Team India World Record: ಭಾರತೀಯ ಕ್ರಿಕೆಟ್ ತಂಡವು ಭಾನುವಾರ (ನವೆಂಬರ್ 1) ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದೆ. ಕ್ಯಾಲೆಂಡರ್ ವರ್ಷವೊಂದರಲ್ಲಿ ಬರೋಬ್ಬರಿ 400 ಸಿಕ್ಸರ್‌ಗಳನ್ನು ಸಿಡಿಸಿದ ವಿಶ್ವದ ಮೊಟ್ಟಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯವು ಟೀಮ್ ಇಂಡಿಯಾಗೆ ಈ ವರ್ಷದ 40ನೇ ಪಂದ್ಯವಾಗಿದ್ದು, ಇದರಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಒಟ್ಟು 11 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ 400 ಸಿಕ್ಸರ್‌ಗಳ ಐತಿಹಾಸಿಕ ಗಡಿಯನ್ನು ದಾಟಿದ್ದಾರೆ.
ಈ ಹಿಂದೆ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ದಾಖಲೆಯು ಆಸ್ಟ್ರೆಲಿಯಾ ಹೆಸರಿನಲ್ಲಿತ್ತು. ಆಸಿಸ್ ತಂಡ ಕಳೆದ ವರ್ಷ ಅಂದರೆ 2025ರಲ್ಲಿ ಒಟ್ಟು 326 ಸಿಕ್ಸರ್‌ಗಳನ್ನು ಸಿಡಿಸಿತ್ತು. ಇನ್ನು ಪೂರ್ಣ ಸದಸ್ಯ ರಾಷ್ಟ್ರಗಳ ಪೈಕಿ ಭಾರತವೇ 2022ರಲ್ಲಿ 40 ಪಂದ್ಯಗಳಲ್ಲಿ 289 ಸಿಕ್ಸರ್‌ಗಳನ್ನು ಸಿಡಿಸಿದ್ದುದೇ ಹಿಂದಿನ ಗರಿಷ್ಠ ದಾಖಲೆಯಾಗಿತ್ತು. ಇನ್ನು ಪಂದ್ಯದ ಸರಾಸರಿ ಲೆಕ್ಕಾಚಾರ ಮಾಡಿ ಹೇಳುವುದಾದರೆ 2022ರಲ್ಲಿ ಟೀಮ್ ಇಂಡಿಯಾ ಪ್ರತಿ ಪಂದ್ಯಕ್ಕೆ ಸರಾಸರಿ 7.2 ಸಿಕ್ಸರ್‌ಗಳನ್ನು ಸಿಡಿಸುತ್ತಿದ್ದರೆ, ಕೇವಲ ನಾಲ್ಕು ವರ್ಷಗಳಲ್ಲಿ ಇದು 10 ಸಿಕ್ಸರ್‌ಗಳಿಗೆ ಏರಿಕೆಯಾಗಿದೆ.
ಭಾರತದ ಪರವಾಗಿ ಐತಿಹಾಸಿಕ 400ನೇ ಸಿಕ್ಸರ್ ಬಾರಿಸಿದ ಹೆಗ್ಗಳಿಗೆ ಯುವ ಆಲ್ ರೌಂಡರ್ ನಮನ್ ಧೀರ್ ಪಾಲಾಯಿತು. ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಬ್ಲೇರ್ ಟಿಕ್ನರ್ ಅವರ ಎಸೆತದಲ್ಲಿ ಫೈನ್ ಲೆಗ್ ಕಡೆಗೆ ನಮನ್ ಧೀರ್ ಭರ್ಜರಿ ಸಿಕ್ಸರ್ ಸಿಡಿಸಿ ಈ ದಾಖಲೆ ಬರೆದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 191 ರನ್ ಕಲೆಹಾಕಿತು. ಇಶಾನ್ ಕಿಶನ್ ಕೇವಲ 32 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್‌ಗಳೊಂದಿಗೆ 61 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 23 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 50 ರನ್ ಸಿಡಿಸಿದರು.
ವಿಶೇಷವೆಂದರೆ, ಭಾರತ ಈ ವರ್ಷ ಸಿಡಿಸಿರುವ ಒಟ್ಟು 400 ಸಿಕ್ಸರ್‌ಗಳ ಪೈಕಿ ಬರೋಬ್ಬರಿ 142 ಸಿಕ್ಸರ್‌ಗಳು ನ್ಯೂಜಿಲೆಂಡ್ ತಂಡದ ವಿರುದ್ಧವೇ ಬಂದಿರುವುದು ಮತ್ತೊಂದು ವಿಶ್ವ ದಾಖಲೆಯಾಗಿದೆ. ಕ್ಯಾಲೆಂಡರ್ ವರ್ಷವೊಂದರಲ್ಲಿ ನಿರ್ದಿಷ್ಟ ಎದುರಾಳಿ ತಂಡದ ವಿರುದ್ಧ ದಾಖಲಾದ ಅತ್ಯಧಿಕ ಸಿಕ್ಸರ್‌ಗಳು ಇದಾಗಿವೆ. ಹತ್ತು ವರ್ಷಗಳ ಹಿಂದೆ ಅಂದರೆ 2016ರಲ್ಲಿ ಭಾರತವು 21 ಇನಿಂಗ್ಸ್‌ಗಳಲ್ಲಿ ಕೇವಲ 81 ಸಿಕ್ಸರ್‌ಗಳನ್ನು ಸಿಡಿಸಿ ಆ ವರ್ಷದಲ್ಲಿ ಎರಡನೇ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ತಂಡವಾಗಿತ್ತು (ಪ್ರತಿ ಪಂದ್ಯಕ್ಕೆ 3.85 ಸಿಕ್ಸರ್‌ಗಳು).
ಕಳೆದ ದಶಕದಲ್ಲಿ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ವೇಗವು ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಆಧುನಿಕ ಕ್ರಿಕೆಟ್‌ನಲ್ಲಿ ಸಿಕ್ಸರ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿರುವುದು. ಉತ್ತಮ ಗುಣಮಟ್ಟದ ಬ್ಯಾಟ್‌ಗಳು, ಬ್ಯಾಟಿಂಗ್‌ಗೆ ಪಿಚ್‌ಗಳು ಹೆಚ್ಚು ಅನುಕೂಲಕರವಾಗಿರುವುದು ಹಾಗೂ ಐಪಿಎಲ್ ಟೂರ್ನಿಯ ಪ್ರಭಾವದಿಂದ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ರಂತಹ ಅತ್ಯುತ್ತಮ ಸ್ಪೋಟಕ ಆಟಗಾರರು ಭಾರತ ತಂಡಕ್ಕೆ ಲಭ್ಯವಾಗುತ್ತಿರುವುದು ಈ ದಾಖಲೆಗೆ ಪ್ರಮುಖ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಇದೇ ವೇಗ ಮುಂದುವರಿದರೆ ತಂಡವೊಂದು 500 ಸಿಕ್ಸರ್‌ಗಳ ಗಡಿಯನ್ನು ದಾಟಿದರೂ ಆಶ್ಚರ್ಯಪಡಬೇಕಿಲ್ಲ(ಏಜೆನ್ಸೀಸ್).