ಅಹಮದಾಬಾದ್: ವಿಶ್ವದ ಶ್ರೀಮಂತ ಟಿ20 ಲೀಗ್ ಐಪಿಎಲ್ನಲ್ಲಿ (IPL) ಮೊದಲ ಕಪ್ ಗೆಲ್ಲಲು ಬರೋಬ್ಬರಿ 18 ವರ್ಷಗಳ ಕಾಲ ಕಾದಿದ್ದ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇದೀಗ ಒಂದೇ ವರ್ಷದ ಅಂತರದಲ್ಲಿ ಎರಡನೇ ಚಾಂಪಿಯನ್ ಪಟ್ಟಕ್ಕೇರುವ ಹೊಸ್ತಿಲಲ್ಲಿ ಬಂದು ನಿಂತಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಐಪಿಎಲ್ 19ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಆರ್ಸಿಬಿ ತಂಡ ಗುಜರಾತ್ ಟೈಟಾನ್ಸ್ ಎದುರು ಸೆಣಸಾಡಲಿದೆ. ಈ ಕಾದಾಟದಲ್ಲಿ ಯಾರೇ ಗೆದ್ದರೂ 2ನೇ ಬಾರಿ ಐಪಿಎಲ್ ಕಿರೀಟ ಒಲಿಸಿಕೊಳ್ಳಲಿದ್ದಾರೆ. ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿರುವ ಮತ್ತು ಟೂರ್ನಿಯುದ್ದಕ್ಕೂ ಸ್ಥಿರ ನಿರ್ವಹಣೆ ತೋರುತ್ತ ಬಂದಿರುವ ರಜತ್ ಪಾಟೀದಾರ್ ಪಡೆ ಈ ಪಂದ್ಯದಲ್ಲಿ ಫೇವರಿಟ್ ತಂಡವಾಗಿ ಕಣಕ್ಕಿಳಿಯಲಿದ್ದು, ಸತತ 2ನೇ ಬಾರಿ ಕಪ್ ಗೆದ್ದು ಹೊಸ ಇತಿಹಾಸ ನಿರ್ಮಿಸುವ ಹಂಬಲದಲ್ಲಿದೆ. "ಈ ಸಲ ಕಪ್ ನಮ್ದೇ' ಎಂಬ ಅಭಿಮಾನಿಗಳ ಆಸೆಯನ್ನು ಕೊನೆಗೂ ಕಳೆದ ವರ್ಷ ಈಡೇರಿಸಿದ್ದ ಆರ್ಸಿಬಿ, "ಈ ಸಲ ಕೂಡ ಕಪ್ ನಮ್ದೇ' ಎಂಬ ಈ ಬಾರಿಯ ಪರಿಷ್ಕೃತ ಘೋಷವಾಕ್ಯವನ್ನೂ ನನಸಾಗಿಸಲು ಸರ್ವಸನ್ನದ್ಧವಾಗಿದೆ. ಮತ್ತೊಂದೆಡೆ ಭಾರತ ಟೆಸ್ಟ್-ಏಕದಿನ ತಂಡದ ಸಾರಥಿ ಶುಭಮಾನ್ ಗಿಲ್, "ಐಪಿಎಲ್ ಟ್ರೋಫಿ' ಗೆದ್ದ ನಾಯಕರ ಪಟ್ಟಿಗೆ ಸೇರುವ ತವಕದಲ್ಲಿದ್ದಾರೆ.