ಈ 5 ತಪ್ಪುಗಳನ್ನು ಟೀಮ್​ ಇಂಡಿಯಾ ಸರಿಪಡಿಸಿಕೊಳ್ಳದಿದ್ರೆ ಸೆಮಿಫೈನಲ್​ನಲ್ಲಿ ಸೋಲು ಗ್ಯಾರಂಟಿ! Indian team

ಈ 5 ತಪ್ಪುಗಳನ್ನು ಟೀಮ್​ ಇಂಡಿಯಾ ಸರಿಪಡಿಸಿಕೊಳ್ಳದಿದ್ರೆ ಸೆಮಿಫೈನಲ್​ನಲ್ಲಿ ಸೋಲು ಗ್ಯಾರಂಟಿ! Indian team
ಈ 5 ತಪ್ಪುಗಳನ್ನು ಟೀಮ್​ ಇಂಡಿಯಾ ಸರಿಪಡಿಸಿಕೊಳ್ಳದಿದ್ರೆ ಸೆಮಿಫೈನಲ್​ನಲ್ಲಿ ಸೋಲು ಗ್ಯಾರಂಟಿ! Indian team
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್​ ಲಗ್ಗೆ ಇಟ್ಟಿರುವ ಟೀಮ್​ ಇಂಡಿಯಾ
  • ಎರಡನೇ ಸೆಮಿಫೈನಲ್‌ನಲ್ಲಿ ಕ್ರಿಕೆಟ್​ ಜನಕ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ ಭಾರತ
  • ಟೀಮ್​ ಇಂಡಿಯಾ ಫೈನಲ್​ ತಲುಪಲಿ ಅನ್ನೋದು ಪ್ರತಿಯೊಬ್ಬ ಭಾರತೀಯನ ಪ್ರಾರ್ಥನೆ
Indian team : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ ನಿರ್ಣಾಯಕ ಸೂಪರ್​ 8 ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ಪಡೆಯನ್ನು ಮಣಿಸಿ, ಸೆಮಿಫೈನಲ್​ ಲಗ್ಗೆ ಇಟ್ಟಿರುವ ಟೀಮ್​ ಇಂಡಿಯಾ, ಗುರುವಾರ (ಮಾರ್ಚ್​ 05) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಕ್ರಿಕೆಟ್​ ಜನಕ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯವನ್ನು ಜಯಿಸಿ, ಟೀಮ್​ ಇಂಡಿಯಾ ಫೈನಲ್​ ತಲುಪಲಿ ಅನ್ನೋದು ಪ್ರತಿಯೊಬ್ಬ ಭಾರತೀಯನ ಪ್ರಾರ್ಥನೆಯಾಗಿದೆ.
ಆದರೆ, ಭಾರತ ತಂಡ ಸೆಮಿಫೈನಲ್ ತಲುಪಿದ ನಂತರವೂ ಪ್ರತಿ ಪಂದ್ಯದಲ್ಲೂ ಮಾಡುತ್ತಿರುವ ತಪ್ಪುಗಳು ಸ್ಪಷ್ಟವಾಗಿ ಗೋಚರಿಸಿವೆ. ಇದೇ ತಪ್ಪುಗಳಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಭಾರತ ಸೋಲುಂಡಿತು. ಇವುಗಳನ್ನು ಸರಿಪಡಿಸದಿದ್ದರೆ, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಖಂಡಿತವಾಗಿಯೂ ಹಿನ್ನಡೆಯಾಗುತ್ತದೆ. ಹಾಗಾದರೆ, ಟೀಮ್​ ಇಂಡಿಯಾ ಮಾಡುತ್ತಿರುವ ಆ ತಪ್ಪುಗಳು ಯಾವುವು ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.

ಆರಂಭಿಕ ಆಘಾತ

ಈ ಮೆಗಾ ಟೂರ್ನಮೆಂಟ್‌ನಲ್ಲಿ ಭಾರತ ತಂಡದ ದೊಡ್ಡ ದೌರ್ಬಲ್ಯವೆಂದರೆ ಆರಂಭಿಕ ಜೊತೆಯಾಟ. ಆರಂಭಿಕರಾಗಿ ಬಂದ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡಿದರೂ ಕೂಡ ಉತ್ತಮ ಆರಂಭ ನೀಡಲು ಸಾಧ್ಯವಾಗಿಲ್ಲ. ಇಬ್ಬರೂ ಎಡಗೈ ಬ್ಯಾಟ್ಸ್‌ಮನ್‌ಗಳಾಗಿರುವುದರಿಂದ, ಎದುರಾಳಿಗಳು ಆಫ್-ಸ್ಪಿನ್ ಬೌಲರ್‌ನೊಂದಿಗೆ ಮೊದಲ ಓವರ್ ಬೌಲಿಂಗ್ ಮಾಡುವ ಮೂಲಕ ತಮಗೆ ಬೇಕಾದ ಫಲಿತಾಂಶಗಳನ್ನು ಪಡೆಯುತ್ತಿದ್ದಾರೆ. ಹೀಗಾಗಿ, ಸಂಜು ಸ್ಯಾಮ್ಸನ್ ಅವರನ್ನು ಆರಂಭಿಕ ಆಟಗಾರನಾಗಿ ಕರೆತರಲಾಗಿದೆ. ಆದಾಗ್ಯೂ, ಮೊದಲ ವಿಕೆಟ್‌ಗೆ ಇದುವರೆಗೆ ಉತ್ತಮ ಜತೆಯಾಟವೇ ಬಂದಿಲ್ಲ. ಇನ್ನು ಸರಿಪಸಿಕೊಳ್ಳದಿದ್ದರೆ ಟೀಮ್ ಇಂಡಿಯಾ ಭಾರಿ ಬೆಲೆತೆರಬೇಕಾಗುತ್ತದೆ.

ಪವರ್​ ಪ್ಲೇನಲ್ಲಿ ವಿಕೆಟ್​ ಕಳೆದುಕೊಳ್ಳುತ್ತಿರುವುದು

ಆಕ್ರಮಣಕಾರಿಯಾಗಿ ಆಡುವ ಆತುರದಲ್ಲಿ, ಭಾರತ ತಂಡವು ಪವರ್ ಪ್ಲೇನಲ್ಲಿಯೇ ಒಂದು ಅಥವಾ ಮೂರು ವಿಕೆಟ್‌ಗಳನ್ನು ಕಳೆದುಕೊಳ್ಳುತ್ತದೆ. ಪವರ್ ಪ್ಲೇನಲ್ಲಿಯೇ ಮೂರು ಅಥವಾ ನಾಲ್ಕು ವಿಕೆಟ್‌ಗಳು ಬಿದ್ದರೆ, ಅದು ತಂಡದ ಉಳಿದವರ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ. ಇದು ತಂಡದ ಸ್ಕೋರ್ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಆದ್ದರಿಂದ, ಪವರ್ ಪ್ಲೇನಲ್ಲಿ ವಿಕೆಟ್‌ಗಳನ್ನು ನೀಡದೆ ಆಡುವುದು ಹೆಚ್ಚುವರಿ ಪ್ರಯೋಜನವನ್ನು ನೀಡುತ್ತದೆ.

ಕಳಪೆ ಫೀಲ್ಡಿಂಗ್​

ಈ ಮೆಗಾ ಟೂರ್ನಮೆಂಟ್‌ನಲ್ಲಿ ಭಾರತೀಯ ತಂಡದ ಫೀಲ್ಡಿಂಗ್ ತುಂಬಾ ಕಳಪೆಯಾಗಿದೆ. ಭಾರತೀಯ ಫೀಲ್ಡರ್‌ಗಳು ಒಟ್ಟು 13 ಕ್ಯಾಚ್‌ಗಳನ್ನು ಬಿಟ್ಟಿದ್ದಾರೆ. ಈ ಟೂರ್ನಮೆಂಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಮಿಸ್​ ಮಾಡಿದ ತಂಡವಾಗಿ ಭಾರತ ಮೊದಲ ಸ್ಥಾನದಲ್ಲಿದೆ. ಸದ್ಯ ಟೀಮ್​ ಇಂಡಿಯಾ, ಪಂದ್ಯಗಳನ್ನು ಗೆಲ್ಲುತ್ತಿರುವುದರಿಂದ, ಯಾರೂ ಇದರ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ. ಭಾರತ ತಂಡವು ಸಾಧ್ಯವಾದಷ್ಟು ಬೇಗ ತನ್ನ ಫೀಲ್ಡಿಂಗ್ ಅನ್ನು ಸುಧಾರಿಸಬೇಕಾಗಿದೆ.

ಅಭಿಷೇಕ್ ಮತ್ತು ಸೂರ್ಯ ವೈಫಲ್ಯ

ಅಭಿಷೇಕ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್ ಕೂಡ ಭಾರತ ತಂಡವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ಟೂರ್ನಮೆಂಟ್‌ನಲ್ಲಿ ಇಲ್ಲಿಯವರೆಗೆ ಇಬ್ಬರೂ ತಲಾ ಒಂದು ಪಂದ್ಯದಲ್ಲಿ ಸಮರ್ಥವಾಗಿ ಆಡಿದ್ದಾರೆ. ಅವರು ತಲಾ ಅರ್ಧಶತಕ ದಾಖಲಿಸಿದ್ದಾರೆ. ಆದರೆ, ಉಳಿದ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಬೇಗನೆ ವಿಕೆಟ್​ ಒಪ್ಪಿಸುತ್ತಿರುವುದು ಉಳಿದವರ ಮೇಲೆ ಒತ್ತಡ ಹೆಚ್ಚಿಸಿದೆ.

ಕಳಪೆ ಬೌಲಿಂಗ್​

ಭಾರತೀಯ ಬೌಲರ್‌ಗಳಲ್ಲಿ ಸ್ಥಿರತೆಯ ಕೊರತೆ ಇದೆ. ಒಂದು ಪಂದ್ಯದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ ಬೌಲರ್, ಮತ್ತೊಂದು ಪಂದ್ಯದಲ್ಲಿ ರನ್ ಬಿಟ್ಟುಕೊಡುತ್ತಿದ್ದಾರೆ. ಸದ್ಯ ಭಾರತ ಜಸ್ಪ್ರೀತ್ ಬುಮ್ರಾ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಸ್ಪಿನ್ನರ್ ವರುಣ್ ಚಕ್ರವರ್ತಿ ಲೀಗ್ ಹಂತದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರು ಆದರೆ, ಸೂಪರ್ -8 ರಲ್ಲಿ ನಿರಾಶೆ ಮೂಡಿಸಿದ್ದಾರೆ. ಅರ್ಷದೀಪ್​ ಸಿಂಗ್ ಆರಂಭಿಕ ಓವರ್‌ಗಳಲ್ಲಿ ಸ್ವಿಂಗ್ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಒತ್ತಡಕ್ಕೆ ಸಿಲುಕಿಸುತ್ತಿದ್ದಾರೆ ಆದರೆ, ಡೆತ್ ಓವರ್‌ಗಳಲ್ಲಿ ರನ್ ಬಿಟ್ಟುಕೊಡುತ್ತಿದ್ದಾರೆ. ಹಾರ್ದಿಕ್, ಅಕ್ಷರ್ ಮತ್ತು ಶಿವಂ ದುಬೆ ಅವರಲ್ಲಿ ಸ್ಥಿರತೆಯ ಕೊರತೆ ಇದೆ.
ಮೇಲಿನ ಈ ಎಲ್ಲ ತಪ್ಪುಗಳನ್ನು ಸರಿಪಡಿಸಿಕೊಂಡರೆ ಮಾತ್ರ ಟೀಮ್​ ಇಂಡಿಯಾ ವಿಶ್ವಕಪ್​ ಗೆಲ್ಲಲಿದೆ. ಒಂದು ವೇಳೆ ಈ ತಪ್ಪುಗಳು ಮರುಕಳಿಸಿದರೆ ಸೆಮಿಫೈನಲ್​ನಿಂದಲೇ ಟೀಮ್​ ಇಂಡಿಯಾ ಹೊರಬಿದ್ದರೆ ಅಚ್ಚರಿಪಡಬೇಕಿಲ್ಲ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net