ದಾಖಲೆಯ ಎಂಟನೇ ಬಾರಿ ಏಷ್ಯಾಕಪ್ ಗೆದ್ದ ಭಾರತ ತಂಡ: 2024ರ ಸೋಲಿಗೆ ಮುಯ್ಯಿ ತೀರಿಸಿಕೊಂಡ ಹರ್ಮಾನ್​ಪ್ರೀತ್ ಪಡೆ!

ದಾಖಲೆಯ ಎಂಟನೇ ಬಾರಿ ಏಷ್ಯಾಕಪ್ ಗೆದ್ದ ಭಾರತ ತಂಡ: 2024ರ ಸೋಲಿಗೆ ಮುಯ್ಯಿ ತೀರಿಸಿಕೊಂಡ ಹರ್ಮಾನ್​ಪ್ರೀತ್ ಪಡೆ!
ದಾಖಲೆಯ ಎಂಟನೇ ಬಾರಿ ಏಷ್ಯಾಕಪ್ ಗೆದ್ದ ಭಾರತ ತಂಡ: 2024ರ ಸೋಲಿಗೆ ಮುಯ್ಯಿ ತೀರಿಸಿಕೊಂಡ ಹರ್ಮಾನ್​ಪ್ರೀತ್ ಪಡೆ!
Published on
ದುಬೈ: ದಾಖಲೆಯ ಎಂಟನೇ ಬಾರಿಗೆ ಭಾರತ ತಂಡ ಮಹಿಳಾ ಟಿ20 ಏಷ್ಯಾಕಪ್ ಟೂರ್ನಿಯಲ್ಲಿ ಚಾಂಪಿಯನ್ ಎನಿಸಿದೆ. ಶೆಫಾಲಿ ವರ್ಮ (68 ರನ್, 39 ಎಸೆತ, 9 ಬೌಂಡರಿ, 2 ಸಿಕ್ಸರ್) ಮತ್ತು ಉಪನಾಯಕಿ ಸ್ಮತಿ ಮಂದನಾ (59 ರನ್, 39 ಎಸೆತ, 5 ಬೌಂಡರಿ, 3 ಸಿಕ್ಸರ್) ಬಿರುಸಿನ ಅರ್ಧಶತಕದ ಬಲದಿಂದ ಹರ್ಮಾನ್‌ಪ್ರೀತ್ ಕೌರ್ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಎದುರು 72 ರನ್‌ಗಳ ಗೆಲುವು ದಾಖಲಿಸಿತು. ಇದರೊಂದಿಗೆ ಪುರುಷರ ನಂತರ ಮಹಿಳೆಯರ ವಿಭಾಗದಲ್ಲೂ ಭಾರತ ತಂಡ ಏಷ್ಯಾದ ಕ್ರಿಕೆಟ್ ಚಾಂಪಿಯನ್‌ಪಟ್ಟಕ್ಕೇರಿತು.  
ದುಬೈ ಸ್ಟೇಡಿಯಂನಲ್ಲಿ ನಡೆದ ಪ್ರಶಸ್ತಿ ಕದನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡಕ್ಕೆ ಶೆಫಾಲಿ-ಸ್ಮತಿ ಜೋಡಿ ಮೊದಲ ವಿಕೆಟ್‌ಗೆ 77 ಎಸೆತಗಳಲ್ಲಿ 129 ರನ್ ಕೂಡಿಹಾಕುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟಿತು. ಇದರಿಂದ ಭಾರತ ತಂಡ 5 ವಿಕೆಟ್‌ಗೆ 183 ರನ್‌ಗಳ ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು. 
ಪ್ರತಿಯಾಗಿ ಶ್ರೀಚರಣಿ (20ಕ್ಕೆ 4) ಹಾಗೂ ಅನುಭವಿ ದೀಪ್ತಿ ಶರ್ಮ (19ಕ್ಕೆ 3) ಸ್ಪಿನ್ ದಾಳಿಗೆ ತತ್ತರಿಸಿದ ಶ್ರೀಲಂಕಾ ಭರ್ತಿ 20 ಓವರ್‌ಗಳಲ್ಲಿ 111 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ 2024ರ ಸೋಲಿಗೆ ಮುಯ್ಯಿ ತೀರಿಸಿಕೊಂಡ ಭಾರತ ಟಿ20 ಮಾದರಿಯಲ್ಲಿ 4ನೇ ಬಾರಿಗೆ ಪ್ರಶಸ್ತಿ ಜಯಿಸಿತು. ಭಾರತ ಹಾಗೂ ಶ್ರೀಲಂಕಾ ತಂಡಗಳು ಫೈನಲ್‌ನಲ್ಲಿ ಎದುರಾದ 7ನೇ ದೃಷ್ಟಾಂತ ಇದಾಗಿತ್ತು.
ಭಾರತ: 5 ವಿಕೆಟ್‌ಗೆ 183 (ಸ್ಮತಿ 59, ಶೆಫಾಲಿ 68, ಹರ್ಮಾನ್‌ಪ್ರೀತ್ 14, ರಿಚಾ 17, ದೀಪ್ತಿ 5, ಭಾರತಿ 2*, ಜಿ. ಕಮಲಿನಿ 15*, ಮಿಥಾಲಿ 33ಕ್ಕೆ 1, ಚಾಮರಿ 34ಕ್ಕೆ 1, ಚಾಮುಡಿ 40ಕ್ಕೆ 1). ಶ್ರೀಲಂಕಾ: 20 ಓವರ್‌ಗಳಲ್ಲಿ 111 (ಇಮಿಷಾ 4, ಚಾಮರಿ 36, ವಿಶ್ಮಿ 20, ಹರ್ಷಿತಾ 9, ನಿಲಾಕ್ಷಿಕಾ 22, ಕವಿಷಾ 7, ಶ್ರೀಚರಣಿ 20ಕ್ಕೆ 4, ದೀಪ್ತಿ ಶರ್ಮ 19ಕ್ಕೆ 3). ಗರಿಷ್ಠ ರನ್ ಸ್ಕೋರರ್: ಶೆಫಾಲಿ ವರ್ಮ (236 ರನ್), ಗರಿಷ್ಠ ವಿಕೆಟ್ ಟೇಕರ್: ದೀಪ್ತಿ ಶರ್ಮ (14).
8. ಭಾರತ ತಂಡ 8ನೇ ಬಾರಿಗೆ ಮಹಿಳೆಯರ ಏಷ್ಯಾಕಪ್ ಜಯಿಸಿತು. ಇದಕ್ಕೆ ಮುನ್ನ 4 ಬಾರಿ (2004, 2005, 2006, 2008) ಏಕದಿನ ಹಾಗೂ 3 ಸಲ (2012, 2016, 2022) ಟಿ20ಯಲ್ಲಿ ಚಾಂಪಿಯನ್ ಎನಿಸಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net