ಫೈನಲ್​ ಪಂದ್ಯದಿಂದ ಇವರಿಬ್ಬರನ್ನು ಕೈಬಿಡಿ ಮೊದಲು! ಟೀಮ್​ ಇಂಡಿಯಾಗೆ ಸುನಿಲ್​ ಗವಾಸ್ಕರ್ ಮಹತ್ವದ ಸಲಹೆ | IND vs NZ Final

ಟೀಮ್ ಇಂಡಿಯಾ, ಸುನಿಲ್ ಗವಾಸ್ಕರ್​
ಟೀಮ್ ಇಂಡಿಯಾ, ಸುನಿಲ್ ಗವಾಸ್ಕರ್​
Published on

ಪ್ರಮುಖ ಮುಖ್ಯಾಂಶಗಳು

  • ಇಂದು (ಮಾ.08) ಅಹಮದಾಬಾದ್​​ ಕ್ರೀಡಾಂಗಣದಲ್ಲಿ ಟಿ20 ವಿಶ್ವಕಪ್​ ಫೈನಲ್​ ಪಂದ್ಯ
  • ಭಾರತ ಮತ್ತು ನ್ಯೂಜಿಲೆಂಡ್​ ತಂಡಗಳು ಟ್ರೋಫಿ ಎತ್ತಿಹಿಡಿಯಲು ಪೈಪೋಟಿಗೆ ಸಜ್ಜು
  • ಈ ಇಬ್ಬರನ್ನು ಫೈನಲ್​ ಪಂದ್ಯದಿಂದ ಹೊರಗಿಡಿ ಎಂದ ಸುನಿಲ್ ಗವಾಸ್ಕರ್
IND vs NZ Final: ಇಂದು (ಮಾ.08) ಅಹಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಫೈನಲ್​ ಪಂದ್ಯಕ್ಕೆ ಈಗಾಗಲೇ ಕ್ಷಣಗಣನೆ ಆರಂಭಗೊಂಡಿದೆ. ಭಾರತ ಮತ್ತು ನ್ಯೂಜಿಲೆಂಡ್​ ತಂಡಗಳು ಸಹ ಟ್ರೋಫಿ ಎತ್ತಿಹಿಡಿಯಲು ಸಜ್ಜಾಗಿವೆ. ಈ ಕಾತರದ ಪಂದ್ಯಕ್ಕೆ ಎರಡು ತಂಡಗಳಲ್ಲಿ ಏನೆಲ್ಲ ಬದಲಾವಣೆಗಳು ಆಗಿವೆ ಎಂಬ ಕುತೂಹಲ ಸದ್ಯ ಕ್ರಿಕೆಟ್​ ಪ್ರಿಯರಲ್ಲಿ ಕಾಡ ತೊಡಗಿದೆ. ಟೀಮ್ ಇಂಡಿಯಾದಲ್ಲಿ ಕೆಲವರನ್ನು ಆಡಿಸಬೇಡಿ ಎಂಬ ಸಲಹೆಗಳು ಅಭಿಮಾನಿಗಳಿಂದ ಬಂದಿದ್ದರೆ, ಕ್ರಿಕೆಟ್​ ದಿಗ್ಗಜರಿಂದ ಕೂಡ ಒಂದಷ್ಟು ಮಹತ್ವದ ಸಲಹೆಗಳು ಕೇಳಿಬಂದಿವೆ.
ಟೀಮ್ ಇಂಡಿಯಾ ದಂತಕಥೆ, ಮಾಜಿ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮಾತನಾಡಿ, ತಂಡದಲ್ಲಿ ಅಭಿಷೇಕ್ ಶರ್ಮ ಅವರ ಕಳಪೆ ಪ್ರದರ್ಶನವನ್ನು ಟೀಕಿಸಿದ್ದಾರೆ. ಅಭಿಷೇಕ್ ತಮ್ಮ ತಪ್ಪುಗಳಿಂದ ಕಲಿಯುವಲ್ಲಿ ಸೋತಿದ್ದಾರೆ. ಸತತ ಅವಕಾಶಗಳು ಸಿಕ್ಕರೂ ಕೂಡ ಮತ್ತದೇ ಮಿಸ್ಟೇಕ್​ಗಳನ್ನು ಮಾಡಿರುವುದು ಸರಿಯಲ್ಲ. ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿದ್ದರೂ, ಎದುರಾಳಿ ತಂಡದ ಬೌಲರ್‌ಗಳು ಹೇಗೆ ಬೌಲಿಂಗ್ ಮಾಡುತ್ತಿದ್ದಾರೆ ಎಂಬುದನ್ನು ಅರಿಯುವಲ್ಲಿ ಅವರು ವಿಫಲರಾಗಿದ್ದಾರೆ ಎಂದರು.
ಎಷ್ಟೇ ಹೇಳಿದರೂ, ತಮ್ಮ ತಪ್ಪನ್ನು ತಿದ್ದಿಕೊಳ್ಳುವಲ್ಲಿ ಎಡವುತ್ತಿರುವ ಅಭಿಷೇಕ್​ರನ್ನು ತಂಡದಿಂದ ತಕ್ಷಣಕ್ಕೆ ತೆಗೆದುಹಾಕುವುದು ಒಳಿತು. ಶರ್ಮ ಬದಲಿಗೆ ರಿಂಕು ಸಿಂಗ್‌ಗೆ ಅವಕಾಶ ನೀಡಬೇಕು. ನ್ಯೂಜಿಲೆಂಡ್​ ವಿರುದ್ಧ ಓಪನಿಂಗ್​ ಆಡಲು ಸಂಜು ಸ್ಯಾಮ್ಸನ್​ ಮತ್ತು ಇಶಾನ್ ಕಿಶನ್ ಉತ್ತಮ ಜೋಡಿ. ರಿಂಕುಗೆ ಹೋರಾಡುವ ಸ್ಪಿರಿಟ್​ ಇದೆ. ಫೈನಲ್​ನಲ್ಲಿ ಇಂತಹ ಮನಸ್ಥಿತಿವುಳ್ಳ ಆಟಗಾರರು ಇರಬೇಕು ಎಂದರು.
ಇನ್ನು ವರುಣ್​ ಚಕ್ರವರ್ತಿ ಬಗ್ಗೆ ಮಾತನಾಡಿದ ಗವಾಸ್ಕರ್​, ಸೂಪರ್​-8 ಹಂತದ ಪಂದ್ಯಗಳಲ್ಲಿ ಸತತವಾಗಿ ಫ್ಲಾಪ್ ಶೋ ನೀಡಿರುವ ವರುಣ್​, ಇಂಗ್ಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ 4 ಓವರ್​ಗೆ 60 ರನ್​ ಕೊಟ್ಟಿರುವುದು ಒಪ್ಪುವಂತದ್ದಲ್ಲ. ಹೀಗಾಗಿ, ವರುಣ್​ನನ್ನು ಕೈಬಿಟ್ಟು, ಅವರ ಸ್ಥಾನದಲ್ಲಿ ಕುಲದೀಪ್​ ಯಾದವ್​ರನ್ನು ಆಡಿಸುವುದು ಒಳ್ಳೆಯದು. ಅಹಮದಾಬಾದ್​ ಮೈದಾನದಲ್ಲಿ ಬೌಂಡರಿ ಲೈನ್​ ದೊಡ್ಡದು. ಹೀಗಾಗಿ, ಈ ಪಿಚ್​ನಲ್ಲಿ ಸ್ಪಿನ್ನರ್​ಗಳು ಕಮಾಲ್​ ಮಾಡಬಹುದು. ಈ ನಿಟ್ಟಿನಲ್ಲಿ, ಅಭಿಷೇಕ್​ ಮತ್ತು ವರುಣ್​ರನ್ನು ಫೈನಲ್​ ಪಂದ್ಯದಿಂದ ಮೊದಲು ಹೊರಗಿಡಿ ಎಂದು ಸಲಹೆ ನೀಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net