ಮಳೆ ನಡುವೆ ಮೇಲುಗೈ ಕಾಯ್ದುಕೊಂಡ ಭಾರತ: ಲಂಕಾ ಎದುರು ಬೃಹತ್ ಮೊತ್ತಕ್ಕೆ ನೆರವಾದ ಪಡಿಕ್ಕಲ್, ಜುರೆಲ್

ಮಳೆ ನಡುವೆ ಮೇಲುಗೈ ಕಾಯ್ದುಕೊಂಡ ಭಾರತ: ಲಂಕಾ ಎದುರು ಬೃಹತ್ ಮೊತ್ತಕ್ಕೆ ನೆರವಾದ ಪಡಿಕ್ಕಲ್, ಜುರೆಲ್
ಮಳೆ ನಡುವೆ ಮೇಲುಗೈ ಕಾಯ್ದುಕೊಂಡ ಭಾರತ: ಲಂಕಾ ಎದುರು ಬೃಹತ್ ಮೊತ್ತಕ್ಕೆ ನೆರವಾದ ಪಡಿಕ್ಕಲ್, ಜುರೆಲ್
Published on

ಗಾಲೆ: ಆತಿಥೇಯ ಶ್ರೀಲಂಕಾ ಹಾಗೂ ಭಾರತ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಹೆಚ್ಚಿನ ಸಮಯ ಮಳೆ ಮತ್ತು ಒದ್ದೆ ಮೈದಾನದಿಂದಾಗಿ ವ್ಯರ್ಥವಾದರೂ, ಕನ್ನಡಿಗ ಹಾಗೂ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ (167 ರನ್, 230 ಎಸೆತ, 15 ಬೌಂಡರಿ, 1 ಸಿಕ್ಸರ್) ಅಮೋಘ ಬ್ಯಾಟಿಂಗ್ ಹಾಗೂ ಧ್ರುವ ಜುರೆಲ್ (51 ರನ್, 68 ಎಸೆತ, 4 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನೆರವಿನಿಂದ ಶುಭಮಾನ್ ಗಿಲ್ ಬಳಗ ಸಂಪೂರ್ಣ ನಿಯಂತ್ರಣ ಸಾಧಿಸಿ ಸುಸ್ಥಿತಿಯಲ್ಲಿದೆ.


ಗಾಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾನುವಾರ ಎರಡನೇ ದಿನದಾಟ, ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2.15 ಗಂಟೆಗೆ ಆರಂಭಗೊಂಡಿತು. ಭಾರಿ ಮಳೆ ಜತೆಗೆ ಮೈದಾನ ತೇವಾಂಶದಿಂದ ಕೂಡಿದ್ದರಿಂದ ಆಟ ವಿಳಂಬಗೊಂಡಿತು.
2 ವಿಕೆಟ್‌ಗೆ 288 ರನ್‌ಗಳಿಂದ ಆಟ ಮುಂದುವರಿಸಿದ ಭಾರತ ತಂಡ, ಆತಿಥೇಯ ಸ್ಪಿನ್ನರ್‌ಗಳಾದ ಪ್ರಭಾತ್ ಜಯಸೂರ‌್ಯ (109ಕ್ಕೆ 4) ಹಾಗೂ ಕೇಶರ ನುವಂತ (175ಕ್ಕೆ 3) ಸುಧಾರಿತ ಬೌಲಿಂಗ್ ಎದುರು ದಿಟ್ಟ ಬ್ಯಾಟಿಂಗ್ ನಡೆಸಿ ದಿನದಂತ್ಯಕ್ಕೆ 116 ಓವರ್‌ಗಳಲ್ಲಿ 9 ವಿಕೆಟ್‌ಗೆ 460 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಬಾಲಗೋಂಚಿಗಳಾದ ಕುಲದೀಪ್ ಯಾದವ್ (12*) ಜತೆಗೆ ಕನ್ನಡಿಗ ಪ್ರಸಿದ್ಧಕೃಷ್ಣ (1*) ಸೋಮವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪಂದ್ಯದ ಎರಡನೇ ದಿನ ನಿಗದಿತ 98 ಓವರ್‌ಗಳ ಪೈಕಿ 43 ಓವರ್‌ಗಳ ಆಟ ಮಾತ್ರ ಸಾಧ್ಯವಾಯಿತು. ಆದರೆ, ಶನಿವಾರ ಎರಡು ವಿಕೆಟ್ ಕಬಳಿಸಿದ್ದ ಲಂಕಾ ಬೌಲರ್‌ಗಳು ಎರಡನೇ ದಿನ ಏಳು ವಿಕೆಟ್ ಪಡೆದರು. ಪಿಚ್ ನಿಧಾನವಾಗಿ ಸ್ಪಿನ್ನರ್‌ಗಳಿಗೆ ನೆರವು ಒದಗಿಸಲು
ಆರಂಭಿಸಿದೆ.
ಪಡಿಕ್ಕಲ್-ಜುರೆಲ್ ಆಸರೆ
ಕ್ರಮವಾಗಿ 131, 27 ರನ್‌ಗಳಿಂದ ದಿನದಾಟ ಆರಂಭಿಸಿದ ಪಡಿಕ್ಕಲ್ ಹಾಗೂ ರಿಷಭ್ ಪಂತ್ (39) ಜೋಡಿ ಇನಿಂಗ್ಸ್‌ನ 81ನೇ ಓವರ್‌ನಲ್ಲಿ ಬೇರ್ಪಟ್ಟಿತು. ಹೊಸ ಚೆಂಡಿನಲ್ಲಿ ಪಂತ್‌ರನ್ನು ಎಲ್‌ಬಿಗೆ ಬಲೆಗ ಬೀಳಿಸಿದ ಕೇಶರ ನುವಂತ ಚೊಚ್ಚಲ ವಿಕೆಟ್ ಪಡೆದರು. ಪಡಿಕ್ಕಲ್-ಪಂತ್ ಮೂರನೇ ವಿಕೆಟ್‌ಗೆ 113 ಎಸೆತಗಳಲ್ಲಿ 71 ರನ್ ಸೇರಿಸಿದರು.
ಸ್ನಾಯು ಸೆಳೆತದಿಂದ ಮೊದಲ ದಿನ ರಿಟೈರ್ಡ್ ಹರ್ಟ್ ಆಗಿದ್ದ ಕೆಎಲ್ ರಾಹುಲ್, ಪಂತ್ ನಿರ್ಗಮನ ನಂತರ ಮತ್ತೆ ಕ್ರೀಸ್‌ಗಿಳಿದರು. ಹಿಂದಿನ ದಿನದ ವೈಯಕ್ತಿಕ ಮೊತ್ತಕ್ಕೆ 5 ರನ್ ಸೇರಿಸಿದ ರಾಹುಲ್ ಸಹ ನುವಂತಗೆ ವಿಕೆಟ್ ಒಪ್ಪಿಸಿದರು. ಚೊಚ್ಚಲ ಶತಕವನ್ನು 150 ರನ್‌ಗಳಿಗೆ ವಿಸ್ತರಿಸಿದ ಪಡಿಕ್ಕಲ್ ಚಹಾ ವಿರಾಮಕ್ಕೆ ಮುನ್ನ ಸ್ಟಂಪ್ ಔಟ್ ಆದರು. ಪಡಿಕ್ಕಲ್-ಜುರೆಲ್ ಐದನೇ ವಿಕೆಟ್‌ಗೆ 44 ಎಸೆತಗಳಲ್ಲಿ 88 ರನ್‌ಗಳಿಸಿದರು. ತ್ವರಿತವಾಗಿ ಮೂರು ವಿಕೆಟ್ ಪಡೆದ ಲಂಕಾ ತಿರುಗೇಟು ನೀಡಿತು.
ಚಹಾ ವಿರಾಮಕ್ಕೆ ಭಾರತ 5 ವಿಕೆಟ್‌ಗೆ 364 ರನ್ ಕಲೆಹಾಕಿತ್ತು. ವಿರಾಮದ ನಂತರ ರವೀಂದ್ರ ಜಡೇಜಾ (13) ನುವಂತ ಎಸೆತದಲ್ಲಿ ಎಲ್‌ಬಿ ಆದರು. ಆರಂಭದಲ್ಲಿ ರನ್‌ಗಳಿಸಲು ಪರದಾಡಿದ ಜುರೆಲ್ ಅರ್ಧಶತಕ ನಂತರ ಬೆನ್ನಲ್ಲೇ ಧನಂಜಯ ಡಿ ಸಿಲ್ವ ಸ್ಲಿಪ್‌ನಲ್ಲಿ ಪಡೆದ ಅದ್ಭುತ ಕ್ಯಾಚ್‌ಗೆ ಪೆವಿಲಿಯನ್ ಸೇರಿದರು. ಎಂಟು ಇನಿಂಗ್ಸ್‌ಗಳಲ್ಲಿ ಜುರೆಲ್ ಗಳಿಸಿದ ಮೊದಲ ಅರ್ಧಶತಕ ಇದಾಗಿದೆ. ಜುರೆಲ್-ಮಾನವ್ ಸುಥರ್ (24) ಜೋಡಿ 7ನೇ ವಿಕೆಟ್‌ಗೆ 66 ಎಸೆತಗಳಲ್ಲಿ 55 ರನ್‌ಗಳಿಸಿ ಮೊತ್ತ ಏರಿಸಿದರು. ಜುರೆಲ್ ನಿರ್ಗಮನದ ಬೆನ್ನಲ್ಲೇ ಮೊಹಮದ್ ಸಿರಾಜ್ (11), ಮಾನವ್ ಸುಥರ್ ಸಹ ಪ್ರಭಾತ್‌ಗೆ ವಿಕೆಟ್ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net