ಅಭಿಷೇಕ್​ ಜತೆ ಓಪನಿಂಗ್​ಗೆ ಈತನೇ ಕಣಕ್ಕೆ? ಇಂಗ್ಲೆಂಡ್​ ವಿರುದ್ಧದ 4ನೇ ಟಿ20 ಪಂದ್ಯಕ್ಕೆ ತಂಡದಲ್ಲಿ ಮಹತ್ವದ ಬದಲಾವಣೆ! ​

IND vs ENG ನಾಲ್ಕನೇ ಟಿ20 ಪಂದ್ಯ
IND vs ENG ನಾಲ್ಕನೇ ಟಿ20 ಪಂದ್ಯ
Published on

ಪ್ರಮುಖ ಮುಖ್ಯಾಂಶಗಳು

  • ಇಂದು (ಜು.09) ಬ್ರಿಸ್ಟಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ 4ನೇ ಟಿ20 ಪಂದ್ಯ
  • ಇಂದಿನ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಗೆಲುವು ಅನಿವಾರ್ಯ
  • ಭಾರತದ ಅಂತಿಮ ತಂಡದಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ
IND vs ENG: ಪ್ರಸಕ್ತ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಭಾರತ ಎರಡು ಟಿ20 ಪಂದ್ಯಗಳಲ್ಲಿ ಹೀನಾಯ ಸೋಲುಂಡಿದ್ದು, ಇಂದು ನಡೆಯಲಿರುವ ನಾಲ್ಕನೇ ಟಿ20 ಪಂದ್ಯಕ್ಕೆ ಸಿದ್ಧವಾಗಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಎಡಗೈ ಬ್ಯಾಟರ್, ಯುವ ಬ್ಯಾಟಿಂಗ್​ ಸೆನ್ಸೇಷನ್​​ ವೈಭವ್ ಸೂರ್ಯವಂಶಿ ಮತ್ತು ಟಿ20 ವಿಶ್ವಕಪ್​ ಹೀರೋ, ಬಲಗೈ ಬ್ಯಾಟ್ಸ್​ಮನ್​ ಸಂಜು ಸ್ಯಾಮ್ಸನ್​ ಪೈಕಿ ಯಾರಿಗೆ ಅಭಿಷೇಕ್​ ಶರ್ಮಾ ಜೊತೆ ಓಪನಿಂಗ್​ಗೆ ಅವಕಾಶ ಸಿಗಲಿದೆ ಎಂಬ ಪ್ರಶ್ನೆ ಕ್ರಿಕೆಟ್​ ಪ್ರಿಯರನ್ನು ಬೆಂಬಿಡದೆ ಕಾಡುತ್ತಿದೆ. ​
ಐದು ಪಂದ್ಯಗಳ ಟಿ20 ಸರಣಿಯಲ್ಲಿ 0-2 ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾ, ಬ್ರಿಸ್ಟಲ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯಕ್ಕೆ ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ ಎಂದು ಹಲವು ಕ್ರಿಕೆಟ್​ ವರದಿಗಳು ತಿಳಿಸಿವೆ. ಆಂಗ್ಲರ ಮಣ್ಣಿನಲ್ಲಿ ಮತ್ತೊಂದು ಹೀನಾಯ ಸೋಲು ಅನುಭವಿಸದಿರಲು ಎದುರುನೋಡುತ್ತಿರುವ ಭಾರತ, ನಿರ್ಣಾಯಕ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಉಳಿಯಲು ಪಣತೊಟ್ಟಿದೆ.
ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದಾದರೂ, ಮುಂದಿನ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಪ್ರಾಬಲ್ಯ ಸಾಧಿಸಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಮೂರನೇ ಟಿ20ಯಲ್ಲಿ ಭಾರತ ಕೇವಲ 76 ರನ್‌ಗೆ ಆಲೌಟ್ ಆಯಿತು. ಭಾರತ 125 ರನ್‌ಗಳ ಭಾರಿ ಅಂತರದಿಂದ ಸೋಲುಂಡಿತು. ಇದಕ್ಕೆ ಮುಖ್ಯ ಕಾರಣವೇ ಬ್ಯಾಟಿಂಗ್ ವೈಫಲ್ಯತೆ. ಒಬ್ಬ ಬ್ಯಾಟ್ಸ್‌ಮನ್ ಕೂಡ ಕನಿಷ್ಠ 15 ರನ್​ಗಿಂತಲೂ ಹೆಚ್ಚು ಗಳಿಸಲಿಲ್ಲ. ಈ ಪರಿಸ್ಥಿತಿಯಲ್ಲಿ, ಉಳಿದ ಎರಡು ಪಂದ್ಯಗಳಿಗೆ ತಂಡದ ಬ್ಯಾಟಿಂಗ್​ನಲ್ಲಿ ಬದಲಾವಣೆಯ ಕೂಗು ಜೋರಾಗಿವೆ.
ವೈಭವ್ ಸೂರ್ಯವಂಶಿ ಆಡಿದ ಎರಡು ಪಂದ್ಯಗಳಲ್ಲಿ ಸ್ಫೋಟಕ ಆರಂಭವನ್ನೇ ನೀಡಿದ್ದೇ ಆದರೂ ಹೆಚ್ಚು ಕಾಲ ಕ್ರೀಸ್​ನಲ್ಲಿ ನಿಂತು, ತಂಡಕ್ಕೆ ಆಸರೆಯಾಗುವಲ್ಲಿ ವಿಫಲರಾಗಿದ್ದಾರೆ. ತಮ್ಮ ಚೊಚ್ಚಲ ಪಂದ್ಯದಲ್ಲಿ 10 ಎಸೆತಗಳಲ್ಲಿ 14 ರನ್ ಮತ್ತು ಮುಂದಿನ ಪಂದ್ಯದಲ್ಲಿ 5 ಎಸೆತಗಳಲ್ಲಿ 13 ರನ್ ಬಾರಿಸಿದರು. ಇಷ್ಟಾದರೂ ಮ್ಯಾನೇಜ್​ಮೆಂಟ್​ಗೆ ಮುಂದಿನ ಪಂದ್ಯಗಳಲ್ಲಿ ಅವರಿಂದ ಅಬ್ಬರದ ಬ್ಯಾಟಿಂಗ್ ಬರಬಹುದು ಎಂಬ ನಿರೀಕ್ಷೆಗಳಿವೆ. ​
ಮತ್ತೊಂದೆಡೆ, ಆಡಿದ ಮೂರು ಟಿ20 ಪಂದ್ಯಗಳಲ್ಲಿ ಕಳಪೆ ಫಾರ್ಮ್​ ತೋರಿದ ಸಂಜು ಸ್ಯಾಮ್ಸನ್​ರನ್ನು ಅಭಿಷೇಕ್ ಶರ್ಮಾ ಜತೆ ಓಪನಿಂಗ್​ಗೆ ಕಳುಹಿಸಬೇಕು ಎಂದು ಅನೇಕ ಕ್ರಿಕೆಟ್​ ಪ್ರೇಮಿಗಳು ಮತ್ತು ಮಾಜಿ ಹಿರಿಯ ಕ್ರಿಕೆಟಿಗರು ಅಭಿಪ್ರಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಮ್ಯಾನೇಜ್​ಮೆಂಟ್​ ಮತ್ತೊಮ್ಮೆ ಸಂಜುಗೆ ಅವಕಾಶ ಕೊಡುವ ಸಾಧ್ಯತೆಗಳು ಹೆಚ್ಚಿವೆ. ಇದರೊಟ್ಟಿಗೆ, ಮಧ್ಯಮ ಕ್ರಮಾಂಕದಲ್ಲಿಯೂ ಒಂದಷ್ಟು ಬದಲಾವಣೆಗಳನ್ನು ತರಲು ಚರ್ಚೆಗಳು ನಡೆದಿವೆ ಎನ್ನಲಾಗಿದೆ.
ವರದಿಗಳ ಪ್ರಕಾರ, ತಿಲಕ್ ವರ್ಮಾ ಬದಲಿಗೆ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಅಗ್ರ ಕ್ರಮಾಂಕದಲ್ಲಿ ಅನುಭವ ಹೊಂದಿರುವ ಸ್ಯಾಮ್ಸನ್, ಈ ಬಾರಿ ಐದನೇ ಸ್ಥಾನದಲ್ಲಿ ಕಣಕ್ಕೆ ಇಳಿಯಬಹುದು. ಮತ್ತೊಂದೆಡೆ, ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ತಮ್ಮ ಆಲ್‌ರೌಂಡ್ ಸಾಮರ್ಥ್ಯದೊಂದಿಗೆ ಎಂದಿನಂತೆ ತಂಡದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ.
ಬೌಲಿಂಗ್ ವಿಭಾಗದಲ್ಲಿ, ಅರ್ಷದೀಪ್ ಸಿಂಗ್ ಮತ್ತು ಪ್ರಿನ್ಸ್ ಯಾದವ್ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಸಜ್ಜಾಗಿದ್ದಾರೆ. ವರುಣ್ ಚಕ್ರವರ್ತಿ ಪ್ರಮುಖ ಸ್ಪಿನ್ನರ್ ಆಗಿ ಮುಂದುವರಿಯಲಿದ್ದು, ಹರ್ಷಿತ್ ರಾಣಾ ಕೂಡ ಅಂತಿಮ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಈ ಪಂದ್ಯ ಭಾರತಕ್ಕೆ ತುಂಬಾನೇ ಮುಖ್ಯವಾಗಿದ್ದು, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಸೇರಿದಂತೆ ಈ ಮೂರು ವಿಭಾಗಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಗೆಲುವು, ಸರಣಿಯಲ್ಲಿ ಉಳಿಯಲು ಸಾಧ್ಯ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net