ಕುತೂಹಲ ಮೂಡಿಸಿದ ಐಪಿಎಲ್​ ಪ್ಲೇಆಫ್​ ರೇಸ್​; ಎಲ್ಲ 10 ತಂಡಗಳ ಲೆಕ್ಕಾಚಾರ ಹೀಗಿದೆ...

ಕುತೂಹಲ ಮೂಡಿಸಿದ ಐಪಿಎಲ್​ ಪ್ಲೇಆಫ್​ ರೇಸ್
ಕುತೂಹಲ ಮೂಡಿಸಿದ ಐಪಿಎಲ್​ ಪ್ಲೇಆಫ್​ ರೇಸ್
Published on
ಬೆಂಗಳೂರು: ರನ್​, ಸಿಕ್ಸರ್​ ಮಳೆ ಹರಿಸುತ್ತಿರುವ ಮತ್ತು 200 ಪ್ಲಸ್​ ಮೊತ್ತಗಳನ್ನು ಸರಾಗವಾಗಿ ಚೇಸಿಂಗ್​ ಮಾಡಲಾಗುತ್ತಿರುವ ಐಪಿಎಲ್​ 19ನೇ ಆವೃತ್ತಿಯಲ್ಲಿ ಇದುವರೆಗೆ 49 ಪಂದ್ಯಗಳು ನಡೆದಿದ್ದು, ಇನ್ನು 21 ಲೀಗ್​ ಪಂದ್ಯಗಳಷ್ಟೇ ಬಾಕಿ ಉಳಿದಿವೆ. ಯಾವ ತಂಡಕ್ಕೂ ಇದುವರೆಗೆ ಪ್ಲೇಆಫ್ (IPL 2026 playoffs)​ ಸ್ಥಾನ ಖಚಿತವಾಗಿಲ್ಲ. ವಾರದ ಹಿಂದೆ ಅಂಕಪಟ್ಟಿ ನೋಡಿದ್ದರೆ ಪ್ಲೇಆಫ್​ಗೇರುವ ಅಗ್ರ 4 ತಂಡಗಳನ್ನು ಊಹಿಸಬಹುದಾಗಿತ್ತು. ಆದರೆ ಕಳೆದೊಂದು ವಾರದಲ್ಲಿ ಈ 4 ತಂಡಗಳು ಮುಗ್ಗರಿಸಿರುವುದರಿಂದ ಈಗ ಪ್ಲೇಆಫ್​ ರೇಸ್​ ಮುಕ್ತವಾಗಿದೆ. ಸದ್ಯ 8 ತಂಡಗಳು ರೇಸ್​ನಲ್ಲಿದ್ದು, ಅಗ್ರ 2ರೊಳಗಿನ ಸ್ಥಾನಕ್ಕೇ 5 ತಂಡಗಳು ಪೈಪೋಟಿಯಲ್ಲಿವೆ. ಅವುಗಳೆಂದರೆ ಪಂಜಾಬ್​, ಆರ್​ಸಿಬಿ, ಸನ್​ರೈಸರ್ಸ್​, ರಾಜಸ್ಥಾನ ಮತ್ತು ಗುಜರಾತ್​. ಇನ್ನು ಸಿಎಸ್​ಕೆ ಪ್ಲೇಆಫ್​ ರೇಸ್​ನಲ್ಲಿ ಅಚ್ಚರಿ ಮೂಡಿಸಬಲ್ಲ ರೀತಿ ಪುಟಿದೆದ್ದು ಬರುತ್ತಿದೆ. ಡೆಲ್ಲಿ ಉಳಿದ 4 ಮತ್ತು ಕೆಕೆಆರ್​ ಉಳಿದ 5 ಪಂದ್ಯ ಗೆದ್ದರಷ್ಟೇ ಪ್ಲೇಆಫ್​ಗೆ ಆಸೆ ಪಡಬಹುದು. ಇಲ್ಲದಿದ್ದರೆ ಈಗಾಗಲೆ ಪ್ಲೇಆಫ್​ ರೇಸ್​ನಿಂದ ಬಹುತೇಕ ಹೊರಬಿದ್ದಿರುವ ಮುಂಬೈ, ಲಖನೌ ಸಾಲಿಗೆ ಸೇರಲಿವೆ.
ಅರ್ಹತೆ ಹೇಗೆ?
ತಲಾ 14 ಲೀಗ್​ ಪಂದ್ಯ ಆಡುವ 10 ತಂಡಗಳ ಟೂರ್ನಿಯಲ್ಲಿ ಪ್ಲೇಆಫ್​ ಹಂತಕ್ಕೇರಲು ಸಾಮಾನ್ಯವಾಗಿ 8 ಜಯ ಅಂದರೆ 16 ಅಂಕ ಬೇಕಾಗುತ್ತದೆ. 2024ರಲ್ಲಿ ಆರ್​ಸಿಬಿ ತಂಡ 7 ಪಂದ್ಯವನ್ನಷ್ಟೇ (14 ಅಂಕ) ಗೆದ್ದು ಪ್ಲೇಆಫ್​ ಗೇರಿದ ದೃಷ್ಟಾಂತವೂ ಇದೆ. ಆದರೆ ಈ ಬಾರಿ ಅಗ್ರ 5 ತಂಡಗಳ ನಡುವೆ ನಿಕಟ ಪೈಪೋಟಿ ಇರುವುದರಿಂದ, ಪ್ಲೇಆಫ್​​ಗೇರಲು 16 ಅಂಕವೂ ಸಾಕಾಗದಿರುವ ಸಾಧ್ಯತೆಯೂ ಇದೆ.
*ಆರ್​ಸಿಬಿ:
ಹಾಲಿ ಚಾಂಪಿಯನ್​ ಆರ್​ಸಿಬಿ ತಂಡ ಈ ಬಾರಿ ಆರಂಭಿಕ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಾಗಲೇ ಅಭಿಮಾನಿಗಳಿಗೆ ಬಹುತೇಕ ಪ್ಲೇಆಫ್​ ಗೇರುವ ವಿಶ್ವಾಸ ಬಂದಿತ್ತು. ನಂತರದ 4ರಲ್ಲಿ ತಲಾ 2 ಜಯ, ಸೋಲು ಕಂಡರೂ, ಆಡಿದ 9ರಲ್ಲಿ 6 ಜಯ, 3 ಸೋಲಿನೊಂದಿಗೆ ರಜತ್​ ಪಾಟೀದಾರ್​ ಪಡೆ ಈಗಾಗಲೆ ಪ್ಲೇಆಫ್​ ಹಂತಕ್ಕೆ ಒಂದು ಕಾಲಿಟ್ಟಿದೆ ಎನ್ನಬಹುದು. ಬಲಿಷ್ಠ ರನ್​ರೇಟ್​ ಇದಕ್ಕೆ ಪ್ರಮುಖ ಕಾರಣ. ಉಳಿದ 5ರಲ್ಲಿ 2ರಲ್ಲಿ ಗೆದ್ದರೂ ಆರ್​ಸಿಬಿ ಪ್ಲೇಆಫ್​​ಗೇರಲಿದೆ. ಉಳಿದ 3-4 ಪಂದ್ಯ ಗೆದ್ದರೆ ಅಗ್ರ 2ರೊಳಗೆ ಸ್ಥಾನ ಪಡೆಯುವ ಅವಕಾಶವೂ ಇದೆ.
*ಬಾಕಿ ಪಂದ್ಯ: ಲಖನೌ (ಮೇ 7), ಮುಂಬೈ (ಮೇ 10), ಕೆಕೆಆರ್​ (ಮೇ 13), ಪಂಜಾಬ್​ (ಮೇ 17), ಸನ್​ರೈಸರ್ಸ್​ (ಮೇ 22).
ಪ್ಲೇಆಫ್​​ ಚಾನ್ಸ್​: 84%
*ಪಂಜಾಬ್​ ಕಿಂಗ್ಸ್​
ಆರಂಭಿಕ 7 ಪಂದ್ಯಗಳಲ್ಲಿ (6 ಜಯ) ಅಜೇಯವಾಗಿದ್ದ ಶ್ರೇಯಸ್​ ಅಯ್ಯರ್​ ಬಳಗ ನಂತರ ಸತತ 3 ಸೋಲು ಅನುಭವಿಸಿದೆ. ಆದರೂ ಪ್ಲೇಆಫ್​​ ಹಂತಕ್ಕೇರುವ ಅವಕಾಶ ಮಾತ್ರವಲ್ಲದೆ, ಅಗ್ರ 2ರೊಳಗೂ ಸ್ಥಾನ ಪಡೆಯುವ ಆಸೆ ಜೀವಂತವಿದೆ. ಉಳಿದ 4ರಲ್ಲಿ 2ರಲ್ಲಿ ಗೆದ್ದರೂ ಪ್ಲೇಆಫ್​​ ಸ್ಥಾನ ಒಲಿಸಿಕೊಳ್ಳಬಹುದು. 3-4ರಲ್ಲಿ ಗೆದ್ದರೆ ಅಗ್ರ 2ರೊಳಗೂ ಸ್ಥಾನ ಉಳಿಯಬಹುದು.
ಬಾಕಿ ಪಂದ್ಯ: ಡೆಲ್ಲಿ (ಮೇ 11), ಮುಂಬೈ (ಮೇ 14), ಆರ್​ಸಿಬಿ (ಮೇ 17), ಲಖನೌ (ಮೇ 23).
ಪ್ಲೇಆಫ್​​ ಚಾನ್ಸ್​: 78%
*ಸನ್​ರೈಸರ್ಸ್​
ಆರಂಭಿಕ 4 ಪಂದ್ಯಗಳಲ್ಲಿ 3ರಲ್ಲಿ ಸೋತರೂ, ನಂತರ ಸತತ 5 ಜಯದೊಂದಿಗೆ ಪ್ಲೇಆಫ್​ ಅವಕಾಶ ಹೆಚ್ಚಿಸಿಕೊಂಡಿದ್ದ ಸನ್​ರೈಸರ್ಸ್​ ತಂಡ ಈಗ 11ರಲ್ಲಿ 7 ಜಯ, 4 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದರಿಂದ ಈಗ ಅಗ್ರ 4ರಲ್ಲಿ ಮಾತ್ರವಲ್ಲದೆ ಅಗ್ರ 2ರಲ್ಲೂ ಸ್ಥಾನ ಪಡೆಯಬಹುದಾದ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಉಳಿದ 3ರಲ್ಲಿ 1ರಲ್ಲಿ ಗೆದ್ದರೂ ಪ್ಲೇಆಫ್​​ ಅವಕಾಶವಿದೆ. ಆದರೆ ಈ ಪೈಕಿ ಗುಜರಾತ್​, ಆರ್​ಸಿಬಿಯಂಥ ಬಲಿಷ್ಠ ತಂಡಗಳನ್ನು ಎದುರಿಸಬೇಕಾಗಿರುವುದು ಸವಾಲನ್ನು ತುಸು ಕಠಿಣಗೊಳಿಸಿದೆ.
ಬಾಕಿ ಪಂದ್ಯ: ಗುಜರಾತ್​ (ಮೇ 12), ಸಿಎಸ್​ಕೆ (ಮೇ 18), ಆರ್​ಸಿಬಿ(ಮೇ 22).
ಪ್ಲೇ
ಆಫ್​​ ಚಾನ್ಸ್​: 84%
*ರಾಜಸ್ಥಾನ ರಾಯಲ್ಸ್​
ಸತತ 4 ಜಯದೊಂದಿಗೆ ಟೂರ್ನಿಯಲ್ಲಿ ಬಲಿಷ್ಠ ಆರಂಭ ಕಂಡಿದ್ದ ಆರ್​ಆರ್​, ನಂತರದ 6 ಪಂದ್ಯಗಳಲ್ಲಿ ಗೆಲುವಿನ (2) ದುಪ್ಪಟ್ಟು ಸೋಲು (4) ಕಂಡಿದೆ. ಪ್ಲೇಆಫ್​​ಗೇರಲು ಉಳಿದ 4ರಲ್ಲಿ 2 ಗೆಲುವಿನ ಅಗತ್ಯವಿದೆ. ಅಂಕಪಟ್ಟಿಯಲ್ಲಿ ತನಗಿಂತ ಕೆಳಗಿನ ಸ್ಥಾನದಲ್ಲಿರುವ 4 ತಂಡಗಳ ವಿರುದ್ಧವೇ ಉಳಿದೆಲ್ಲ ಲೀಗ್​ ಪಂದ್ಯ ಆಡಲಿರುವುದು ಆರ್​ಆರ್​ಗೆ ಅನುಕೂಲಕರ ಎನಿಸಿದೆ. ಹೀಗಾಗಿ 3ರಲ್ಲಿ ಗೆದ್ದರೆ ಅಗ್ರ 2ರೊಳಗೂ ಸ್ಥಾನ ಪಡೆಯುವ ಅವಕಾಶವಿದೆ.
*ಬಾಕಿ ಪಂದ್ಯ: ಗುಜರಾತ್​ (ಮೇ 9), ಡೆಲ್ಲಿ (ಮೇ 17), ಲಖನೌ (ಮೇ 19), ಮುಂಬೈ (ಮೇ 24).
ಪ್ಲೇಆಫ್​​ ಚಾನ್ಸ್​: 67%
*ಗುಜರಾತ್​ ಟೈಟಾನ್ಸ್​
ಆಡಿದ ಮೊದಲ 7ರಲ್ಲಿ ಗೆಲುವಿಗಿಂತ (3) ಹೆಚ್ಚು ಸೋಲು (4) ಕಂಡಿದ್ದ ಶುಭಮಾನ್​ ಗಿಲ್​ ಪಡೆ, ನಂತರ ಹ್ಯಾಟ್ರಿಕ್​ ಗೆಲುವಿನೊಂದಿಗೆ ಪ್ಲೇಆಫ್​ ಅವಕಾಶ ಹೆಚ್ಚಿಸಿಕೊಂಡಿದ್ದು ಮಾತ್ರವಲ್ಲದೆ, ಅಗ್ರ 2ರೊಳಗೆ ಸ್ಥಾನ ಪಡೆಯುವ ಆಸೆಯನ್ನೂ ಹೊಂದಿದೆ. ಉಳಿದ 4ರಲ್ಲಿ 2ರಲ್ಲಿ ಗೆದ್ದರೆ ಪ್ಲೇಆಫ್​ಗೇರುವ ಅವಕಾಶವಿದೆ. ಆದರೆ ಈ ಪೈಕಿ 2ರಲ್ಲಿ ತನಗಿಂತ ಮೇಲಿರುವ ತಂಡಗಳನ್ನೇ ಎದುರಿಸಲಿದೆ. 2 ಗೆಲುವಿನೊಂದಿಗೆ ರನ್​ರೇಟ್​ ಸುಧಾರಣೆಯತ್ತ ಕೂಡ ಗಮನಕೊಡುವ ಅಗತ್ಯವಿದೆ.
ಬಾಕಿ ಪಂದ್ಯ: ರಾಜಸ್ಥಾನ (ಮೇ 9), ಸನ್​ರೈಸರ್ಸ್​ (ಮೇ 12), ಕೆಕೆಆರ್​ (ಮೇ 16), ಸಿಎಸ್​ಕೆ (ಮೇ 21).
ಪ್ಲೇಆಫ್​​ ಚಾನ್ಸ್​: 56%
*ಚೆನ್ನೈ ಸೂಪರ್​ಕಿಂಗ್ಸ್​
ಆರಂಭಿಕ 3 ಪಂದ್ಯಗಳಲ್ಲಿ ಸೋತಿದ್ದ ಸಿಎಸ್​ಕೆ, ನಂತರದ 7 ಪಂದ್ಯಗಳಲ್ಲಿ 2ರಲ್ಲಿ ಸೋತು 5ರಲ್ಲಿ ಗೆಲ್ಲುವ ಮೂಲಕ ಪುಟಿದೆದ್ದಿದೆ. ಈ ಮೂಲಕ ಪ್ಲೇಆಫ್​ ಅವಕಾಶ ಹೆಚ್ಚಿಸಿಕೊಂಡಿದೆ. ರನ್​ರೇಟ್​ ಕೂಡ ಪ್ಲಸ್​ ಆಗಿ ಸುಧಾರಣೆ ಕಂಡಿದೆ. ಉಳಿದ 4ರಲ್ಲಿ 3ರಲ್ಲಾದರೂ ಗೆದ್ದರೆ ಪ್ಲೇಆಫ್​ಗೇರಬಹುದು. ದುರ್ಬಲ ಲಖನೌ ಎದುರು 2 ಪಂದ್ಯ ಆಡಬೇಕಿರುವುದು ಲಾಭದಾಯಕ. ಆದರೆ ಇನ್ನು 2 ಪಂದ್ಯ ಸೋತರೆ ಪ್ಲೇಆಫ್​ ಬಾಗಿಲು ಬಹುತೇಕ ಮುಚ್ಚಲಿದೆ.
*ಬಾಕಿ ಪಂದ್ಯ: ಲಖನೌ (ಮೇ 10), ಲಖನೌ (ಮೇ 15), ಸನ್​ರೈಸರ್ಸ್​ (ಮೇ 18), ಗುಜರಾತ್​ (ಮೇ 21).
ಪ್ಲೇಆಫ್​​ ಚಾನ್ಸ್​: 27%
*ಡೆಲ್ಲಿ ಕ್ಯಾಪಿಟಲ್ಸ್​
ಆರಂಭದಿಂದಲೂ ಸೋಲು-ಗೆಲುವಿನ ಏರಿಳಿತ ಕಾಣುತ್ತಿರುವ ಡೆಲ್ಲಿ ತಂಡ ಸದ್ಯ 10 ಪಂದ್ಯಗಳಲ್ಲಿ ಗೆಲುವಿಗಿಂತ (4) ಹೆಚ್ಚು ಸೋಲು (6) ಅನುಭವಿಸಿದೆ. ಪ್ಲೇಆಫ್​​ ರೇಸ್​ನಲ್ಲಿ ಡೆಲ್ಲಿಗೆ ಕಳಪೆ ರನ್​ರೇಟ್​ ಕೂಡ ದೊಡ್ಡ ಹಿನ್ನಡೆ ಎನಿಸಿದೆ. ಉಳಿದ 4ರಲ್ಲೂ ಗೆಲ್ಲುವ ಜತೆಗೆ ರನ್​ರೇಟ್​ ಕೂಡ ಸುಧಾರಿಸಿದರೆ, ಇತರ ಫಲಿತಾಂಶ ವರದಾನವಾದರೆ ಪ್ಲೇಆಫ್​ ಅವಕಾಶವಿದೆ. ತನಗಿಂತ ಕೆಳಗಿರುವ ಕೆಕೆಆರ್​ ಎದುರು 2 ಪಂದ್ಯ ಆಡುವ ಅನುಕೂಲವಿದೆ.
*ಬಾಕಿ ಪಂದ್ಯ: ಕೆಕೆಆರ್​ (ಮೇ 8), ಪಂಜಾಬ್​ (ಮೇ 11), ರಾಜಸ್ಥಾನ (ಮೇ 17), ಕೆಕೆಆರ್​ (ಮೇ 24).
ಪ್ಲೇಆಫ್​​ ಚಾನ್ಸ್​: 3%
*ಕೆಕೆಆರ್​
ಮೊದಲ 6 ಪಂದ್ಯಗಳಲ್ಲಿ ಗೆಲುವು ಕಾಣದಿದ್ದರೂ, ಇದೀಗ ಹ್ಯಾಟ್ರಿಕ್​ ಜಯದೊಂದಿಗೆ ಕೆಕೆಆರ್​ ಆಸೆ ಜೀವಂತ ಉಳಿಸಿಕೊಂಡಿದೆ. ಆದರೆ ಪ್ಲೇಆಫ್​​ಗೇರಬೇಕಾದರೆ ಉಳಿದ 5 ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಮಾಡು ಇಲ್ಲವೆ ಮಡಿ ಸವಾಲು ಇದೆ. ಇನ್ನೊಂದು ಸೋಲು ಕಂಡರೂ, ರೇಸ್​ನಿಂದ ಹೊರಬೀಳಲಿದೆ.
ಬಾಕಿ ಪಂದ್ಯ: ಡೆಲ್ಲಿ (ಮೇ 8), ಆರ್​ಸಿಬಿ (ಮೇ 13), ಗುಜರಾತ್​ (ಮೇ 16), ಮುಂಬೈ (ಮೇ 20), ಡೆಲ್ಲಿ (ಮೇ 24)
ಪ್ಲೇಆಫ್​​ ಚಾನ್ಸ್​: 7%
*ಮುಂಬೈ, ಲಖನೌ ಗೇಮ್​ಓವರ್​?
ತಲಾ 7 ಸೋಲು ಅನುಭವಿಸಿರುವ ಮುಂಬೈ, ಲಖನೌ ಈಗಾಗಲೆ ಟೂರ್ನಿಯಿಂದ ಬಹುತೇಕ ಗೇಟ್​ಪಾಸ್​ ಪಡೆದಿವೆ. ಹಾರ್ದಿಕ್​ ಪಾಂಡ್ಯ ಪಡೆ ಇನ್ನುಳಿದ 4 ಮತ್ತು ರಿಷಭ್​ ಪಂತ್​ ಪಡೆ 5 ಪಂದ್ಯಗಳಲ್ಲಿ ಗೆದ್ದರೂ ಪ್ಲೇಆಫ್​​ ಹಂತಕ್ಕೇರುವ ಅವಕಾಶ ಕ್ಷೀಣ. ಟೂರ್ನಿಯಲ್ಲಿ 3ಕ್ಕಿಂತ ಹೆಚ್ಚು ತಂಡಗಳು ಕನಿಷ್ಠ 8 ಪಂದ್ಯ ಗೆಲ್ಲದಿದ್ದರಷ್ಟೇ, ಗಣಿತಶಾಸ್ತ್ರದ ಪ್ರಕಾರ ಪ್ಲೇಆಫ್​ಗೇರುವ ಅವಕಾಶವಿದೆ. ಅದೂ ರನ್​ರೇಟ್​ ದೊಡ್ಡ ಪ್ರಮಾಣದಲ್ಲಿ ಏರಿಕೆಯಾದರೆ ಮಾತ್ರ.
*ಪ್ಲೇಆಫ್​ ಚಾನ್ಸ್​: 0.01%
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net