ಸತ್ಯ ಹೇಳಬೇಡಿ... ಅದೇ ಕಾರಣಕ್ಕೆ ನಾವು ಗೆದ್ದಿದ್ದು! ದಕ್ಷಿಣ ಆಫ್ರಿಕಾ ಕ್ಯಾಪ್ಟನ್​ ಐಡೆನ್ ಮಾರ್ಕ್ರಮ್ ಹೇಳಿಕೆ ವೈರಲ್​ | IND vs SA

ದಕ್ಷಿಣ ಆಫ್ರಿಕಾ ತಂಡದ ನಾಯಕ
ದಕ್ಷಿಣ ಆಫ್ರಿಕಾ ತಂಡದ ನಾಯಕ
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಗೆಲುವಿನ ಓಟಕ್ಕೆ ಬ್ರೇಕ್​
  • ಮೊದಲ ಸೂಪರ್-8 ಪಂದ್ಯದಲ್ಲಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಗೆಲುವು
  • ಪಂದ್ಯೆ ಗೆದ್ದ ಬಳಿಕ ದ. ಆಫ್ರಿಕಾ ನಾಯಕನ ಹೇಳಿಕೆ ವೈರಲ್
IND vs SA: ನಿನ್ನೆ (ಫೆ.22) ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಹೀನಾಯ ಸೋಲುಂಡಿತು. ಸೆಮಿಫೈನಲ್​ಗೆ ಪ್ರವೇಶ ಪಡೆಯಬೇಕು ಎಂದರೆ ಈ ಹಂತದ ಪ್ರತಿಯೊಂದು ಪಂದ್ಯವನ್ನು ಗೆಲ್ಲುವುದು ಅನಿವಾರ್ಯ. ಹೀಗಿರುವಾಗ, ಉತ್ತಮ ರನ್​ರೇಟ್​ ಹೊಂದದ ಸೂರ್ಯಕುಮಾರ್ ಯಾದವ್ ಪಡೆ, ಆಲ್​ಔಟ್​ ಆಗುವ ಮೂಲಕ ಮುಗ್ಗರಿಸಿದ್ದು ಸದ್ಯ ಕ್ರಿಕೆಟ್​ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. 
ಟೀಮ್ ಇಂಡಿಯಾ ವಿರುದ್ಧ 76 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ಐಡೆನ್ ಮಾರ್ಕ್ರಮ್, ತಮ್ಮ ತಂಡದ ಆಟಗಾರರ ಬಗ್ಗೆ ಭಾರೀ ಸಂತಸ ವ್ಯಕ್ತಪಡಿಸಿದ್ದಾರೆ. ಡೇವಿಡ್ ಮಿಲ್ಲರ್ ಮತ್ತು ಡೆವಾಲ್ಡ್ ಬ್ರೆವಿಸ್​ ಅವರ ಅದ್ಭುತ ಇನ್ನಿಂಗ್ಸ್​ ಪಂದ್ಯದ ಗೆಲುವಿಗೆ ಪ್ರಮುಖ ಕಾರಣವಾಯಿತು. ಇದು ಎರಡೂ ತಂಡಗಳ ನಡುವಿನ ವ್ಯತ್ಯಾಸ ಎಂದು ಹೇಳಿದರು.
ಪಂದ್ಯ ಗೆದ್ದ ಬೆನ್ನಲ್ಲೇ ಮಾತನಾಡಿದ ಮಾರ್ಕ್ರಮ್, ಇದು ಅದ್ಭುತ ಗೆಲುವು. ಈ ಹಿಂದೆ ಈ ಮೈದಾನದಲ್ಲಿ ಆಡಿದ ವಿಕೆಟ್‌ಗಿಂತ ಪಿಚ್ ತುಂಬಾ ಭಿನ್ನವಾಗಿದೆ. ವಿಕೆಟ್ ಹೇಗೆ ಪಡೆಯಬಹುದು ಎಂದು ಮುಂಚಿತವಾಗಿಯೇ ಲೆಕ್ಕಾಚಾರ ಹಾಕಿ, ಅದಕ್ಕೆ ತಕ್ಕಂತೆ ಬೌಲಿಂಗ್ ಮಾಡಿ ಫಲಿತಾಂಶ ಪಡೆದ ನಮ್ಮ ಬೌಲರ್‌ಗಳಿಗೆ ಅಭಿನಂದನೆಗಳು. ಈ ಟೂರ್ನಮೆಂಟ್‌ನ ಆರಂಭದಲ್ಲಿ ಇದು ಸ್ವಲ್ಪ ಕಷ್ಟಕರವೆಂದು ಕಂಡುಬಂದರೂ, ಭಾರತದ ವಿರುದ್ಧದ ಪಂದ್ಯದಲ್ಲಿ ನಮ್ಮ ಬೌಲರ್‌ಗಳು ಕಮಾಲ್ ಮಾಡಿದ್ದಾರೆ ಎಂದರು.
ಡೇವಿಡ್ ಮಿಲ್ಲರ್ ಮತ್ತು ಡೆವಾಲ್ಡ್ ಬ್ರೆವಿಸ್ ಅವರ ಅತ್ಯುತ್ತಮ ಬ್ಯಾಟಿಂಗ್‌ ಬಗ್ಗೆ ನಾನು ಮಾತಾಡಲೇಬೇಕು. ಅವರ ಉತ್ತಮ ಜೊತೆಯಾಟ ತಂಡದ ಸ್ಕೋರ್​ ಅನ್ನು ಇನ್ನಷ್ಟು ಹೆಚ್ಚಿಸಿತು. ಭಾರತೀಯ ಬೌಲರ್‌ಗಳು ಇನ್ನಿಂಗ್ಸ್‌ನ ಆರಂಭದಲ್ಲಿ ಮತ್ತು ಕೊನೆಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೆ, ನಮ್ಮ ತಂಡವು ಮಿಡೆಲ್ ಆರ್ಡರ್​ನಲ್ಲಿ ಆಡಿದ ರೀತಿಯೇ ಗೆಲುವಿಗೆ ಕಾರಣವಾಯಿತು. ಇದೇ ಎರಡೂ ತಂಡಗಳ ನಡುವಿನ ಏಕೈಕ ವ್ಯತ್ಯಾಸ ಎಂದು ಒತ್ತಿ ಹೇಳಿದರು. 
ಯುಎಇ ವಿರುದ್ಧದ ಪಂದ್ಯದಲ್ಲಿ ನಾವು ಅಷ್ಟು ಚೆನ್ನಾಗಿ ಆಡಲು ಸಾಧ್ಯವಾಗಲಿಲ್ಲ. ಆದರೆ, ಈ ಪಂದ್ಯದಲ್ಲಿ ನಾವು ಉತ್ತಮವಾಗಿ ಆಡಿದ್ದೇವೆ. ಫೀಲ್ಡಿಂಗ್‌ನಲ್ಲಿ ಎರಡು ಕ್ಯಾಚ್‌ಗಳನ್ನು ಬಿಡುವುದು ಒಳ್ಳೆಯದಲ್ಲ. ತದನಂತರ ವೆಸ್ಟ್ ಇಂಡೀಸ್ ವಿರುದ್ಧ ಆಡುವ ಬಗ್ಗೆ ಹೇಳುವುದಾದರೆ, ಈ ಟೂರ್ನಮೆಂಟ್‌ಗೆ ಮೊದಲು ನಾವು ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದೇವೆ. ಸೋಮವಾರ ಬೆಳಗ್ಗೆಯಿಂದ ನಾವು ಆ ಪಂದ್ಯದ ಮೇಲೆ ಹೆಚ್ಚು ಗಮನ ಹರಿಸುತ್ತೇವೆ. ಇದು ಒಂದು ದೊಡ್ಡ ಪಂದ್ಯ ಮತ್ತು ಆ ಪಂದ್ಯವನ್ನು ಗೆಲ್ಲಲು ನಾವು ಶತಾಯಗತಾಯ ಪ್ರಯತ್ನ ಮಾಡುತ್ತೇವೆ ಎಂದು ಮಾರ್ಕ್ರಾಮ್ ಹೇಳಿದರು.

ಪಂದ್ಯದ ವಿವರ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 187 ರನ್ ಗಳಿಸಿತು. ಪ್ರೋಟಿಯಸ್​ ಬ್ಯಾಟ್ಸ್‌ಮನ್‌ಗಳಲ್ಲಿ ಡೇವಿಡ್ ಮಿಲ್ಲರ್ (63 ರನ್​, 35 ಎಸೆತ, 7 ಬೌಂಡರಿ, 3 ಸಿಕ್ಸರ್‌ಗಳು) ಅದ್ಭುತ ಅರ್ಧಶತಕ ಗಳಿಸಿದರು. ಜೂನಿಯರ್​ ಎಬಿಡಿ ಎಂದೇ ಖ್ಯಾತಿಯಾಗಿರುವ ಡೆವಾಲ್ಡ್ ಬ್ರೆವಿಸ್ (45 ರನ್​, 29 ಎಸೆತ, 3 ಬೌಂಡರಿಗಳು, 3 ಸಿಕ್ಸರ್‌ಗಳು) ಮತ್ತು ಡೆತ್​ ಓವರ್​ಗಳಲ್ಲಿ ಅದ್ಭುತ ಬ್ಯಾಟಿಂಗ್​ ಮಾಡುವಲ್ಲಿ ಹೆಸರಾಗಿರುವ ಟ್ರಿಸ್ಟಾನ್ ಸ್ಟಬ್ಸ್ (ಅಜೇಯ 44 ರನ್​, 24 ಎಸೆತ, 1 ಬೌಂಡರಿ, 3 ಸಿಕ್ಸರ್‌ಗಳು) ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಭಾರತೀಯ ಬೌಲರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಪಡೆದರೆ, ಅರ್ಷದೀಪ್​ ಸಿಂಗ್​ ಎರಡು ವಿಕೆಟ್ ಪಡೆದರು. ವರುಣ್ ಚಕ್ರವರ್ತಿ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.
ಆಫ್ರಿಕಾ ಪಡೆ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತ 18.5 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಆಯಿತು. ಶಿವಂ ದುಬೆ (42 ರನ್​, 37 ಎಸೆತ, 1 ಬೌಂಡರಿ, 3 ಸಿಕ್ಸರ್) ಭಾರತದ ಪರ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ತಂಡದ ಉಳಿದ ಆಟಗಾರರು ಬ್ಯಾಟಿಂಗ್​ನಲ್ಲಿ ವಿಫಲರಾದ್ದರಿಂದ ಟೀಮ್​ ಇಂಡಿಯಾ ಸೋಲಬೇಕಾಯಿತು. ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ಮಾರ್ಕೊ ಜಾನ್ಸೆನ್ ನಾಲ್ಕು ವಿಕೆಟ್ ಪಡೆದರೆ, ಕೇಶವ್ ಮಹಾರಾಜ್ ಮೂರು ವಿಕೆಟ್ ಪಡೆದರು. ಕಾರ್ಬಿನ್ ಬಾಷ್ ಎರಡು ವಿಕೆಟ್ ಪಡೆದರೆ, ಐಡೆನ್ ಮಾರ್ಕ್ರಾಮ್ ಒಂದು ವಿಕೆಟ್ ಪಡೆದರು, 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net