ಜಂಟಿ ವಿಜೇತರು? ಟಿ20 ವಿಶ್ವಕಪ್​ ಫೈನಲ್​ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಟ್ರೋಫಿ? ಹೀಗಿದೆ ವರದಿ | IND vs NZ Final

ಭಾರತ ಮತ್ತು ನ್ಯೂಜಿಲೆಂಡ್​ ಫೈನಲ್ ಪಂದ್ಯ
ಭಾರತ ಮತ್ತು ನ್ಯೂಜಿಲೆಂಡ್​ ಫೈನಲ್ ಪಂದ್ಯ
Published on

ಪ್ರಮುಖ ಮುಖ್ಯಾಂಶಗಳು

  • ಮಾ.08ರಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್
  • ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ
  • ಮಳೆಯಿಂದ ಪಂದ್ಯ ರದ್ದಾದರೆ ಜಂಟಿ ವಿಜೇತರು ಘೋಷಣೆ?
IND vs NZ Final: ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಹೊಸ್ತಿಲಲ್ಲಿದೆ. ಭಾರತ ತಂಡ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್‌ನ ಫೈನಲ್ ತಲುಪಿದ್ದು, ಇದೇ ಭಾನುವಾರ (ಮಾ.06) ಅಹಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಂತಿಮ ಹಣಾಹಣಿ ನಡೆಯಲಿದೆ. ಬಹಳ ಕುತೂಹಲದಿಂದ ಕಾಯುತ್ತಿರುವ ಕ್ರಿಕೆಟ್​ ಪ್ರಿಯರಿಗೆ ಇದೀಗ ಒಂದು ತಲೆಬಿಸಿ ಕಾಡಲಾರಂಭಿಸಿದೆ. ಅಷ್ಟಕ್ಕೂ, ಮಳೆಯಿಂದ ಈ ಪಂದ್ಯ ರದ್ದಾದರೆ ಯಾರಿಗೆ ಗೆಲುವು? ಜಂಟಿ ವಿಜೇತರು ಎಂದು ಯಾವ ಸಂದರ್ಭದಲ್ಲಿ ಘೋಷಿಸಲಾಗುವುದು ಎಂಬ ಪ್ರಶ್ನೆಗಳು ಉದ್ಬವಿಸಿವೆ.

ಚೊಚ್ಚಲ ಗೆಲುವಿಗಾಗಿ ನ್ಯೂಜಿಲೆಂಡ್​ ಹಪಹಪಿ

ಟಿ20 ವಿಶ್ವಕಪ್‌ ಫೈನಲ್​ನಲ್ಲಿ ಭಾರತ ಮತ್ತು ಕಿವೀಸ್ ಪಡೆಗಳು ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಟೀಮ್ ಇಂಡಿಯಾ ವಿರುದ್ಧ ಆಡಿರುವ ಮೂರು ಗ್ರೂಪ್​ ಸ್ಟೇಜ್​ ಪಂದ್ಯಗಳನ್ನು ನ್ಯೂಜಿಲೆಂಡ್ ತಂಡವೇ​ ಗೆದ್ದು ಬೀಗಿದೆ. ಒಂದೆಡೆ, ಈ ಬಾರಿ ಸತತವಾಗಿ ಉತ್ತಮ ಪ್ರದರ್ಶನ ನೀಡಿರುವ ಸ್ಯಾಟ್ನರ್​ ಪಡೆಯು ಫೈನಲ್ ಪಂದ್ಯವನ್ನು ಗೆದ್ದು ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಮಹಾದಾಸೆಯನ್ನು ಹೊಂದಿದೆ.
ಮತ್ತೊಂದೆಡೆ, ಭಾರತ ಈ ಫೈನಲ್​ನಲ್ಲಿ ಜಯ ಸಾಧಿಸಿ ಸತತ ಎರಡನೇ ಬಾರಿಗೆ ತವರಿನಲ್ಲಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಇತಿಹಾಸ ಸೃಷ್ಟಿಸಲು ಎದುರು ನೋಡುತ್ತಿದೆ. ಇಲ್ಲಿಯವರೆಗೆ ಯಾವುದೇ ಆತಿಥೇಯ ದೇಶ ಟಿ20 ವಿಶ್ವಕಪ್ ಗೆದ್ದಿಲ್ಲ. ಭಾನುವಾರ ನಡೆಯಲಿರುವ ಫೈನಲ್​ನಲ್ಲಿ ಏನಾದರೂ ಭಾರತ ಗೆದ್ದರೆ, ಈ ದಾಖಲೆ, ಹೆಗ್ಗಳಿಕೆ ಟೀಮ್ ಇಂಡಿಯಾ ಪಾಲಾಗಲಿದೆ.

ಮಳೆ ಬಂದರೆ ಮುಂದೇನು?

ಟಿ20 ವಿಶ್ವಕಪ್‌ನಲ್ಲಿ ಮಳೆಯಿಂದಾಗಿ ಕೆಲವು ಪಂದ್ಯಗಳು ರದ್ದಾಗಿವೆ. ಆದಾಗ್ಯೂ, ಅಂತಿಮ ಪಂದ್ಯಕ್ಕೆ ಮಳೆಯ ಭೀತಿ ಇಲ್ಲ. ಪ್ರಸ್ತುತ, ಭಾರತದಲ್ಲಿ ಬೇಸಿಗೆಗಾಲ ಆರಂಭವಾಗಿರುವ ಹಿನ್ನೆಲೆ ಅಹಮದಾಬಾದ್​ನಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಅಕಸ್ಮಾತ್, ಮೋಡ ಕವಿದು ಇದ್ದಕ್ಕಿದ್ದಂತೆ ಮಳೆ ಬಂದು ಪಂದ್ಯ ರದ್ದಾದರೆ ಏನಾಗುತ್ತದೆ ಎಂದು ನೋಡೋಣ.
ಐಸಿಸಿ ಅಂತಿಮ ಪಂದ್ಯಕ್ಕೆ ಮೀಸಲು ದಿನವನ್ನು ಈಗಾಗಲೇ ನಿಗದಿಪಡಿಸಿದೆ. ಮಳೆಯಿಂದಾಗಿ ಭಾನುವಾರ ಪಂದ್ಯ ನಡೆಯದಿದ್ದರೆ, ಮ್ಯಾಚ್​ ಸೋಮವಾರಕ್ಕೆ ಮುಂದೂಡಿಕೆ ಆಗಲಿದೆ. ವಾಸ್ತವವಾಗಿ, ಓವರ್‌ಗಳನ್ನು ಕಡಿಮೆ ಮಾಡಿದರೂ ಭಾನುವಾರದಂದೇ ಪಂದ್ಯವನ್ನು ಮುಗಿಸಲು ಪ್ರಯತ್ನಿಸಲಾಗುವುದು. ಇದಕ್ಕಾಗಿ 120 ನಿಮಿಷಗಳ ಹೆಚ್ಚುವರಿ ಸಮಯವೂ ಲಭ್ಯವಿರುತ್ತದೆ. ಡಕ್ವರ್ತ್-ಲೂಯಿಸ್ ವಿಧಾನದಡಿಯಲ್ಲಿ ವಿಜೇತರನ್ನು ಘೋಷಿಸಬೇಕಾದರೂ, ಎರಡೂ ತಂಡಗಳು ತಲಾ ಕನಿಷ್ಠ 10 ಓವರ್‌ಗಳನ್ನು ಬೌಲಿಂಗ್ ಮಾಡಬೇಕಿದೆ.
ಅಕಸ್ಮಾತ್​, ಸೋಮವಾರ ಕೂಡ ಪಂದ್ಯವನ್ನು ನಡೆಸಲು ಸಾಧ್ಯವಾಗಲಿಲ್ಲ ಎಂದಾದರೆ ಫೈನಲ್​ ಪಂದ್ಯವನ್ನು ವಿಧಿಯಿಲ್ಲದೇ ರದ್ದುಗೊಳಿಸಲಾಗುತ್ತದೆ. ಆಗ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net