ಭಾರತ-ಐರ್ಲೆಂಡ್ ಎರಡನೇ ಟಿ20: ಸರಣಿ ಸಮಬಲಕ್ಕೆ ಜಯ ಅನಿವಾರ್ಯ, ವೈಭವ್​ಗೆ ಸಿಗುವುದೇ ಚಾನ್ಸ್!

ಭಾರತ-ಐರ್ಲೆಂಡ್ ಎರಡನೇ ಟಿ20: ಸರಣಿ ಸಮಬಲಕ್ಕೆ ಜಯ ಅನಿವಾರ್ಯ,
ಭಾರತ-ಐರ್ಲೆಂಡ್ ಎರಡನೇ ಟಿ20: ಸರಣಿ ಸಮಬಲಕ್ಕೆ ಜಯ ಅನಿವಾರ್ಯ,
Published on
ಬೆಲ್‌ಫಾಸ್ಟ್: ಮೊದಲ ಪಂದ್ಯದ ಆಘಾತಕಾರಿ ಸೋಲು ಹಾಲಿ ವಿಶ್ವ ಚಾಂಪಿಯನ್ ಭಾರತ ತಂಡದ ಸತತ 12 ಸರಣಿಗಳ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ. ಶ್ರೇಯಸ್ ಅಯ್ಯರ್ ಪಡೆ ಭಾನುವಾರ ಆತಿಥೇಯ ಐರ್ಲೆಂಡ್ ವಿರುದ್ಧ ಎರಡನೇ ಹಾಗೂ ಅಂತಿಮ ಟಿ20 ಆಡಲಿದ್ದು, ಪುಟಿದೇಳುವ ಮೂಲಕ ಸರಣಿ ಸಮಬಲ ಸಾಧಿಸುವ ನಿರೀಕ್ಷೆಯಲ್ಲಿದೆ.
ಐರ್ಲೆಂಡ್ ವಿರುದ್ಧದ ಅಚ್ಚರಿಯ ಸೋಲಿನಿಂದ ಭಾರತದ ಆಡುವ 11ರ ಬಳಗದ ಜತೆಗೆ ಆಯ್ಕೆ ಸಮಿತಿ ಹಾಗೂ ಕೋಚ್ ಗೌತಮ್ ಗಂಭೀರ್‌ರ ಕಾರ್ಯತಂತ್ರವೂ ಕಳವಳಕಾರಿ ಎನಿಸಿದೆ. 963 ದಿನಗಳ ನಂತರ ಟಿ20 ತಂಡಕ್ಕೆ ಮರಳಿದ ಶ್ರೇಯಸ್ ಅಯ್ಯರ್ ಹಾಗೂ ತಿಲಕ್ ವರ್ಮ ಕ್ರಮವಾಗಿ ನಾಯಕ, ಉಪನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಈ ಸೋಲು ಭಾರತ ತಂಡದ ಸತತ 16 ಟಿ20 ಸರಣಿ ಅಥವಾ ಟೂರ್ನಿಗಳ ಅಜೇಯ ಓಟವನ್ನೂ ಕೊನೆಗೊಳಿಸುವ ಭೀತಿ ಸೃಷ್ಟಿಸಿದೆ.
12 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಸರಣಿ ಸೋತ ಎಂಬ ಅನಪೇಕ್ಷಿತ ದಾಖಲೆ ಹೊಂದಿರುವ ಗಂಭೀರ್, ಎರಡನೇ ಪಂದ್ಯದಲ್ಲೂ ಸೋತರೆ, ಐರ್ಲೆಂಡ್ ವಿರುದ್ಧ ಸರಣಿ ಕೈಚೆಲ್ಲಿದ ಭಾರತ ತಂಡದ ಮೊದಲ ಕೋಚ್ ಎಂಬ ಅಪಖ್ಯಾತಿ ಪಡೆಯಲಿದ್ದಾರೆ. ಆದರೆ, ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದ ನಂತರ ಆಡಿದ ಮೊದಲ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿರುವುದು ಇದು ಮೂರನೇ ದೃಷ್ಟಾಂತ(2007, 2024, 2026). ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಹೆಚ್ಚು ಅವಕಾಶ ಪಡೆಯುತ್ತಿರುವುದು ಟೀಕೆಗೆ ಒಳಗಾಗಿದ್ದು, ಟಿ20 ಕ್ರಿಕೆಟ್‌ಗೆ ಅವರು ಸೂಕ್ತ ಆಟಗಾರನಲ್ಲ ಎಂಬ ವಾದವೂ ಕೇಳಿಬಂದಿದೆ.
ವೈಭವ್‌ಗೆ ಸ್ಥಾನ ಅನುಮಾನ!
ಮೊದಲ ಪಂದ್ಯದ ಸೋಲು ಭಾರತ ತಂಡಕ್ಕೆ ಎಚ್ಚರಿಕೆ ಸಂದೇಶ ಎನಿಸಿದ್ದು, ಸರಣಿ ಸೋಲುವ ಭೀತಿಯಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಪದಾರ್ಪಣೆಗೆ ಅವಕಾಶ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. 11ರ ಬಳಗದಲ್ಲಿ ವೈಭವ್ ಸ್ಥಾನ ಪಡೆದರೆ, ಎಡಗೈ ಬ್ಯಾಟರ್‌ಗಳ ಸಂಖ್ಯೆ ಹೆಚ್ಚಲಿದ್ದು ಬ್ಯಾಟಿಂಗ್ ಕ್ರಮಾಂಕದಲ್ಲೂ ಬದಲಾವಣೆ ಅಗತ್ಯ ಎನಿಸಲಿದೆ. ಬೌಲಿಂಗ್ ವಿಭಾಗದಲ್ಲಿ ಭಾರತಕ್ಕೆ ಹೆಚ್ಚಿನ ಸಮಸ್ಯೆಯಿಲ್ಲ. 4 ತಿಂಗಳ ನಂತರ ಮರಳಿದ ಹರ್ಷಿತ್ ರಾಣಾ ಗಮನಸೆಳೆದಿದ್ದಾರೆ.ದುಬಾರಿ ಆಗಿದ್ದ ಪ್ರಸಿದ್ಧ ಕೃಷ್ಣ ಬದಲಿಗೆ ಪ್ರಿನ್ಸ್ ಯಾದವ್ ಪದಾರ್ಪಣೆಯ ಅವಕಾಶ ಪಡೆಯಬಹುದು.
ಆರಂಭ: ಸಂಜೆ 6.00
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net