22 ವರ್ಷಗಳಿಂದ ಲಾರ್ಡ್ಸ್‌ನಲ್ಲಿ ಗೆದ್ದಿಲ್ಲ ಭಾರತ: ಮಾಜಿ ನಾಯಕ ರೋಹಿತ್ ಶರ್ಮ ಮೇಲೆ ಎಲ್ಲರ ಗಮನ!

22 ವರ್ಷಗಳಿಂದ ಲಾರ್ಡ್ಸ್‌ನಲ್ಲಿ ಗೆದ್ದಿಲ್ಲ ಭಾರತ: ಮಾಜಿ ನಾಯಕ ರೋಹಿತ್ ಶರ್ಮ ಮೇಲೆ ಎಲ್ಲರ ಗಮನ
22 ವರ್ಷಗಳಿಂದ ಲಾರ್ಡ್ಸ್‌ನಲ್ಲಿ ಗೆದ್ದಿಲ್ಲ ಭಾರತ: ಮಾಜಿ ನಾಯಕ ರೋಹಿತ್ ಶರ್ಮ ಮೇಲೆ ಎಲ್ಲರ ಗಮನ
Published on
ಲಂಡನ್: ಮಾಜಿ ನಾಯಕ ರೋಹಿತ್ ಶರ್ಮ ನಿವೃತ್ತಿ ವದಂತಿಗಳ ನಡುವೆ ಭಾರತ ತಂಡ ಹಾಲಿ ಯುಕೆ ಪ್ರವಾಸದಲ್ಲಿ ಮೊದಲ ಸರಣಿ ಜಯದ ನಿರೀಕ್ಷೆಯಲ್ಲಿದೆ. ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ಭಾರತ ತಂಡಗಳು ಸರಣಿಯ ನಿರ್ಣಾಯಕ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾನುವಾರ ಮುಖಾಮುಖಿ ಆಗಲಿವೆ. 3 ಪಂದ್ಯಗಳ ಸರಣಿ ಸದ್ಯ 1-1 ಸಮಬಲದಲ್ಲಿದೆ.
ಮುಂದಿನ ವರ್ಷದ ಐಸಿಸಿ ಏಕದಿನ ವಿಶ್ವಕಪ್‌ಗೆ 15 ತಿಂಗಳು ಬಾಕಿಯಿರುವಂತೆ ಆಯ್ಕೆ ಸಮಿತಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಯೋಜನೆ ರೂಪಿಸಿದೆ. ಆದರೆ, ಲಾರ್ಡ್ಸ್ ಪಂದ್ಯ ‘ರೋಹಿತ್ ಪಾಲಿಗೆ ಕೊನೇ ಅಂತಾರಾಷ್ಟ್ರೀಯ ಪಂದ್ಯವಲ್ಲ’ ಎಂಬುದನ್ನು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಟೀಮ್ ಇಂಡಿಯಾ ತನ್ನ ಮುಂದಿನ ಏಕದಿನ ಸರಣಿಯನ್ನು ಸೆಪ್ಟೆಂಬರ್‌ನಲ್ಲಿ ಆಡುವುದರಿಂದ, ಈ ಪಂದ್ಯ 39 ವರ್ಷದ ರೋಹಿತ್ ಪಾಲಿಗೂ ನಿರ್ಣಾಯಕ ಎನಿಸಿದೆ. ಹಿಂದಿನ ಪಂದ್ಯದಲ್ಲಿ ರೋಹಿತ್ ರನ್‌ಗಳಿಸಲು ಪರದಾಡಿದ್ದು, ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್‌ಗಳ ನಡುವೆ ಇದು 22ನೇ ಏಕದಿನ ದ್ವಿಪಕ್ಷೀಯ ಸರಣಿ ಆಗಿದ್ದು, ಇಂಗ್ಲೆಂಡ್ ಏಳು ಬಾರಿ ಹಾಗೂ 2018ರಲ್ಲಿ ಕೊನೆಯದಾಗಿ ಜಯಿಸಿತ್ತು. ಐಸಿಸಿ ಏಕದಿನ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಹೊಂದಿರುವ ಭಾರತ ತಂಡ, ಏಳನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಎದುರು ಸರಣಿ ಸೋತರೆ, ಹಾಲಿ ಪ್ರವಾಸದಲ್ಲಿ ಕೋಚ್ ಗಂಭೀರ್‌ಗೆ ಮತ್ತೊಂದು ಹಿನ್ನಡೆ ಎದುರಾಗಲಿದೆ.
22 ವರ್ಷಗಳಿಂದ ಲಾರ್ಡ್ಸ್‌ನಲ್ಲಿ ಗೆದ್ದಿಲ್ಲ!
ಟೀಮ್ ಇಂಡಿಯಾ ಲಾರ್ಡ್ಸ್‌ನಲ್ಲಿ ಇದುವರೆಗೆ 9 ಪಂದ್ಯಗಳನ್ನಾಡಿದ್ದು, 1983ರ ವಿಶ್ವಕಪ್ ಫೈನಲ್ ಸಹಿತ 3 ಜಯ, 5 ಸೋಲು ಕಂಡಿದೆ. 1 ಪಂದ್ಯ ಟೈ ಆಗಿದೆ. ಆದರೆ, 2004ರ ನಂತರ ಭಾರತ ತಂಡ ಲಾರ್ಡ್ಸ್‌ನಲ್ಲಿ ಆಡಿರುವ 4 ಪಂದ್ಯಗಳಲ್ಲಿ 3 ಸೋಲು ಅನುಭವಿಸಿದರೆ, 1 ಪಂದ್ಯ ಟೈಗೊಂಡಿತ್ತು.
2004ರಲ್ಲಿ ಇಂಗ್ಲೆಂಡ್ ಎದುರು ಕೊನೆಯದಾಗಿ 2 ವಿಕೆಟ್‌ಗಳಿಂದ ಜಯಿಸಿತ್ತು. ಆಗ, ಪದಾರ್ಪಣೆ ಮಾಡಿದ್ದ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್, ಹಾಲಿ ಸರಣಿಯಲ್ಲಿ ವೀಕ್ಷಕ ವಿವರಣೆಕಾರರಾಗಿದ್ದಾರೆ. ಇತ್ತೀಚೆಗೆ ಭಾರತ ಮಹಿಳಾ ತಂಡ, ಇಂಗ್ಲೆಂಡ್ ಎದುರು ಏಕೈಕ ಟೆಸ್ಟ್ ಪಂದ್ಯ ಗೆದ್ದ ಸ್ಫೂರ್ತಿಯೊಂದಿಗೆ ಪುರುಷರ ತಂಡವೂ ಗೆಲುವಿನ ವಿಶ್ವಾಸದಲ್ಲಿದೆ.
ಟೀಮ್ ನ್ಯೂಸ್
ಭಾರತ: ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಹೊರಬಿದ್ದಿರುವುದರಿಂದ ಆಡುವ 11ರ ಬಳಗದಲ್ಲಿ ಕನಿಷ್ಠ 1 ಬದಲಾವಣೆ ನಿಶ್ಚಿತ. ಹರ್ಷ್ ದುಬೆ ಬದಲಿ ಆಟಗಾರನಾಗಿ ಸೇರ್ಪಡೆಗೊಂಡಿದ್ದು, ಕುಲದೀಪ್ ಯಾದವ್ ಸಹ ರೇಸ್‌ನಲ್ಲಿದ್ದಾರೆ. ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಕೆಎಲ್ ರಾಹುಲ್ ಫಿಟ್ ಆಗಿದ್ದು, ಇಶಾನ್ ಕಿಶನ್ ಸ್ಥಾನ ಬಿಟ್ಟುಕೊಡುವ ಸಾಧ್ಯತೆಗಳಿವೆ.
ಇಂಗ್ಲೆಂಡ್: ಟಿ20 ಬ್ಲಾಸ್ಟ್ ಫೈನಲ್ ಪಂದ್ಯಕ್ಕಾಗಿ ಟಾಮ್ ಬಾಂಟನ್, ಲಿಯಾಮ್ ಡಾಸನ್ ಅವರನ್ನು 15ರ ಬಳಗದಿಂದ ರಿಲೀಸ್ ಮಾಡಲಾಗಿದೆ. ಲಾರ್ಡ್ಸ್ ಪಂದ್ಯಕ್ಕೆ ಸಾಕಿಬ್ ಮಹಮೂದ್ ಬದಲಿಗೆ ಜೋಶ್ ಟಂಗ್ ಮರಳುವ ನಿರೀಕ್ಷೆ ಇದೆ.
*ಆರಂಭ: ಮಧ್ಯಾಹ್ನ 3.30
*ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net