ವಿಂಡೀಸ್​ ವಿರುದ್ಧ ಏಕದಿನ ಸರಣಿಗೆ ಕನ್ನಡಿಗ ಕೆಎಲ್​ ರಾಹುಲ್​ ಉಪನಾಯಕ?

ವಿಂಡೀಸ್​ ವಿರುದ್ಧ ಏಕದಿನ ಸರಣಿಗೆ ಕನ್ನಡಿಗ ಕೆಎಲ್​ ರಾಹುಲ್​ ಉಪನಾಯಕ?
ವಿಂಡೀಸ್​ ವಿರುದ್ಧ ಏಕದಿನ ಸರಣಿಗೆ ಕನ್ನಡಿಗ ಕೆಎಲ್​ ರಾಹುಲ್​ ಉಪನಾಯಕ?
Published on
ನವದೆಹಲಿ: ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್​ ಅಯ್ಯರ್​ ಟಿ20 ತಂಡದ ನಾಯಕರಾಗಿ ಏಷ್ಯನ್​ ಗೇಮ್ಸ್​ನಲ್ಲಿ ಆಡಲಿರುವುದರಿಂದ ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಸೆಪ್ಟೆಂಬರ್​ 27ರಿಂದ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕನ್ನಡಿಗ ಕೆಎಲ್​ ರಾಹುಲ್ (K L Rahul) ಉಪನಾಯಕರಾಗಿ ನಾಯಕ ಶುಭಮಾನ್​ ಗಿಲ್​ಗೆ ನೆರವಾಗುವ ಸಾಧ್ಯತೆ ಇದೆ. ರಾಹುಲ್​ ಈಗಾಗಲೆ ಟೆಸ್ಟ್​ ತಂಡದ ಉಪನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಕದಿನ ತಂಡದಲ್ಲಿ ಶ್ರೇಯಸ್​ ಸ್ಥಾನವನ್ನು ಋತುರಾಜ್​ ಗಾಯಕ್ವಾಡ್​ ತುಂಬುವ ನಿರೀಕ್ಷೆ ಇದೆ.
ವಿಂಡೀಸ್​ ವಿರುದ್ಧದ ಏಕದಿನ ಸರಣಿಗೆ ಸೆ.16ರಂದು ಅಂದರೆ ಅಫ್ಘಾನಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯದ ಬಳಿಕ ಭಾರತ ತಂಡದ ಆಯ್ಕೆ ನಡೆಯಲಿದೆ. ಅ.4ರಂದು ಅವಧಿ ಮುಗಿಸಲಿರುವ ಅಜಿತ್​ ಅಗರ್ಕರ್​ ನೇತೃತ್ವದ ಆಯ್ಕೆ ಸಮಿತಿಯ ಕೊನೇ ಸಭೆ ಇದಾಗಿರಲಿದೆ. ಬಳಿಕ ಅಗರ್ಕರ್​ ಅವಧಿ ವಿಸ್ತರಣೆಯ ಬಗ್ಗೆ ಸೆ.18ರ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಸ್ಪಷ್ಟ ಉತ್ತರ ಲಭಿಸಲಿದೆ.

ಇರಾನಿ ಕಪ್​ನಲ್ಲಿ ಆಡಲಿರುವ ಶೇಷ ಭಾರತ ತಂಡವನ್ನು ಇದೇ ದಿನ ಆಯ್ಕೆ ಮಾಡಲಾಗುವುದು. ಹಾಲಿ ರಣಜಿ ಚಾಂಪಿಯನ್​ ಜಮ್ಮು-ಕಾಶ್ಮೀರ ವಿರುದ್ಧದ ಇರಾನಿ ಕಪ್​ ಪಂಧ್ಯ ಅಕ್ಟೋಬರ್​ 1ರಿಂದ 5ರವರೆಗೆ ಶ್ರೀನಗರದಲ್ಲಿ ನಡೆಯಲಿದೆ.

ಏಷ್ಯನ್​ ಗೇಮ್ಸ್​ಗೆ ಭಾರತ ಟಿ20 ತಂಡದಲ್ಲಿರುವ ಇಶಾನ್​ ಕಿಶನ್​ ಕೂಡ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ 2ನೇ ವಿಕೆಟ್​ ಕೀಪರ್​ ಸ್ಥಾನಕ್ಕೆ ರಿಷಭ್​ ಪಂತ್​ ಮತ್ತು ಧ್ರುವ ಜುರೆಲ್​ ನಡುವೆ ಪೈಪೋಟಿ ಏರ್ಪಟ್ಟಿದೆ. ಪಂತ್​ ಮತ್ತು ಜುರೆಲ್​ ಅವರಲ್ಲಿ ಭಾರತ ತಂಡಕ್ಕೆ ಆಯ್ಕೆ ಆಗದವರು ಇರಾನಿ ಕಪ್​ನಲ್ಲಿ ಶೇಷ ಭಾರತ ತಂಡದ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ.

ವಿಂಡೀಸ್​ ವಿರುದ್ಧದ 3 ಏಕದಿನ ಪಂದ್ಯಗಳು ಸೆ.27 (ತಿರುವನಂತಪುರ), 30 (ಗುವಾಹಟಿ) ಮತ್ತು ಅ.3ರಂದು (ಮುಲ್ಲನ್​ಪುರ) ನಡೆಯಲಿವೆ. ಇದೇ ಸಮಯದಲ್ಲಿ ಅಂದರೆ ಸೆ.28ರಿಂದ ಅ.3ರವರೆಗೆ ಭಾರತ ಟಿ20 ತಂಡ ಏಷ್ಯಾಡ್​ನಲ್ಲಿ ಆಡಲಿದೆ. ಭಾರತ ಟಿ20 ತಂಡದಲ್ಲಿರುವ ಜಸ್​ಪ್ರೀತ್​ ಬುಮ್ರಾ, ಅಕ್ಷರ್​ ಪಟೇಲ್​, ವಾಷಿಂಗ್ಟನ್​ ಸುಂದರ್​, ವರುಣ್​ ಚಕ್ರವರ್ತಿ, ಅರ್ಷದೀಪ್​ ಸಿಂಗ್​ ಕೂಡ ಏಕದಿನ ಸರಣಿಗೆ ಅಲಭ್ಯರಾಗಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net