ಏಕದಿನ ವಿಶ್ವ ಚಾಂಪಿಯನ್ ಭಾರತ ತಂಡದ ಕನಸು ಭಗ್ನ: ದೀಪ್ತಿ ಶರ್ಮ ದಾಖಲೆ, ಪಂದ್ಯಕ್ಕೆ ವಿರುಷ್ಕಾ ಹಾಜರಿ!

ಏಕದಿನ ವಿಶ್ವ ಚಾಂಪಿಯನ್ ಭಾರತ ತಂಡದ ಕನಸು ಭಗ್ನ: ದೀಪ್ತಿ ಶರ್ಮ ದಾಖಲೆ, ಪಂದ್ಯ ವೀಕ್ಷಿಸಿದ ವಿರುಷ್ಕಾ
ಏಕದಿನ ವಿಶ್ವ ಚಾಂಪಿಯನ್ ಭಾರತ ತಂಡದ ಕನಸು ಭಗ್ನ: ದೀಪ್ತಿ ಶರ್ಮ ದಾಖಲೆ, ಪಂದ್ಯ ವೀಕ್ಷಿಸಿದ ವಿರುಷ್ಕಾ
Published on
ಲಾರ್ಡ್ಸ್: ಹಾಲಿ ಏಕದಿನ ವಿಶ್ವ ಚಾಂಪಿಯನ್ ಭಾರತ ಮಹಿಳಾ ತಂಡ ಟಿ20 ವಿಶ್ವಕಪ್ ಜಯಿಸುವ ಕನಸು ಭಗ್ನಗೊಂಡಿದ್ದು, ಐಸಿಸಿ ಚುಟುಕು ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಬರ ಮುಂದುವರಿದಿದೆ. ನಾಯಕಿ ಹರ್ಮಾನ್‌ಪ್ರೀತ್ ಕೌರ್ (56 ರನ್, 27 ಎಸೆತ, 6 ಬೌಂಡರಿ, 3 ಸಿಕ್ಸರ್) ಅರ್ಧಶತಕದ ನಡುವೆಯೂ ಭಾರತ ತಂಡ 5ನೇ ಹಾಗೂ ಕೊನೇ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 6 ವಿಕೆಟ್‌ಗಳ ಸೋಲು ಅನುಭವಿಸಿತು. ಇದರೊಂದಿಗೆ ಕಳೆದ ವರ್ಷದ ಏಕದಿನ ವಿಶ್ವಕಪ್ ಸೆಮೀಸ್ ಸೋಲಿನ ಮುಯ್ಯಿ ತೀರಿಸಿಕೊಂಡ ಆಸೀಸ್, ಸತತ ಐದನೇ ಜಯದೊಂದಿಗೆ ಗುಂಪಿನ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿತು.
ಲಾಡ್ಸ್ ಮೈದಾನದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತಕ್ಕೆ ಸ್ಮತಿ ಮಂದನಾ (38) ಮತ್ತು ಶೆಫಾಲಿ ವರ್ಮ (34) ಜೋಡಿ ಮೊದಲ ವಿಕೆಟ್‌ಗೆ 55 ಎಸೆತಗಳಲ್ಲಿ 66 ರನ್ ಸೇರಿಸಿತು. ನಂತರ ಹರ್ಮಾನ್‌ಪ್ರೀತ್-ಜೆಮೀಮಾ ರೋಡ್ರಿಗಸ್ (34) 3ನೇ ವಿಕೆಟ್‌ಗೆ 45 ಎಸೆತಗಳಲ್ಲಿ 64 ರನ್‌ಗಳಿಸಿದರು. ಕೊನೇ ಓವರ್‌ನಲ್ಲಿ ಮೂರು ಸಿಕ್ಸರ್ ಸಹಿತ ಹರ್ಮಾನ್‌ಪ್ರೀತ್ ಬಿರುಸಿನಾಟದ ಬಲದಿಂದ ಭಾರತ 4 ವಿಕೆಟ್‌ಗೆ 170 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.
ಪ್ರತಿಯಾಗಿ 60 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಆಸೀಸ್ ಸಂಕಷ್ಠಕ್ಕೆ ಸಿಲುಕಿತು. ಆಗ, ಎಲ್ಲಿಸ್ ಪೆರ‌್ರಿ (56 ರನ್, 38 ಎಸೆತ, 8 ಬೌಂಡರಿ) ಮತ್ತು ಆಶ್ಲೇ ಗಾರ್ಡ್‌ನರ್ (53* ರನ್, 29 ಎಸೆತ, 3 ಬೌಂಡರಿ, 3 ಸಿಕ್ಸರ್) ಜೋಡಿ 4ನೇ ವಿಕೆಟ್‌ಗೆ 59 ಎಸೆತಗಳಲ್ಲಿ ಭರ್ತಿ 100 ರನ್‌ಗಳಿಸಿ ಚೇಸಿಂಗ್ ಸುಲಭಗೊಳಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 19 ಓವರ್‌ಗಳಲ್ಲಿ 4 ವಿಕೆಟ್‌ಗೆ 172 ರನ್‌ಗಳಿಸಿ ಗೆದ್ದು ಬೀಗಿತು.
ಭಾರತ: 4 ವಿಕೆಟ್‌ಗೆ 170 (ಸ್ಮತಿ 38, ಶೆಫಾಲಿ 34, ಜೆಮೀಮಾ 34, ಹರ್ಮಾನ್‌ಪ್ರೀತ್ 56, ರಿಚಾ 1*, ದೀಪ್ತಿ ಶರ್ಮ 4*, ಮೊಲಿನೆಕ್ಸ್ 46ಕ್ಕೆ 2). ಆಸ್ಟ್ರೇಲಿಯಾ: 19 ಓವರ್‌ಗಳಲ್ಲಿ 4 ವಿಕೆಟ್‌ಗೆ 172 (ಜಾರ್ಜಿಯ ವೊಲ್ 4, ಬೆಥ್ ಮೂನಿ 22, ಲಿಚ್ಛ್‌ಫೀಲ್ಡ್ 24, ಎಲ್ಲಿಸ್ ಪೆರ‌್ರಿ 56, ಆಶ್ಲೇ ಗಾರ್ಡ್‌ನರ್ 53*, ವೇರ್ ಹ್ಯಾಂ 4*, ಶ್ರೀಚರಣಿ 32ಕ್ಕೆ 2, ದೀಪ್ತಿ 31ಕ್ಕೆ 1).
25. ಹರ್ಮಾನ್‌ಪ್ರೀತ್ ಕೌರ್ (25 ಎಸೆತ) ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಅತಿಕಡಿಮೆ ಎಸೆತಗಳಲ್ಲಿ ಸಿಡಿಸಿದ ಅರ್ಧಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿರು. ಇದಕ್ಕೆ ಮುನ್ನ 2024ರಲ್ಲಿ ಲಂಕಾ ಎದುರು 27 ಎಸೆತಗಳಲ್ಲಿ ಗಳಿಸಿದ್ದರು.
ದ.ಆಫ್ರಿಕಾಗೆ ರೋಚಕ ಜಯ
ಅನ್ನೆರಿ ಡಕೆರ್ಸನ್ (45 ರನ್, 45 ಎಸೆತ, 2 ಬೌಂಡರಿ, 2 ಸಿಕ್ಸರ್) ಸಮಯೋಚಿತ ಆಟದ ನೆರವಿನಿಂದ ದ.ಆಫ್ರಿಕಾ ತಂಡ, ಬಾಂಗ್ಲಾದೇಶ ಎದುರು 4 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಇದರೊಂದಿಗೆ ಆಡಿದ 5ರಲ್ಲಿ 4 ಜಯ, 1 ಸೋಲಿನೊಂದಿಗೆ 6 ಅಂಕ ಕಲೆಹಾಕಿ, ಸೆಮೀಸ್ ಆಸೆ ಜೀವಂತವಿರಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 5 ವಿಕೆಟ್‌ಗೆ 117 ರನ್‌ಗಳ ಸಾಧಾರಣ ಮೊತ್ತ ಪೇರಿಸಿದರೆ, ಪ್ರತಿಯಾಗಿ ದ.ಆಫ್ರಿಕಾ 19.2 ಓವರ್‌ಗಳಲ್ಲಿ 6 ವಿಕೆಟ್‌ಗೆ 118 ರನ್‌ಗಳಿಸಿ ಗೆದ್ದು ಬೀಗಿತು. ಆಸ್ಟ್ರೇಲಿಯಾ ಎದುರು ಭಾರತ ತಂಡದ ಸೋಲು ಖಚಿತವಾಗುತ್ತಿದ್ದಂತೆ, ಗುಂಪಿನ ಎರಡನೇ ಸ್ಥಾನಿಯಾಗಿ ದ.ಆಫ್ರಿಕಾ ಸೆಮಿಫೈನಲ್ ಅರ್ಹತೆ ಗಿಟ್ಟಿಸಿಕೊಂಡಿತು.
ಪಂದ್ಯ ವೀಕ್ಷಿಸಿದ ವಿರುಷ್ಕಾ
ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸಿ ಜತೆಗೆ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮ ಭಾರತ-ಆಸೀಸ್ ಪಂದ್ಯದ ಪ್ರೇಕ್ಷಕರ ಸಾಲಿನಲ್ಲಿ ಕಾಣಿಸಿಕೊಂಡರು. ಶಿಖರ್ ಧವನ್ ಸಹ ಹಾಜರಿದ್ದರು.
ಸೆಮಿಫೈನಲ್
ವಿಂಡೀಸ್-ಆಸ್ಟ್ರೇಲಿಯಾ
ಯಾವಾಗ: ಜೂ.30
ಆರಂಭ: ರಾತ್ರಿ 7.00
ಎರಡನೇ ಸೆಮಿಫೈನಲ್
ಇಂಗ್ಲೆಂಡ್-ದ.ಆಫ್ರಿಕಾ
ಯಾವಾಗ: ಜುಲೈ 2
ಆರಂಭ: ರಾತ್ರಿ 11.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್.
1. ದೀಪ್ತಿ ಶರ್ಮ (356) ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಸರ್ವಾಧಿಕ ವಿಕೆಟ್ ಕಬಳಿಸಿದ ಜೂಲನ್ ಗೋಸ್ವಾಮಿ (355) ದಾಖಲೆ ಹಿಂದಿಕ್ಕಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net