ಆತ ಡಮ್ಮಿ ಕ್ಯಾಪ್ಟನ್​... ಸಿಎಸ್​ಕೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಮೊಹಮ್ಮದ್​ ಕೈಫ್​! IPL 2026

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ 19ನೇ ಸೀಸನ್ ಆರಂಭಕ್ಕೆ ಸಕಲ ಸಿದ್ಧತೆಗಳು ಆರಂಭ
  • ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿದೆ ಮಿನಿ ಐಪಿಎಲ್​ ಹರಾಜು
  • ಸಿಎಸ್​ಕೆ ತಂಡದ ಬಗ್ಗೆ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ ಮೊಹಮ್ಮದ್​ ಕೈಫ್
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ( IPL 2026 ) ನ 19ನೇ ಸೀಸನ್ ಆರಂಭಕ್ಕೆ ಸಕಲ ಸಿದ್ಧತೆಗಳು ಆರಂಭವಾಗಿವೆ. ಹತ್ತು ಫ್ರಾಂಚೈಸಿಗಳು ಈಗಾಗಲೇ ತಮ್ಮ ರೀಟೆನ್​ ಮತ್ತು ರಿಲೀಸ್​ ಪಟ್ಟಿಗಳನ್ನು ಬಿಡುಗಡೆ ಮಾಡಿದ್ದು, ಹರಾಜಿಗೆ ಸಿದ್ಧವಾಗಿವೆ. ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿರುವ ಹರಾಜಿನಲ್ಲಿ ಭಾಗವಹಿಸಲು ಮತ್ತು ಉತ್ತಮ ಆಟಗಾರರನ್ನು ಖರೀದಿಸಲು ತಮ್ಮದೇಯಾದ ತಂತ್ರಗಳನ್ನು ಸಿದ್ಧಪಡಿಸುತ್ತಿದ್ದಾರೆ.
ಸದ್ಯ ಎಂಟು ತಂಡಗಳು ಈಗಾಗಲೇ ತಮ್ಮ ನಾಯಕರನ್ನು ಅಂತಿಮಗೊಳಿಸಿವೆ. ರುತುರಾಜ್ ಗಾಯಕ್ವಾಡ್ ಅವರು ತಮ್ಮ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ (CSK) ಈಗಾಗಲೇ ಘೋಷಣೆ ಮಾಡಿದೆ. ಆರಂಭದಲ್ಲಿ ಸಂಜು ಸ್ಯಾಮ್ಸನ್​ ನಾಯಕರಾಗುತ್ತಾರೆ ಎಂದು ಹೇಳಲಾಗಿತ್ತು. ಏಕೆಂದರೆ, ರವೀಂದ್ರ ಜಡೇಜಾ ಅವರನ್ನು ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ವರ್ಗಾಯಿಸಿದ ಸಿಎಸ್​ಕೆ, 18 ಕೋಟಿ ರೂ. ಕೊಟ್ಟು ಅಲ್ಲಿಂದ ಸಂಜು ಸ್ಯಾಮ್ಸನ್​ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಹೀಗಾಗಿ ನಾಯಕತ್ವದ ಜವಾಬ್ದಾರಿ ಸಂಜುಗೆ ಹಸ್ತಾಂತರವಾಗಲಿದೆ ಎಂಬ ಮಾತುಗಳು ಕೇಳಿಬಂದಿತ್ತು. ಆದಾಗ್ಯೂ, ಮ್ಯಾನೇಜ್‌ಮೆಂಟ್ ರುತುರಾಜ್​ ಕಡೆಗೆ ವಾಲಿದೆ.
ತಂಡಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವ ಸಂಜು ಸ್ಯಾಮ್ಸನ್ ಅವರನ್ನು ಸದ್ಯಕ್ಕೆ ಉಪನಾಯಕನನ್ನಾಗಿ ನೇಮಿಸಲು ಸಿಎಸ್‌ಕೆ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. ಇದರ ನಡುವೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಸಿಎಸ್​ಕೆ ತಂಡದ ಬಗ್ಗೆ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ.
ರುತುರಾಜ್ ಗಾಯಕ್ವಾಡ್ ಅವರನ್ನು ಕೇವಲ ಕಾಗದದ ಮೇಲಿನ ನಾಯಕ ಎಂದು ಕೈಫ್​ ಕರೆದಿದ್ದಾರೆ. ಕೈಫ್​ ಪ್ರಕಾರ, ರುತುರಾಜ್​ ಕೇವಲ ಡಮ್ಮಿ ಕ್ಯಾಪ್ಟನ್. ಮೈದಾನದಲ್ಲಿ ಮತ್ತು ಮೈದಾನದಿಂದಾಚೆಗೆ ನಿಜವಾದ ನಾಯಕ ಯಾರೆಂದರೆ ಮಹೇಂದ್ರ ಸಿಂಗ್ ಧೋನಿ ಎಂದು ಕೈಫ್ ಹೇಳಿದ್ದಾರೆ. ಧೋನಿ ಅವರು ಅಂತಿಮ ತಂಡದಲ್ಲಿ ಏಕಿರುತ್ತಾರೆ ಅಂದರೆ, ಬ್ಯಾಟಿಂಗ್ ಮಾಡುವುದಕ್ಕಾಗಿ ಅಲ್ಲ, ಅವರು 20 ಓವರ್‌ ವಿಕೆಟ್ ಕೀಪಿಂಗ್ ಮಾಡುತ್ತಾರೆ ಮತ್ತು 20 ಓವರ್‌ಗಳಿಗೆ ನಾಯಕನಾಗಲು ಮಾತ್ರ ತಂಡದಲ್ಲಿರುತ್ತಾರೆ. ಅಲ್ಲದೆ, ಮೈದಾನದಲ್ಲಿರುವ ಇತರ ಆಟಗಾರರಿಗೆ ಹೇಗೆ ಆಡಬೇಕೆಂದು ಮಾರ್ಗದರ್ಶನ ನೀಡುತ್ತಾರೆ ಎಂದು ಕೈಫ್​ ಹೇಳಿದರು.
ಧೋನಿ ಅವರು ಗಾಯಕ್ವಾಡ್‌ಗೆ ಮಾರ್ಗದರ್ಶನ ನೀಡಲು ಮೈದಾನದಲ್ಲಿರುತ್ತಾರೆ. ಎಲ್ಲವೂ ಧೋನಿಯ ಕಣ್ಗಾವಲಿನಲ್ಲಿದೆ. ಧೋನಿ ಮೈದಾನದಲ್ಲಿ ಮಾರ್ಗದರ್ಶಕ ಮತ್ತು ನಾಯಕನಾಗಿ ಮಾತ್ರ ಹೆಜ್ಜೆ ಹಾಕುತ್ತಾರೆ. ಕಾಗದದ ಮೇಲೆ ಮಾತ್ರ ಗಾಯಕ್ವಾಡ್ ಅವರು ನಾಯಕರಾಗಿರುತ್ತಾರೆ. ಆದ್ದರಿಂದ ಧೋನಿ ಇಂಪ್ಯಾಕ್ಟ್​ ಆಟಗಾರನಾಗುತ್ತಾನೆ ಎಂದು ಭಾವಿಸುವುದು ತಪ್ಪು. ಧೋನಿ ಸ್ವತಃ ಈ ನಿರ್ಧಾರವನ್ನು ತೆಗೆದುಕೊಳ್ಳದ ಹೊರತು, ಅವರು ಇಂಪ್ಯಾಕ್ಟ್​ ಆಟಗಾರನಾಗುವ ಯಾವುದೇ ಅವಕಾಶವಿಲ್ಲ ಎಂದು ಕೈಫ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಚೆನ್ನೈ ತಂಡವನ್ನು ಐದು ಬಾರಿ ಚಾಂಪಿಯನ್ನಾಗಿ ಮಾಡಿದ ಕೀರ್ತಿ ಧೋನಿಗೆ ಸಲ್ಲುತ್ತದೆ. 2022 ರಲ್ಲಿ ಧೋನಿ ಅವರು ತಮ್ಮ ಉತ್ತರಾಧಿಕಾರಿಯಾಗಿ ರವೀಂದ್ರ ಜಡೇಜಾ ಅವರ ಹೆಸರನ್ನು ಘೋಷಣೆ ಮಾಡಿದರು. ಆದರೆ, ಸತತ ಪಂದ್ಯಗಳಲ್ಲಿ ಸೋತ ನಂತರ ಜಡೇಜಾ ಅವರನ್ನು ಮಧ್ಯದಲ್ಲಿಯೇ ನಾಯಕತ್ವದಿಂದ ಕೆಳಗೆ ಇಳಿಸಲಾಯಿತು. ಈ ವೇಳೆ ಧೋನಿ ಮತ್ತೆ ನಾಯಕತ್ವ ವಹಿಸಿಕೊಂಡರು. ನಂತರ 2024 ರಲ್ಲಿ, ಅವರು ನಾಯಕತ್ವವನ್ನು ರುತುರಾಜ್ ಗಾಯಕ್ವಾಡ್ ಅವರಿಗೆ ಹಸ್ತಾಂತರಿಸಿದರು. ಆದರೆ 2025 ರಲ್ಲಿ, ರುತುರಾಜ್​ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಾಗ ಧೋನಿ ಮತ್ತೆ ಜವಾಬ್ದಾರಿಯನ್ನು ವಹಿಸಿಕೊಂಡರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net