IPL 2026 New Rules ; ಪಂದ್ಯದ ವೇಳೆ ಆಟಗಾರರ ಓಡಾಟಕ್ಕೆ ಬ್ರೇಕ್ ಹಾಕಿದ ಬಿಸಿಸಿಐ: ಏನಿದು 16 ಆಟಗಾರರ ನಿಯಮ?

 IPL 2026 New Rules
IPL 2026 New Rules
Published on

ಪ್ರಮುಖ ಮುಖ್ಯಾಂಶಗಳು

  • ಬಿಸಿಸಿಐ ಮಹತ್ವದ ನಿರ್ಧಾರ: ಆಟಗಾರರ ಅನಗತ್ಯ ಓಡಾಟಕ್ಕೆ ಚೆಕ್; ಬೌಂಡರಿ ಲೈನ್ ಬಳಿ ನಿಲ್ಲುವಂತಿಲ್ಲ ಪ್ಲೇಯರ್ಸ್!
  • ಐಪಿಎಲ್ 2026 ಬಿಸಿಸಿಐ ಹೊಸ ನಿಯಮಗಳು
  • ಇನ್ಮುಂದೆ ಯಾರ್ಯಾರೋ ಮೈದಾನಕ್ಕಿಳಿಯುವಂತಿಲ್ಲ; ಡೆಗೌಟ್‌ಗೆ ಸೀಮಿತರಾದ ಎಕ್ಸ್ಟ್ರಾ ಪ್ಲೇಯರ್ಸ್!
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026 New Rules) ಪಂದ್ಯಗಳ ವೇಳೆ ಮೈದಾನದಲ್ಲಿ ಕಂಡುಬರುವ ಗೊಂದಲ ಮತ್ತು ಅನಗತ್ಯ ಆಟಗಾರರ ಓಡಾಟಕ್ಕೆ ಬ್ರೇಕ್ ಹಾಕಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈಗ ಕಠಿಣ ನಿರ್ಧಾರ ತಳೆದಿದೆ. ಇನ್ಮುಂದೆ ಪಂದ್ಯದ ವೇಳೆ ಬೆಂಚ್ ಕಾಯುವ ಆಟಗಾರರು ಬೌಂಡರಿ ಲೈನ್ ಬಳಿ ಬರುವಂತಿಲ್ಲ! ಅಷ್ಟೇ ಅಲ್ಲದೆ, ಪಂದ್ಯದ ಶಿಸ್ತನ್ನು ಕಾಪಾಡಲು ಹೊಸ 'ಶಿಸ್ತು ಕ್ರಮ'ಗಳನ್ನು ಜಾರಿಗೊಳಿಸಲಾಗಿದೆ.

ಏನಿದು ಹೊಸ ನಿಯಮ?

ಕ್ರಿಕ್‌ಬಜ್ ವರದಿ ಮಾಡಿರುವ ಪ್ರಕಾರ, ಪಂದ್ಯದ ಆರಂಭಕ್ಕೂ ಮುನ್ನ ತಂಡದ ಶೀಟ್‌ನಲ್ಲಿ ಹೆಸರಿಸಲಾದ 16 ಆಟಗಾರರು (ಪ್ಲೇಯಿಂಗ್ 11 ಮತ್ತು 5 ಬದಲಿ ಆಟಗಾರರು) ಮಾತ್ರ ಪಂದ್ಯದ ವೇಳೆ ಮೈದಾನಕ್ಕೆ ಪ್ರವೇಶಿಸಬಹುದು. ಡ್ರಿಂಕ್ಸ್ ಕೊಂಡೊಯ್ಯುವುದು, ಬ್ಯಾಟ್ ನೀಡುವುದು ಅಥವಾ ನಾಯಕನಿಗೆ ಸಂದೇಶ ರವಾನಿಸುವ ಕೆಲಸವನ್ನು ಈ 16 ಮಂದಿ ಮಾತ್ರ ಮಾಡಬೇಕಾಗುತ್ತದೆ.
ಈ ಹಿಂದೆ, ಪಂದ್ಯದ ಭಾಗವಲ್ಲದ ಇತರ ಆಟಗಾರರು (Extra Squad Members) ಕೂಡ ಮೈದಾನಕ್ಕಿಳಿದು ಸಹಾಯ ಮಾಡುತ್ತಿದ್ದರು. ಆದರೆ ಇನ್ಮುಂದೆ ಅಂತಹ ಯಾವುದೇ ಅವಕಾಶವಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಬೌಂಡರಿ ಲೈನ್ ಬಳಿ ಬರುವಂತಿಲ್ಲ 'ಎಕ್ಸ್ಟ್ರಾ' ಪ್ಲೇಯರ್ಸ್!

ಬದಲಿ ಆಟಗಾರರ ಪಟ್ಟಿಯಲ್ಲಿಲ್ಲದ (16 ಮಂದಿ ಹೊರತಾದ) ಉಳಿದ ಸ್ಕ್ವಾಡ್ ಸದಸ್ಯರಿಗೆ ಕೆಲವು ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ. ಅವರು ಮೈದಾನದ ಒಳಗೆ ಯಾವುದೇ ಕಾರಣಕ್ಕೂ ಪ್ರವೇಶಿಸುವಂತಿಲ್ಲ. ಡ್ರಿಂಕ್ಸ್ ಅಥವಾ ಕ್ರೀಡಾ ಉಪಕರಣಗಳನ್ನು ಹೊತ್ತೊಯ್ಯುವಂತಿಲ್ಲ. ಅಲ್ಲದೆ, ಮೈದಾನದಲ್ಲಿರುವ ಆಟಗಾರರಿಗೆ ಯಾವುದೇ ರೀತಿಯ ಸಂದೇಶ ನೀಡುವಂತಿಲ್ಲ.
ಅವರು ಕಡ್ಡಾಯವಾಗಿ 'ಡಗೌಟ್'ನಲ್ಲಿಯೇ ಕುಳಿತುಕೊಳ್ಳಬೇಕು. ಬೌಂಡರಿ ಲೈನ್ ಅಥವಾ ಎಲ್ಇಡಿ (LED) ಬೋರ್ಡ್‌ಗಳ ಬಳಿ ಓಡಾಡುವಂತಿಲ್ಲ ಎಂದು ಬಿಸಿಸಿಐ ಹೊಸ ನಿಯಮದಲ್ಲಿ ಉಲ್ಲೇಖಿಸಲಾಗಿದೆ.

ಬೌಂಡರಿ ಬಳಿ ಕೇವಲ 5 ಆಟಗಾರರಿಗೆ ಮಾತ್ರ ಅವಕಾಶ!

ಬೌಂಡರಿ ಹಗ್ಗದ ಬಳಿ ಚೆಂಡು ಆರಿಸಲು ಅಥವಾ ಆಟಗಾರರಿಗೆ ಸಹಾಯ ಮಾಡಲು 'ಬಿಬ್ಸ್' (Bibs) ಧರಿಸಿದ ಆಟಗಾರರ ಸಂಖ್ಯೆಯನ್ನು ಕೂಡ ಬಿಸಿಸಿಐ ಮಿತಿಗೊಳಿಸಿದೆ.
ಯಾವುದೇ ಸಮಯದಲ್ಲಿ ಬೌಂಡರಿ ಗೆರೆಯ ಸುತ್ತ ಕೇವಲ 5 ಆಟಗಾರರು ಮಾತ್ರ ಇರಲು ಅವಕಾಶವಿದೆ.ಈ ಐವರು ಆಟಗಾರರು ಪ್ಲೇಯಿಂಗ್ 16 ಅಥವಾ ತಂಡದ ಇತರ ಸದಸ್ಯರಲ್ಲಿ ಯಾರಾದರೂ ಆಗಿರಬಹುದು. ಆದರೆ ಸಂಖ್ಯೆ 5 ಮೀರಬಾರದು.

ಬಿಸಿಸಿಐನ ಈ ನಿರ್ಧಾರಕ್ಕೆ ಕಾರಣವೇನು?

ಈ ನಿಯಮವನ್ನು ಏಕೆ ಜಾರಿಗೆ ತರಲಾಗಿದೆ ಎಂಬ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಯಾವುದೇ ಕಾರಣ ನೀಡಿಲ್ಲ. ಆದರೆ, ಪಂದ್ಯದ ವೇಳೆ ಮೈದಾನದಲ್ಲಿ ಶಿಸ್ತು ಕಾಪಾಡುವುದು, ಅನಗತ್ಯ ಸಮಯ ವ್ಯಯ ತಡೆಯುವುದು ಮತ್ತು ಟೆಲಿವಿಷನ್ ಪ್ರಸಾರದ ವೇಳೆ ಮೈದಾನದ ಅಂದವನ್ನು ಕಾಪಾಡುವುದು ಇದರ ಉದ್ದೇಶ ಎನ್ನಲಾಗಿದೆ. ಪಂದ್ಯದ ವೇಳೆ ಅನಗತ್ಯವಾಗಿ ಡಗೌಟ್‌ನಿಂದ ಹೊರಬರುವ ಆಟಗಾರರ ಮೇಲೆ ನಿಯಂತ್ರಣ ಸಾಧಿಸಲು ಬಿಸಿಸಿಐ ಈ ತಂತ್ರ ಹೂಡಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net