ಇಂದು ಭಾರತ-ಆಫ್ಘನ್ ಮೊದಲ ಟಿ20: ಆರಂಭಿಕ ಸ್ಥಾನಕ್ಕೆ ವೈಭವ್ ಹಾಗೂ ಸ್ಯಾಮ್ಸನ್ ನಡುವೆ ನಿಕಟ ಸ್ಪರ್ಧೆ

ಇಂದು ಭಾರತ-ಆಫ್ಘನ್ ಮೊದಲ ಟಿ20: ಆರಂಭಿಕ ಸ್ಥಾನಕ್ಕೆ ವೈಭವ್ ಹಾಗೂ ಸ್ಯಾಮ್ಸನ್ ನಡುವೆ ನಿಕಟ ಸ್ಪರ್ಧೆ
ಇಂದು ಭಾರತ-ಆಫ್ಘನ್ ಮೊದಲ ಟಿ20: ಆರಂಭಿಕ ಸ್ಥಾನಕ್ಕೆ ವೈಭವ್ ಹಾಗೂ ಸ್ಯಾಮ್ಸನ್ ನಡುವೆ ನಿಕಟ ಸ್ಪರ್ಧೆ
Published on
ನವದೆಹಲಿ: ಮುಂಬರುವ ಏಷ್ಯನ್ ಗೇಮ್ಸ್‌ಗೆ ಪೂರ್ವ ಸಿದ್ಧತೆಯಾಗಿ ಟಿ20 ಹಾಲಿ ವಿಶ್ವ ಚಾಂಪಿಯನ್ ಭಾರತ ತಂಡ, ಆತಿಥೇಯ ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಚುಟುಕು ಸರಣಿಗೆ ಸಜ್ಜಾಗಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಶ್ರೇಯಸ್ ಆಯ್ಯರ್ ಪಡೆ ಶುಭಾರಂಭದ ನೀರಿಕ್ಷೆಯಲ್ಲಿದೆ. ಭಾರತ ಟಿ20 ತಂಡದ ನಾಯಕನಾಗಿ ಶ್ರೇಯಸ್ ಅಯ್ಯರ್‌ಗೆ ತವರಿನಲ್ಲಿ ಮೊದಲ ಸರಣಿ ಇದಾಗಿದ್ದು, ವೇಗಿ ಜಸ್‌ಪ್ರೀತ್ ಬುಮ್ರಾ ಸೇರ್ಪಡೆ ಹೆಚ್ಚಿನ ಬಲ ತುಂಬಲಿದೆ.
ಅಫ್ಘಾನಿಸ್ತಾನ ಆತಿಥೇಯ ತಂಡವಾಗಿ ಮತ್ತು ಭಾರತ ಪ್ರವಾಸಿ ತಂಡವಾಗಿ ಆಡಲಿರುವ ಸರಣಿಗೆ ‘ಫ್ರೆಂಡ್‌ಶಿಪ್’ಕಪ್ ಎಂದು ಹೆಸರಿಡಲಾಗಿದೆ. ಭಾರತ ಇದುವರೆಗೆ ಅಫ್ಘಾನಿಸ್ತಾನ ಎದುರು ಒಂದೂ ಟಿ20 ಪಂದ್ಯ ಸೋಲದ ಅಜೇಯ ದಾಖಲೆ ಹೊಂದಿದೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದ ಸರಣಿ ಸೋಲಿನೊಂದಿಗೆ ನಾಯಕತ್ವ ಆರಂಭಿಸಿರುವ ಶ್ರೇಯಸ್ ಅಯ್ಯರ್‌ಗೆ ತವರಿನಲ್ಲೂ ಕಠಿಣ ಸವಾಲು ಎದುರಾಗಲಿದೆ.
ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗಿರುವ ಆಟಗಾರರೇ ಹಾಲಿ ಸರಣಿಯಲ್ಲೂ ಆಡಲಿದ್ದು, ಉಭಯ ತಂಡಗಳಿಗೆ ನಿರ್ಣಾಯಕ ಎನಿಸಿದೆ ಅಭಿಷೇಕ್ ಶರ್ಮ ಹಾಗೂ ಸಂಜು ಸ್ಯಾಮ್ಸನ್ ಟಿ20 ಸರಣಿಗಳಲ್ಲಿ ಭಾರತದ ಕಾಯಂ ಆರಂಭಿಕ ಜೋಡಿ ಎನಿಸಿದ್ದು, ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಸ್ಯಾಮ್ಸನ್ ಬದಲಿಗೆ 15 ವರ್ಷದ ವೈಭವ್‌ಗೆ ಆದ್ಯತೆ ನೀಡಲಾಗಿತ್ತು. ಏಷ್ಯಾಡ್ ಆಡುವ ಬಳಗ ಅಂತಿಮಗೊಳಿಸುವ ಮುನ್ನ ಸ್ಯಾಮ್ಸನ್ ಹಾಗೂ ವೈಭವ್ ಸಮಾನ ಅವಕಾಶ ಪಡೆಯುವ ನೀರಿಕ್ಷೆ ಇದೆ.
ಇತ್ತೀಚೆಗೆ ದುಲೀಪ್ ಟ್ರೋಫಿ ರೆಡ್‌ಬಾಲ್ ಸರಣಿಯಲ್ಲಿ ಆಡಿದ್ದ ವೈಭವ್ ಉತ್ತಮ ಲಯದಲ್ಲಿದ್ದಾರೆ. ಆದರೆ, ಅಭ್ಯಾಸ ವೇಳೆ ನೆಟ್ಸ್‌ನಲ್ಲಿ ವೇಗಿ ಜಸ್‌ಪ್ರೀತ್ ಬುಮ್ರಾ ಎದುರು ಪರದಾಡಿದ್ದಾರೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ವೇಗಿ ಜಸ್‌ಪ್ರೀತ್ ಬುಮ್ರಾ ಜತೆಗೆ ಆಲ್ರೌಂಡರ್‌ಗಳಾದ ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ ಸಹ ರಾಷ್ಟ್ರೀಯ ತಂಡಕ್ಕೆ ಪುನರಾಗಮನ ಮಾಡಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಬುಮ್ರಾ ಮೊಣಕಾಲಿನ ಗಾಯದ ಸಮಸ್ಯೆ ಎದುರಿಸಿದ್ದರು. ಕ್ರಿಕೆಟ್ ಇತಿಹಾಸಲ್ಲೇ ಮೊದಲ ಬಾರಿಗೆ ತವರಿನಲ್ಲಿ ವಿದೇಶಿ ತಂಡವಾಗಿ ಭಾರತ ಆಡಲಿದೆ.
ಮಾಜಿ ನಾಯಕ ರಶೀದ್ ಖಾನ್, ಮೊಹಮದ್ ನಬಿ, ರಹಮಾನುಲ್ಲ ಗುರ್ಬಜ್ ಹಾಗೂ ಒಮರ್ಜಾಯಿ ಅಂಥ ಅನುಭವಿ ಆಟಗಾರರನ್ನು ಹೊಂದಿರುವ ಅ್ಘಾನಿಸ್ತಾನ ಚುಟುಕು ಕ್ರಿಕೆಟ್‌ನಲ್ಲಿ ಭಾರತ ಎದುರು ಮೊದಲ ಜಯದ ಹುಡುಕಾಟದಲ್ಲಿದೆ.
ಟೀಮ್‌ನ್ಯೂಸ್
ಭಾರತ: ಇಂಗ್ಲೆಂಡ್ ಪ್ರವಾಸದಲ್ಲಿ 8ನೇ ಕ್ರಮಾಂಕದಲ್ಲಿ ಆಲ್ರೌಂಡರ್ ಆಡಿಸಲಾಗಿತ್ತು. ಆದರೆ, ಜಿಂಬಾಬ್ವೆ ಸರಣಿಯಲ್ಲಿ ತಜ್ಞ ಬೌಲರ್‌ನೊಂದಿಗೆ ಕಣಕ್ಕಿಳಿಯಲಾಗಿತ್ತು. ಇದರಿಂದ 11ರ ಬಳಗದ ಆಯ್ಕೆ ಕುತೂಹಲ ಮೂಡಿಸಿದೆ. ವೈಭವ್ ಸೂರ್ಯವಂಶಿ ಹಾಗೂ ಸಂಜು ಸ್ಯಾಮ್ಸನ್ ನಡುವೆ ಆರಂಭಿಕ ಸ್ಥಾನಕ್ಕೆ ನಿಕಟ ಸ್ಪರ್ಧೆ ಏರ್ಪಟ್ಟಿದ್ದು,ಅಭ್ಯಾಸದ ವೇಳೆ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿರುವ ಇಶಾನ್ ಕಿಶನ್ ಗೈರಾದರೆ, ಇವರಿಬ್ಬರಿಗೂ ಆಡುವ 11ರ ಬಳಗದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಇದೆ. ಜಸ್‌ಪ್ರೀತ್ ಬುಮ್ರಾ ಜತೆಗೆ ಅರ್ಷದೀಪ್ ವೇಗದ ಬೌಲಿಂಗ್‌ಗೆ ಶಕ್ತಿ ತುಂಬಲಿದ್ದಾರೆ.
ಸಂಭಾವ್ಯ ತಂಡ: ಅಭಿಷೇಕ್ ಶರ್ಮ, ವೈಭವ್ ಸೂರ್ಯವಂಶಿ/ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (ವಿ.ಕೀ), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ಅಫ್ಘಾನಿಸ್ತಾನ: ಇಬ್ಬರು ಅಥವಾ ಓರ್ವ ವೇಗಿಯೊಂದಿಗೆ ಕಣಕ್ಕಿಳಿಯಬೇಕೆ ಎಂಬ ಗೊಂದಲವಿದ್ದು, ಜಲ್‌ಹಕ್ ರೂಕಿ ನಡುವೆ ನವೀನ್ ಉಲ್ ಹಕ್ ಒಬ್ಬರಿಗೆ ಅವಕಾಶ ಸಿಗಲಿದೆ. ಇಬ್ಬರಿಗೂ ಅವಕಾಶ ಸಿಕ್ಕರೆ, ಸ್ಪಿನ್ನರ್‌ಗಳಾದ ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್ ಪೈಕಿ ಒಬ್ಬರು ಹೊರಗುಳಿಯಬೇಕಾಗುತ್ತದೆ.
ಸಂಭಾವ್ಯ ತಂಡ: ರಹಮಾನುಲ್ಲ ಗುರ್ಬಜ್ (ವಿ.ಕೀ), ಇಬ್ರಾಹಿಂ ಜದ್ರಾನ್, ಗುಲ್ಬದಿನ್ ನೈಬ್, ಸೈದಿಕ್‌ಉಲ್ಲಾ ಅಟಲ್, ದಾರ್ವಿಶ್ ರಸೂಲಿ, ಅಜ್ಮತ್‌ಉಲ್ಲಾ ಒಮರ್ಜಾಯಿ, ಮೊಹಮದ್ ನಬಿ, ರಶೀದ್ ಖಾನ್, ಫಜಲ್‌ಹಕ್ ಫಾರೂಕಿ/ನವೀನ್ ಉಲ್ ಹಕ್.
ಟಿ20 ಮುಖಾಮುಖಿ: 9
ಭಾರತ:8
ಅಫ್ಘಾನಿಸ್ತಾನ: 0
ರದ್ದು: 1
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ಟೆನ್5.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net