಟಗಾರನಾಗಿ ಆರ್ಸಿಬಿ (RCB) ತಂಡವನ್ನು ಕೂಡಿಕೊಂಡಿದ್ದರು. ನಂತರದಲ್ಲಿ 5 ವರ್ಷಗಳ ಅವಧಿಯಲ್ಲಿ ಅವರು ತಂಡದ ಅದೃಷ್ಟವನ್ನೇ ಬದಲಾಯಿಸಿ 2 ಟ್ರೋಫಿ ಗೆದ್ದುಕೊಟ್ಟಿರುವುದು ವಿಶೇಷ.
2021ರಲ್ಲಿ ಮೊದಲ ಬಾರಿ ಆರ್ಸಿಬಿ ತಂಡದಲ್ಲಿದ್ದ ಪಾಟೀದಾರ್ ಕೇವಲ 4 ಪಂದ್ಯ ಆಡಿದ ಬಳಿಕ ರಿಟೇನ್ ಆಗಿರಲಿಲ್ಲ. ಆದರೆ 2022ರ ಟೂರ್ನಿ ನಡುವೆ ಕರ್ನಾಟಕದ ಲವನೀತ್ ಸಿಸೋಡಿಯಾ ಗಾಯಗೊಂಡಾಗ ಪಾಟೀದಾರ್, ಕೇವಲ 20 ಲಕ್ಷ ರೂ.ಗೆ ಆರ್ಸಿಬಿ ತಂಡ ಸೇರಿದ್ದರು. ಆಗ ಅವರು ಆರ್ಸಿಬಿ ಪರ ಆಡಲು ಮದುವೆಯನ್ನೂ ಮುಂದೂಡಿದ್ದರು. ಆ ವರ್ಷ ಎಲಿಮಿನೇಟರ್ನಲ್ಲಿ ಶತಕ ಸಿಡಿಸಿ ಸ್ಥಾನ ಭದ್ರಪಡಿಸಿಕೊಂಡಿದ್ದರು. ಆದರೆ 2023ರಲ್ಲಿ ಗಾಯದಿಂದಾಗಿ ಸಂಪೂರ್ಣ ಟೂರ್ನಿ ಆಡಿರಲಿಲ್ಲ.
2024ರಲ್ಲಿ ಮತ್ತೆ ಕಣಕ್ಕಿಳಿದು 395 ರನ್ ಸಿಡಿಸಿ ಗಮನಸೆಳೆದಿದ್ದರು. ಇದರ ಬೆನ್ನಲ್ಲೇ 2025ರಲ್ಲಿ ಆರ್ಸಿಬಿ ನಾಯಕತ್ವ ಒಲಿದಿತ್ತು. ನಂತರ ತಿರುಗಿ ನೋಡದ ಅವರು, ನಾಯಕರಾಗಿ ಮೊದಲ ಆವೃತ್ತಿಯಲ್ಲೇ ಟ್ರೋಫಿ ಗೆದ್ದರು ಮತ್ತು ಈ ಬಾರಿ 2ನೇ ಟ್ರೋಫಿ ಗೆದ್ದುಕೊಟ್ಟಿದ್ದಾರೆ.