ಪ್ಲೇಆಫ್​ ಚಿತ್ರಣ ಬದಲು! ಬ್ಯಾಕ್​ ಟು ಬ್ಯಾಕ್​ ಗೆಲುವಿನಿಂದ ಕೆಕೆಆರ್ ಕಮ್​ಬ್ಯಾಕ್​; ಅಗ್ರ 4 ತಂಡಗಳು ಜಯಕ್ಕೆ ಪರದಾಟ

IPL 2026
IPL 2026
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ 19ನೇ ಆವೃತ್ತಿಯ ಮೊದಲಾರ್ಧ ಮುಕ್ತಾಯ
  • ದ್ವಿತೀಯಾರ್ಧದಲ್ಲಿ ಗೆಲುವಿನ ಲೆಕ್ಕಾಚಾರ ಬದಲು
  • ಟಾಪ್​ ನಾಲ್ಕರಲ್ಲಿರುವ ತಂಡಗಳು ಸೋಲು, ಕೆಕೆಆರ್​ ಸತತ 4 ಗೆಲುವು
IPL 2026: 19ನೇ ಐಪಿಎಲ್​ ಆವೃತ್ತಿಯ ಮೊದಲಾರ್ಧ ಮುಕ್ತಾಯಗೊಂಡಿದ್ದು, ದ್ವಿತೀಯಾರ್ಧದಲ್ಲಿ ಪ್ಲೇಆಫ್​ ಲೆಕ್ಕಾಚಾರ ಸಂಪೂರ್ಣ ಬದಲಾಗುವ ಸಾಧ್ಯತೆಗಳಿವೆ ಎನ್ನುವುದಕ್ಕೆ ಇತ್ತೀಚಿನ ಪಂದ್ಯಗಳೇ ಸಾಕ್ಷಿ. ಅಂಕಪಟ್ಟಿಯಲ್ಲಿ ತಳಮಟ್ಟದಲ್ಲಿದ್ದ ಕೋಲ್ಕತ ನೈಟ್​ ರೈಡರ್ಸ್​​ ಬ್ಯಾಕ್​ ಟು ಬ್ಯಾಕ್​ ನಾಲ್ಕು ಪಂದ್ಯಗಳನ್ನು ಗೆದ್ದು ಇದೀಗ 7ನೇ ಸ್ಥಾನಕ್ಕೆ ಬಂದು ನಿಂತಿರುವುದು ಗಮನಾರ್ಹ.
ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಫಿನ್​ ಆ್ಯಲೆನ್​ ಅವರ ಶತಕದಾಟದಿಂದ ಕೇವಲ 14.2 ಓವರ್​ನಲ್ಲೇ ಸುಲಭ ಗೆಲುವು ದಾಖಲಿಸಿದ ಕೆಕೆಆರ್​, ಉಳಿದಿರುವ ನಿರ್ಣಾಯಕ ಪಂದ್ಯಗಳನ್ನು ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ಮತ್ತೊಂದೆಡೆ, ಆರ್​ಸಿಬಿ, ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್​ ಕಿಂಗ್ಸ್​ನಂತಹ ಗೆಲುವಿನ ತಂಡಗಳು ಸದ್ಯ ಅಗ್ರ ಸ್ಥಾನಗಳಲ್ಲಿದ್ದು, ಹೀನಾಯ ಸೋಲನ್ನು ಅನುಭವಿಸುತ್ತಿರುವುದು ಕ್ರಿಕೆಟ್​ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.
ಕಳೆದ ಪಂದ್ಯಗಳಲ್ಲಿ ಆರ್​ಸಿಬಿ ಮತ್ತು ಪಂಜಾಬ್​ ಕಿಂಗ್ಸ್​ ಸೋಲುಂಡಿದ್ದು, ರಾಜಸ್ಥಾನ ರಾಯಲ್ಸ್​ ಅಲ್ಲಲ್ಲಿ ಮುಗ್ಗರಿಸುವ ಮೂಲಕ ಅಂಕಪಟ್ಟಿಯ ಅಗ್ರ ನಾಲ್ಕು ಸ್ಥಾನದಿಂದ ಕೆಳಗಿಳಿಯುವ ಮುನ್ಸೂಚನೆಯನ್ನು ನೀಡಿವೆ. ಪ್ರಸ್ತುತ, ಪಾಯಿಂಟ್​ ಟೇಬಲ್​ನಲ್ಲಿ ಪಂಜಾಬ್​ (2), ಆರ್​ಸಿಬಿ (3) ಮತ್ತು ಆರ್​ಆರ್​ (4) ಟಾಪ್​ ನಾಲ್ಕರಲ್ಲಿ ತಮ್ಮ ಸ್ಥಾನಗಳನ್ನು ಭದ್ರವಾಗಿ ಉಳಿಸಿಕೊಂಡಿವೆ. ಆದರೆ, ಮುಂಬರುವ ಪಂದ್ಯಗಳಲ್ಲಿ ಏನಾದರೂ ಸೋತರೆ, ಬೌನ್ಸ್​ ಬ್ಯಾಕ್​ ಮಾಡುತ್ತಿರುವ ಸಿಎಸ್​ಕೆ, ಕೆಕೆಆರ್​ ಮತ್ತು ಗುಜರಾತ್​ ಟೈಟನ್ಸ್​ನಂತಹ ತಂಡಗಳು ಟಾಪ್​ 4 ಸ್ಥಾನಗಳನ್ನು ಅಲಂಕರಿಸಿರುವುದು ಖಚಿತ.
ಅಜಿಂಕ್ಯಾ ರಹಾನೆ ಪಡೆಗೆ ಪ್ಲೇಆಪ್​ ಗೆಲ್ಲುವ ಭರವಸೆ ಹೆಚ್ಚಾಗಿದ್ದು, ಮುಂದಿನ 4 ಪಂದ್ಯಗಳಾದ ರಾಯಲ್​ ಚಾಲೆಂಜರ್ಸ್ ಬೆಂಗಳೂರು, ಗುಜರಾತ್​ ಟೈಟನ್ಸ್​, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಜಯ ಸಾಧಿಸುವುದು ಗುರಿಯಾಗಿದೆ. ಇದರಲ್ಲಿ ಒಂದೇ ಒಂದು ಪಂದ್ಯ ಸೋತರೂ ಕೆಕೆಆರ್​ಗೆ ಪ್ಲೇಆಫ್​ ಕಷ್ಟವೇ. ಕಾರಣ, ಅವರ ರನ್​ರೇಟ್ ಹೇಳಿಕೊಳ್ಳುವಂತಿಲ್ಲ. ಇದೆಲ್ಲದರ ಜೊತೆಗೆ ಅಗ್ರಸ್ಥಾನದಲ್ಲಿರುವ ತಂಡಗಳು ಸೋತರೆ ರಹಾನೆ ಪಡೆಯ ಪ್ಲೇಆಫ್​ ಕನಸು ಇನ್ನಷ್ಟು ಸುಲಭವಾಗಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net