ಇಂಗ್ಲೆಂಡ್​ ವಿರುದ್ಧ 2ನೇ ಏಕದಿನ ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾ ಸ್ಟಾರ್​ ವೇಗಿಗೆ ಐಸಿಸಿ ವಾರ್ನಿಂಗ್ | IND vs ENG 2nd ODI

IND vs ENG 2nd ODI
IND vs ENG 2nd ODI
Published on

ಪ್ರಮುಖ ಮುಖ್ಯಾಂಶಗಳು

  • ಇಂದು ಭಾರತ-ಇಂಗ್ಲೆಂಡ್​ ನಡುವಿನ ಎರಡನೇ ಏಕದಿನ ಪಂದ್ಯ
  • ಈ ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ವೇಗಿಗೆ ಐಸಿಸಿ ಎಚ್ಚರಿಕೆ
  • ಒಂದು ಡಿಮೆರಿಟ್​ ಪಾಯಿಂಟ್​ ಕಟ್​ ಮಾಡಿ, ವಾರ್ನಿಂಗ್ ನೀಡಿದ ಐಸಿಸಿ
IND vs ENG 2nd ODI: ಇಂದು (ಜು.16) ಕಾರ್ಡಿಫ್ ವೇಲ್ಸ್ ಮೈದಾನದಲ್ಲಿ ನಡೆಯಲಿರುವ ಇಂಗ್ಲೆಂಡ್​ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿಯೂ ಗೆಲುವು ಸಾಧಿಸಿ, ಸರಣಿಯನ್ನು ಗೆದ್ದು ಬೀಗಲು ಟೀಮ್ ಇಂಡಿಯಾ ಕಣ್ಣಿಟ್ಟಿದೆ. ಇದೇ ಸಮಯದಲ್ಲಿ, ಪಂದ್ಯ ಆರಂಭಕ್ಕೂ ಮುನ್ನವೇ ಭಾರತೀಯ ತಂಡದ ಸ್ಟಾರ್​ ವೇಗಿ ಗುರ್ನೂರ್ ಬ್ರಾರ್​ಗೆ ಐಸಿಸಿ ಖಡಕ್ ಎಚ್ಚರಿಕೆ ನೀಡಿದೆ.
ವೇಗದ ಬೌಲರ್​ಗೆ ವಾರ್ನಿಂಗ್ ನೀಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ನಿಯಮವನ್ನು ಉಲ್ಲಂಘಿಸಿದ ಆರೋಪದ ಮೇಲೆ ಬ್ರಾರ್​ ಅವರಿಗೆ ಮುಂದಿನ ಪಂದ್ಯಗಳಲ್ಲಿ ಇಂತಹ ತಪ್ಪನ್ನು ರಿಪೀಟ್​ ಮಾಡದಂತೆ ಎಚ್ಚರಿಸಿ, ಒಂದು ಡಿಮೆರಿಟ್ ಪಾಯಿಂಟ್ ಅನ್ನು ವಿಧಿಸಿದೆ.

ಬ್ರಾರ್​ ಮಾಡಿದ ತಪ್ಪೇನು?

ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ, ಸರಣಿಯಲ್ಲಿ ಮುನ್ನಡೆ ಸಾಧಿಸಿದ ಟೀಮ್ ಇಂಡಿಯಾ ಪರ ವೇಗಿ ಗುರ್ನೂರ್ ಬ್ರಾರ್, ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.9 ಅನ್ನು ಉಲ್ಲಂಘಿಸಿರುವುದು ಸಾಬೀತಾಗಿದೆ. ಈ ನಿಯಮ ಪ್ರಕಾರ, ಅಂತಾರಾಷ್ಟ್ರೀಯ ಪಂದ್ಯದಲ್ಲಿ ಎದುರಾಳಿ ಆಟಗಾರನ ಮೇಲೆ ಅಥವಾ ಆತನ ಹತ್ತಿರ ಅನುಚಿತ ಹಾಗೂ ಅಪಾಯಕಾರಿ ರೀತಿಯಲ್ಲಿ ಚೆಂಡನ್ನು ಎಸೆಯುವುದು ತಪ್ಪಾಗಿದೆ.

ಮೈದಾನದಲ್ಲಿ ನಡೆದಿದ್ದೇನು?

ಇಂಗ್ಲೆಂಡ್ ಇನಿಂಗ್ಸ್‌ನ 8ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಗುರ್ನೂರ್ ಬ್ರಾರ್ ತಮ್ಮ ಬೌಲಿಂಗ್​ನಲ್ಲಿ ಬ್ಯಾಟರ್​ನಿಂದ ಬಂದ ಬಾಲ್​ ಅನ್ನು ಹಿಡಿದು, ಕ್ರೀಸ್‌ನಲ್ಲಿದ್ದ ಇಂಗ್ಲೆಂಡ್ ಬ್ಯಾಟರ್ ಬೆನ್ ಡಕೆಟ್ ಅವರತ್ತ ನೇರವಾಗಿ ಬೀಸಿದರು. ಬ್ರಾರ್​ರ ಈ ವರ್ತನೆ ಅತ್ಯಂತ ಅಪಾಯಕಾರಿ ಹಾಗೂ ಸರಿಯಲ್ಲ ಎಂದು ಆನ್​ಫೀಲ್ಡ್​ ಅಂಪೈರ್​ ತೀರ್ಮಾನಿಸಿದ ಬೆನ್ನಲ್ಲೇ ಐಸಿಸಿ ಎಚ್ಚರಿಕೆ ಕೊಟ್ಟಿದೆ.

ಏನಿದು ಡಿಮೆರಿಟ್ ಪಾಯಿಂಟ್?

ಮೈದಾನದಲ್ಲಿ ಆಟಗಾರರು ಪಂದ್ಯದ ನಡುವೆ ಅಶಿಸ್ತು ತೋರಿದರೆ, ಅಂತಹವರಿಗೆ ಐಸಿಸಿ ಡಿಮೆರಿಟ್ ಪಾಯಿಂಟ್‌ಗಳನ್ನು ನೀಡುತ್ತದೆ. ಈ ಡಿಮೆರಿಟ್ ಪಾಯಿಂಟ್‌ಗಳು ಆಟಗಾರನ ಶಿಸ್ತಿನ ಪಟ್ಟಿಯಲ್ಲಿ ಒಂದು ವರ್ಷದ ಮಟ್ಟಿಗೆ ಇರಲಿದೆ. ನಂತರ ಡಿಲೀಟ್​ ಆಗಲಿವೆ. ಅದೇ ಏನಾದರೂ 24 ತಿಂಗಳ ಅವಧಿಯಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಬಾರಿ ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದರೆ, ಆ ಆಟಗಾರ ಮುಂದಿನ ಪಂದ್ಯಗಳಿಂದ ಬ್ಯಾನ್​ ಆಗುವ ಎಲ್ಲ ಸಾಧ್ಯತೆಗಳು ಹೆಚ್ಚಿರುತ್ತವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net