ಪಾಕ್ ಎದುರು ಭಾರತಕ್ಕೆ ಭರ್ಜರಿ ಜಯ: ಮುಂದುವರಿದ ನೋ ಹ್ಯಾಂಡ್‌ಶೇಕ್, ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸುವುದೇ ಹರ್ಮಾನ್‌ಪ್ರೀತ್ ಪಡೆ?
ಪಾಕ್ ಎದುರು ಭಾರತಕ್ಕೆ ಏಳು ವಿಕೆಟ್‌ಗಳ ಭರ್ಜರಿ ಜಯ: ಮುಂದುವರಿದ ನೋ ಹ್ಯಾಂಡ್‌ಶೇಕ್, ಫೈನಲ್‌ಗೇರಿ ಗೆಲುವು ಸಾಧಿಸಿದರೆ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸುವುದೇ ಹರ್ಮಾನ್‌ಪ್ರೀತ್ ಪಡೆ?
Published on:
Copied
Follow Us
ದುಬೈ: ಶ್ರೀಚರಣಿ (7ಕ್ಕೆ 3) ಹಾಗೂ ಪ್ರೇಮಾ ರಾವತ್ (9ಕ್ಕೆ 3) ಸಹಿತ ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ಭಾರತ ತಂಡ ಮಹಿಳೆಯರ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 7 ವಿಕೆಟ್‌ಗಳ ಗೆಲುವು ದಾಖಲಿಸಿತು. ಸತತ 10ನೇ ಆವೃತ್ತಿಯಲ್ಲೂ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡ ಎ ಗುಂಪಿನ ಅಗ್ರಸ್ಥಾನ ಭದ್ರಪಡಿಸಿಕೊಂಡಿತು. ಹರ್ಮಾನ್‌ಪ್ರೀತ್ ಕೌರ್ ಪಡೆ ಗುರುವಾರ (ಸೆ.10) ಮೊದಲ ಸೆಮೀಸ್‌ನಲ್ಲಿ ಬಿ ಗುಂಪಿನ ಎರಡನೇ ಸ್ಥಾನಿ ಎದುರು ಫೈನಲ್‌ಗೇರಲು ಸೆಣಸಲಿದೆ.
ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ವಿಕೆಟ್‌ಗೆ 27 ರನ್ ಸಾಧಾರಣ ಆರಂಭ ಪಡೆದ ಪಾಕ್, ನಂತರ ಭಾರತೀಯ ಸ್ಪಿನ್ನರ್‌ಗಳ ದಾಳಿಗೆ ತತ್ತರಿಸಿ 9 ರನ್ ಅಂತರದಲ್ಲಿ ಆರು ವಿಕೆಟ್ ಕೈಚೆಲ್ಲಿತು.18.1 ಓವರ್‌ಗಳಲ್ಲಿ 55 ರನ್‌ಗಳಿಗೆ ಆಲೌಟ್ ಆದ ಪಾಕಿಸ್ತಾನ ಅಂತಾರಾಷ್ಟ್ರೀಯ ಟಿ20ಯಲ್ಲಿ ತನ್ನ ಕನಿಷ್ಠ ಮೊತ್ತ ದಾಖಲಿಸಿತು.
ಪ್ರತಿಯಾಗಿ ಚೇಸಿಂಗ್‌ನಲ್ಲಿ ಫಾತಿಮಾ ಸನಾ (17ಕ್ಕೆ 3) ದಾಳಿಗೆ ಸಿಲುಕಿ ಪರದಾಡಿದ ಭಾರತ ಅಂತಿಮವಾಗಿ 8.4 ಓವರ್‌ಗಳಲ್ಲಿ 3 ವಿಕೆಟ್‌ಗೆ 57 ರನ್‌ಗಳಿಸಿ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ಸು ಕಂಡಿತು.
150. ಹರ್ಮಾನ್‌ಪ್ರೀತ್ ಕೌರ್ ನಾಯಕಿಯಾಗಿ 150 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ವಿಶ್ವದ ಮೊದಲ ಕ್ರಿಕೆಟರ್ (ಮಹಿಳಾ-ಪುರುಷ ಸೇರಿ) ಎನಿಸಿದರು.
3. ಶೆಫಾಲಿ ವರ್ಮ ಮಹಿಳಾ ಟಿ20ಯಲ್ಲಿ 3 ಸಾವಿರ ರನ್‌ಗಳಿಸಿದ 3ನೇ ಭಾರತೀಯ ಕ್ರಿಕೆಟರ್.
ಸ್ಮತಿ ಮಂದನಾ, ಹರ್ಮಾನ್‌ಪ್ರೀತ್ ಕೌರ್ ಮೊದಲಿಬ್ಬರು.
ಮುಂದುವರಿದ ನೋ ಹ್ಯಾಂಡ್‌ಶೇಕ್
ಮಹಿಳಾ ಏಷ್ಯಾಕಪ್‌ನಲ್ಲೂ ಪಾಕಿಸ್ತಾನ ಎದುರು ಭಾರತ ತಂಡ ನೋ ಹ್ಯಾಂಡ್‌ಶೇಕ್ ಪಾಲಿಸಿ ಮುಂದುವರಿಸಿತು. ಕಳೆದ ಒಂದು ವರ್ಷದಿಂದ ಭಾರತ-ಪಾಕ್ ತಂಡಗಳು (ಕಿರಿಯರು-ಹಿರಿಯರು) ಪರಸ್ಪರ ಎಂಟನೇ ಬಾರಿಗೆ ಎದುರಾದ ದೃಷ್ಟಾಂತ ಇದಾಗಿದ್ದು, ಎರಡೂ ತಂಡಗಳ ಕ್ರಿಕೆಟಿಗರು ಒಮ್ಮೆಯೂ ಹಸ್ತ ಲಾಘವ ಮಾಡಿಲ್ಲ. ಎಸಿಸಿ ಹಾಗೂ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಟೂರ್ನಿಯ ಫೈನಲ್ ವಿಜೇತರಿಗೆ ಟ್ರೋಫಿ ಹಸ್ತಾಂತರಿಸಲಿದ್ದು, ಭಾರತ ತಂಡ ಫೈನಲ್‌ಗೇರಿ ಗೆಲುವು ಸಾಧಿಸಿದರೆ, ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸುವುದೇ ಎಂಬುದು ಕುತೂಹಲ ಮೂಡಿಸಿದೆ. ಪುರುಷರ ಏಷ್ಯಾಕಪ್‌ನಲ್ಲಿ ಸೂರ್ಯಕುಮಾರ್ ನೇತೃತ್ವದ ಭಾರತ ತಂಡ ನಖ್ವಿ ಅವರಿಂದ ಟ್ರೋಫಿ ಪಡೆಯಲು ನಿರಾಕರಿಸಿದ ನಂತರ ಭಾರಿ ಹೈಡ್ರಾಮಾ ನಡೆದಿತ್ತು.