ಪಾಕ್​ ಆಟಗಾರ್ತಿಯರ ಜತೆ ಶೇಕ್​ಹ್ಯಾಂಡ್​ ಮಾಡ್ತೀರಾ? ಅಚ್ಚರಿಯ ಉತ್ತರ ನೀಡಿದ ಹರ್ಮನ್‌ಪ್ರೀತ್ ಕೌರ್! Harmanpreet Kaur

ಪಾಕ್​ ಆಟಗಾರ್ತಿಯರ ಜತೆ ಶೇಕ್​ಹ್ಯಾಂಡ್​ ಮಾಡ್ತೀರಾ? ಅಚ್ಚರಿಯ ಉತ್ತರ ನೀಡಿದ ಹರ್ಮನ್‌ಪ್ರೀತ್ ಕೌರ್! Harmanpreet Kaur
ಪಾಕ್​ ಆಟಗಾರ್ತಿಯರ ಜತೆ ಶೇಕ್​ಹ್ಯಾಂಡ್​ ಮಾಡ್ತೀರಾ? ಅಚ್ಚರಿಯ ಉತ್ತರ ನೀಡಿದ ಹರ್ಮನ್‌ಪ್ರೀತ್ ಕೌರ್! Harmanpreet Kaur
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಟಿ20 ವಿಶ್ವಕಪ್‌ನ ಭಾಗವಾಗಿ ಇಂದು ಭಾರತ vs ಪಾಕಿಸ್ತಾನ ಮಹಿಳಾ ತಂಡಗಳ ನಡುವೆ ಪಂದ್ಯ
  • ಇಂದು ನಡೆಯಲಿರುವ ಹೈ-ವೋಲ್ಟೇಜ್ ಪಂದ್ಯವು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ
  • ಈ ಮಹತ್ವದ ಪಂದ್ಯಕ್ಕೂ ಮುನ್ನ ಒಂದು ಆಸಕ್ತಿದಾಯಕ ಹಾಗೂ ಚರ್ಚಾಸ್ಪದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ
  • ಭಾರತೀಯ ಆಟಗಾರ್ತಿಯರು ಪಾಕಿಸ್ತಾನದ ಆಟಗಾರ್ತಿಯರೊಂದಿಗೆ ಹ್ಯಾಂಡ್​ಶೇಕ್​ ಮಾಡುತ್ತಾರಾ ಎಂಬುದೇ ಆ ಚರ್ಚೆ
Harmanpreet Kaur : ಮಹಿಳಾ ಟಿ20 ವಿಶ್ವಕಪ್‌ನ ಭಾಗವಾಗಿ ಇಂದು (ಜೂನ್ 14) ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳ ನಡುವೆ ನಡೆಯಲಿರುವ ಹೈ-ವೋಲ್ಟೇಜ್ ಪಂದ್ಯವು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಆದರೆ, ಈ ಮಹತ್ವದ ಪಂದ್ಯಕ್ಕೂ ಮುನ್ನ ಒಂದು ಆಸಕ್ತಿದಾಯಕ ಹಾಗೂ ಚರ್ಚಾಸ್ಪದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.
ಹೌದು, ಈ ಪಂದ್ಯ ಮುಗಿದ ನಂತರ ಭಾರತೀಯ ಆಟಗಾರ್ತಿಯರು ಪಾಕಿಸ್ತಾನದ ಆಟಗಾರ್ತಿಯರೊಂದಿಗೆ ಹ್ಯಾಂಡ್​ಶೇಕ್​ ಮಾಡುತ್ತಾರಾ ಇಲ್ಲವೇ ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಏಕೆಂದರೆ, ಕಳೆದ 2025ರ ಪುರುಷರ ಏಷ್ಯಾ ಕಪ್‌ನಿಂದಲೂ ಭಾರತೀಯ ಕ್ರಿಕೆಟ್ ತಂಡಗಳು ಪಾಕಿಸ್ತಾನದ ವಿರುದ್ಧ 'ನೋ ಹ್ಯಾಂಡ್‌ಶೇಕ್' ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿರುವುದೇ ಈ ಕುತೂಹಲಕ್ಕೆ ಮುಖ್ಯ ಕಾರಣವಾಗಿದೆ.
ಭಾರತೀಯ ಕ್ರಿಕೆಟ್ ತಂಡಗಳು ಕಳೆದ ವರ್ಷ ನಡೆದ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್, ಅಂಡರ್-19 ಏಷ್ಯಾ ಕಪ್ ಮತ್ತು ಅಂಡರ್-19 ವಿಶ್ವಕಪ್ ಪಂದ್ಯಾವಳಿಗಳಲ್ಲೂ ಪಾಕಿಸ್ತಾನ ತಂಡದ ವಿರುದ್ಧ ಇದೇ 'ನೋ ಹ್ಯಾಂಡ್‌ಶೇಕ್' ನೀತಿಯನ್ನು ಮುಂದುವರಿಸಿದ್ದವು. ಕಳೆದ ವರ್ಷದ ಮಹಿಳಾ ವಿಶ್ವಕಪ್‌ನಲ್ಲೂ ಸಹ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ಅವರೊಂದಿಗೆ ಹ್ಯಾಂಡ್​ಶೇಕ್​ ಮಾಡಿರಲಿಲ್ಲ. 
ಇನ್ನು ಇಂದು ನಡೆಯಲಿರುವ ಮಹತ್ವದ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲೂ ಹರ್ಮನ್‌ಪ್ರೀತ್ ಅವರಿಗೆ ಇದೇ ಪ್ರಶ್ನೆಯನ್ನು ಕೇಳಲಾಯಿತು. ಆದರೆ, ಹರ್ಮನ್​ಪ್ರೀತ್​ ಅವರು ಯಾವುದೇ ವಿವಾದಕ್ಕೆ ಸಿಲುಕದೆ ಅತ್ಯಂತ ಚಾಣಾಕ್ಷತನದಿಂದ ಉತ್ತರಿಸಿದರು. ತಾವು ಕೇವಲ ಆಟದ ಕಡೆಗಷ್ಟೇ ಗಮನ ಹರಿಸಿದ್ದೇವೆ ಎಂದು ಸ್ಪಷ್ಟಪಡಿಸಿದ ಅವರು, ನಾವು ಇಲ್ಲಿಗೆ ಬಂದಿರುವುದು ಕ್ರಿಕೆಟ್ ಆಡಲು. ನಮ್ಮ ತಂಡದಲ್ಲಿ ಆಟವನ್ನು ಹೊರತುಪಡಿಸಿ ಬೇರೆ ಯಾವುದೇ ವಿಷಯಗಳ ಬಗ್ಗೆ ನಾವು ಚರ್ಚಿಸುವುದಿಲ್ಲ ಎಂದು ಹೇಳುವ ಮೂಲಕ ವಿಷಯಕ್ಕೆ ಮುಕ್ತಾಯ ಹಾಡಿದರು.
ಇದೇ ವೇಳೆ ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಸಹಜವಾಗಿಯೇ ಎದುರಾಗುವ ಒತ್ತಡದ ಬಗ್ಗೆಯೂ ಹರ್ಮನ್‌ಪ್ರೀತ್ ಮಾತನಾಡಿದರು. ನಾನೊಬ್ಬ ಸಾಮಾನ್ಯ ಅಭಿಮಾನಿಯಾಗಿ ಕ್ರಿಕೆಟ್ ನೋಡಲು ಪ್ರಾರಂಭಿಸಿದಾಗಿನಿಂದಲೂ ಈ ಹೈ-ವೋಲ್ಟೇಜ್ ಪಂದ್ಯದ ಒತ್ತಡವನ್ನು ಗಮನಿಸುತ್ತಾ ಬಂದಿದ್ದೇನೆ. ಈಗ ನಾನೇ ಸ್ವತಃ ಮೈದಾನಕ್ಕಿಳಿದು ಆಡುತ್ತಿರುವುದರಿಂದ ಈ ಒತ್ತಡ ಇನ್ನಷ್ಟು ಹೆಚ್ಚಾಗಿರುತ್ತದೆ. ಆದರೆ, ಇಂತಹ ದೊಡ್ಡ ಪಂದ್ಯಗಳನ್ನು ಒತ್ತಡವಾಗಿ ಪರಿಗಣಿಸದೆ, ಆಟವನ್ನು ಆನಂದಿಸುವಂತೆ ನಾವು ತಂಡದ ಆಟಗಾರ್ತಿಯರಿಗೆ ಸದಾ ಹೇಳುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ, ನಮಗೆ ಇದು ಮತ್ತೊಂದು ಸಾಮಾನ್ಯ ಪಂದ್ಯವಷ್ಟೇ ಎಂದು ಅವರು ಅಭಿಪ್ರಾಯಪಟ್ಟರು.
ಕಳೆದ ವರ್ಷ ನಡೆದ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ತೋರಿದ್ದ ಅದೇ ಪಾಸಿಟಿವ್ ಮನೋಭಾವ ಹಾಗೂ ಲಯವನ್ನು ಈ ಪಂದ್ಯಾವಳಿಯಲ್ಲೂ ಮುಂದುವರಿಸಿಕೊಂಡು ಹೋಗುವುದು ತಮ್ಮ ಗುರಿಯಾಗಿದೆ ಎಂದು ನಾಯಕಿ ಹರ್ಮನ್‌ಪ್ರೀತ್ ಕೌರ್ ವಿವರಿಸಿದರು. ಅಲ್ಲದೆ, ಇಂದಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಪ್ರಸಕ್ತ ಸಾಲಿನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಶುಭಾರಂಭದ ಪಯಣವನ್ನು ಅತ್ಯಂತ ಯಶಸ್ವಿಯಾಗಿ ಆರಂಭಿಸುವ ವಿಶ್ವಾಸವನ್ನು ನಾಯಕಿ ಹರ್ಮನ್​ಪ್ರೀತ್​ ಕೌರ್​ ವ್ಯಕ್ತಪಡಿಸಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net