ಆಸೀಸ್ ವಿರುದ್ಧ ಜಿಂಬಾಬ್ವೆ ಗೆದ್ದಾಗ ಭಾರತಕ್ಕೆ ಟ್ರೋಫಿ!: ಹೀಗಿದೆ ಇತಿಹಾಸ...

ಆಸೀಸ್ ವಿರುದ್ಧ ಜಿಂಬಾಬ್ವೆ ಗೆದ್ದಾಗ ಭಾರತಕ್ಕೆ ಟ್ರೋಫಿ!: ಹೀಗಿದೆ ಇತಿಹಾಸ...
ಆಸೀಸ್ ವಿರುದ್ಧ ಜಿಂಬಾಬ್ವೆ ಗೆದ್ದಾಗ ಭಾರತಕ್ಕೆ ಟ್ರೋಫಿ!: ಹೀಗಿದೆ ಇತಿಹಾಸ...
Published on
ಕೊಲಂಬೊ: ಜಿಂಬಾಬ್ವೆ ತಂಡ ಐಸಿಸಿ ಟಿ20 ವಿಶ್ವಕಪ್ 10ನೇ ಆವೃತ್ತಿಯಲ್ಲಿ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ಟೂರ್ನಿಯ ಮೊದಲ ಅಚ್ಚರಿಯ ಫಲಿತಾಂಶ ನೀಡಿದೆ. ಆರಂಭಿಕ ಬ್ರಿಯಾನ್ ಬೆನೆಟ್ (64* ರನ್, 56 ಎಸೆತ, 7 ಬೌಂಡರಿ) ಎಚ್ಚರಿಕೆಯ ಬ್ಯಾಟಿಂಗ್ ಹಾಗೂ ವೇಗಿ ಬ್ಲೆಸಿಂಗ್ ಮುಜರಬಾನಿ (17ಕ್ಕೆ 4) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಜಿಂಬಾಬ್ವೆ ಬಿ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 23 ರನ್‌ಗಳ ಗೆಲುವು ಒಲಿಸಿಕೊಂಡಿದೆ. ಇದರೊಂದಿಗೆ ಸಿಕಂದರ್ ರಾಜಾ ಬಳಗ ಸೂಪರ್-8 ಅರ್ಹತೆ ಜೀವಂತವಿರಿಸಿದ್ದು, ಸಹ ಆತಿಥೇಯ ಶ್ರೀಲಂಕಾ, ಆಸ್ಟ್ರೇಲಿಯಾ ತಂಡದೊಂದಿಗೆ ತ್ರಿಕೋನ ಸ್ಪರ್ಧೆಗೆ ನಿಂತಿದೆ.
ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಜಿಂಬಾಬ್ವೆ ನಿಧಾನಗತಿಯ ಪಿಚ್‌ನಲ್ಲಿ ಎಚ್ಚರಿಕೆಯ ಆಟ ಪ್ರದರ್ಶಿಸಿತು. ಬ್ರಿಯಾನ್ ಬೆನೆಟ್ ಮತ್ತು ತದಿವನಾಶೆ ಮರುಮಣಿ (35) ಒದಗಿಸಿದ ಉತ್ತಮ ಆರಂಭದ ನೆರವಿನಿಂದ 2 ವಿಕೆಟ್‌ಗೆ 169 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಕಾಯಂ ನಾಯಕ ಮಿಚೆಲ್ ಮಾರ್ಷ್ ಗೈರಿನಲ್ಲಿ ಚೇಸಿಂಗ್‌ಗೆ ಇಳಿದ ಆಸೀಸ್ ತಂಡಕ್ಕೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕೈಕೊಟ್ಟರು. ಮುಜರ್‌ಬಾನಿ ಮತ್ತು ಬ್ರಾಡ್ ಇವಾನ್ಸ್ (23ಕ್ಕೆ 3) ಪರಿಣಾಮಕಾರಿ ದಾಳಿಗೆ ತತ್ತರಿಸಿದ ಆಸೀಸ್ 29 ರನ್‌ಗಳಿಗೆ 4 ವಿಕೆಟ್ ಕೈಚೆಲ್ಲಿತು. ಆಗ, ಮ್ಯಾಟ್ ರೇನ್‌ಷಾ (65 ರನ್, 44 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (31) 59 ಎಸೆತಗಳಲ್ಲಿ 77 ರನ್‌ಗಳಿಸಿದರೂ, ಕೆಳ ಕ್ರಮಾಂಕದ ಕುಸಿತದಿಂದ ಆಸೀಸ್ 19.3 ಓವರ್‌ಗಳಲ್ಲಿ 146 ರನ್‌ಗಳಿಗೆ ಸರ್ವಪತನ ಕಂಡಿತು. ಆಟಗಾರರ ಗಾಯದ ಸಮಸ್ಯೆಯಿಂದ ಒತ್ತಡದಲ್ಲಿ ಸಿಲುಕಿರುವ ಕಾಂಗರೂ ಈಗ ಲೀಗ್ ಹಂತದಲ್ಲಿಯೇ ಹೊರಬೀಳುವ ಭೀತಿಯಲ್ಲಿದೆ.
ಜಿಂಬಾಬ್ವೆ: 2 ವಿಕೆಟ್‌ಗೆ 169 (ಬ್ರಿಯಾನ್ ಬೆನೆಟ್ 64*, ಮರುಮಣಿ 35, ರ‌್ಯಾನ್ ಬರ್ಲ್ 35, ಸಿಕಂದರ್ 25*, ಗ್ರೀನ್ 6ಕ್ಕೆ 1). ಆಸ್ಟ್ರೇಲಿಯಾ: 19.3 ಓವರ್‌ಗಳಲ್ಲಿ 146 (ಜೋಶ್ ಇಂಗ್ಲಿಸ್ 8, ಟ್ರಾವಿಸ್ ಹೆಡ್ 17, ಕ್ಯಾಮರಾನ್ ಗ್ರೀನ್ 0, ಟಿಮ್ ಡೇವಿಡ್ 0, ಗ್ಲೆನ್ ಮ್ಯಾಕ್ಸ್‌ವೆಲ್ 31, ರೇನ್ ಷಾ 65, ಸ್ಟೋಯಿನಿಸ್ 6, ಡ್ವಾಶುರ್ಯಿಸ್ 6, ನಾಥನ್ ಎಲ್ಲಿಸ್ 7*, ಜಂಪಾ 2, ಮುಜರಬಾನಿ 17ಕ್ಕೆ 4, ಇವಾನ್ಸ್ 23ಕ್ಕೆ 3). ಪಂದ್ಯಶ್ರೇಷ್ಠ: ಬ್ಲೆಸಿಂಗ್ ಮುಜರಬಾನಿ 
2. ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ಎದುರು ಸೋತ ಎರಡನೇ ದೃಷ್ಟಾಂತ ಇದಾಗಿದೆ. ಉಭಯ ತಂಡಗಳು 2007ರಲ್ಲಿ ಮೊದಲ ಬಾರಿ ಎದುರಾದಾಗ ಜಿಂಬಾಬ್ವೆ 5 ವಿಕೆಟ್‌ಗಳಿಂದ ಗೆದ್ದಿತ್ತು. 
3. ಬ್ಲೆಸಿಂಗ್ ಮುಜರ್‌ಬಾನಿ ಟಿ20ಯಲ್ಲಿ 100 ವಿಕೆಟ್ ಪೂರೈಸಿದ ಜಿಂಬಾಬ್ವೆಯ ಮೂರನೇ ಬೌಲರ್. ರಿಚರ್ಡ್ ಎನ್‌ಗವರ (111), ಸಿಕಂದರ್ ರಾಜಾ (103) ಮೊದಲಿಬ್ಬರು. 
ಆಸೀಸ್ ವಿರುದ್ಧ ಜಿಂಬಾಬ್ವೆ 
ಗೆದ್ದಾಗ ಭಾರತಕ್ಕೆ ಟ್ರೋಫಿ!
ಐಸಿಸಿ ಟೂರ್ನಿಗಳಲ್ಲಿ ಈ ಹಿಂದೆ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಗೆಲುವು ಒಲಿಸಿಕೊಂಡಾಗ ಆ ಟೂರ್ನಿಯಲ್ಲಿ ಭಾರತ ತಂಡವೇ ಪ್ರಶಸ್ತಿ ಗೆದ್ದುಕೊಂಡಿತ್ತು. ಇದರಿಂದ ಈ ಬಾರಿಯೂ ಆತಿಥೇಯ ಭಾರತ ಮತ್ತೊಮ್ಮೆ ಚಾಂಪಿಯನ್ ಆಗುವ ನಿರೀಕ್ಷೆ ಹರಡಿದೆ. 1983ರ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಎದುರು ಜಿಂಬಾಬ್ವೆ 13 ರನ್‌ಗಳಿಂದ ಗೆದ್ದಾಗ ಕಪಿಲ್ ದೇವ್ ಸಾರಥ್ಯದಲ್ಲಿ ಭಾರತ ಚೊಚ್ಚಲ ಐಸಿಸಿ ಟ್ರೋಫಿ ಜಯಿಸಿತ್ತು. 2007ರ ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ತಂಡ ಆಸೀಸ್‌ಗೆ ಶಾಕ್ ನೀಡಿದಾಗ, ಎಂಎಸ್ ಧೋನಿ ಬಳಗ ಉದ್ಘಾಟನಾ ಆವೃತ್ತಿಯ ಚಾಂಪಿಯನ್ ಆಗಿತ್ತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net