IND vs NZ ODI: ಇಂದು ಹ್ಯಾಮಿಲ್ಟನ್ನಲ್ಲಿ ನಡೆಯಬೇಕಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯವನ್ನು ಇದೀಗ ಬಿಡದೆ ಸುರಿಯುತ್ತಿರುವ ಮಳೆಯಿಂದ ರದ್ದುಗೊಳಿಸಲಾಗಿದೆ.
ಮಳೆಯ ಕಾರಣದಿಂದಾಗಿ, ಈ ಪಂದ್ಯದಲ್ಲಿ ಒಂದೇ ಒಂದು ಎಸೆತವನ್ನೂ ಹಾಕಲು ಸಾಧ್ಯವಾಗದ ಹಿನ್ನೆಲೆ ಮ್ಯಾಚ್ ಅನ್ನು ರದ್ದು ಮಾಡಲಾಯಿತು. ಕೇವಲ ಟಾಸ್ ಪ್ರಕ್ರಿಯೆ ಮಾತ್ರ ನಡೆಯಿತು. ಟಾಸ್ ಗೆದ್ದ ಶುಭಮನ್ ಗಿಲ್, ಪ್ಲ್ಯಾನಿಂಗ್ ಪ್ರಕಾರ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಕೊನೆಗೂ ವ್ಯರ್ಥವಾಯಿತು.
ಪಂದ್ಯವು ಬೆಳಗ್ಗೆ 7.30ಕ್ಕೆ ಪ್ರಾರಂಭ ಆಗಬೇಕಿತ್ತು. ಆದರೆ, ಮಳೆಯ ಅಡಚಣೆಯಿಂದಾಗಿ ಟಾಸ್ ಪ್ರಕ್ರಿಯೆಯನ್ನು ಬೆಳಗ್ಗೆ 9 ಗಂಟೆಗೆ ಮುಂದೂಡಲಾಯಿತು. ಟಾಸ್ ನಡೆದ ತಕ್ಷಣವೇ, ಮಳೆ ಮತ್ತೆ ಕ್ರೀಡಾಂಗಣವನ್ನು ಆವರಿಸಿಕೊಂಡ ಕಾರಣ, ಕೆಲವು ಗಂಟೆಗಳ ಕಾಲ ಕಾಯಲಾಯಿತು. ಮತ್ತು 50 ಓವರ್ ಪಂದ್ಯವನ್ನು 40 ಓವರ್ಗೆ ಇಳಿಸಲಾಯಿತು. ಇಷ್ಟಾದರೂ ನಿಲ್ಲದೆ, ಪದೇ ಪದೇ ಸುರಿದ ಮಳೆಯಿಂದ ಆಟ ಆರಂಭಿಸಲು ಸಾಧ್ಯವೇ ಆಗಲಿಲ್ಲ.
ಕನಿಷ್ಠ 20 ಓವರ್ಗಳ ಪಂದ್ಯವನ್ನಾದರೂ ನೋಡಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ವರುಣನ ಅಡಚಣೆಯಿಂದ ನಿರಾಶೆ ಉಂಟಾಯಿತು. ಮೊದಲ ಎರಡು ಏಕದಿನ ಪಂದ್ಯಗಳನ್ನು ಗೆದ್ದಿರುವ ಟೀಮ್, ಸದ್ಯ 2-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಇಂದಿನ ಪಂದ್ಯದಲ್ಲಿ ಗೆದ್ದು ಕಿವೀಸ್ನಿಂದ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿತ್ತು. ಆದರೆ, ಆ ಲೆಕ್ಕಾಚಾರ ಇಂದು ಈಡೇರಲಿಲ್ಲ. ಎರಡೂ ತಂಡಗಳ ನಡುವಿನ ನಾಲ್ಕನೇ ಏಕದಿನ ಪಂದ್ಯವು ಇದೇ ನ.13ರಂದು ಮೌಂಟ್ ಮೌಂಗನುಯಿಯಲ್ಲಿ ನಡೆಯಲಿದೆ,(ಏಜೆನ್ಸೀಸ್).