ಮಳೆಯಿಂದ ಇಂಡೋ-ಪಾಕ್​ ಪಂದ್ಯ ರದ್ದಾದರೆ ವಿಶ್ವಕಪ್​ನಿಂದ ಈ 3 ತಂಡಗಳಿಗೆ ಗೇಟ್​ಪಾಸ್​! T20 World Cup

ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಮಳೆ ಭೀತಿ ( T20 World Cup )
ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಮಳೆ ಭೀತಿ ( T20 World Cup )
Published on

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟ್​ ಪ್ರೇಮಿಗಳು ಬಹಳ ಕಾತರದಿಂದ ಎದುರು ನೋಡುತ್ತಿದ್ದ ಆ ಸಮಯ ಹತ್ತಿರಬಂದಿದೆ
  • ಟಿ20 ವಿಶ್ವಕಪ್‌ನ ಭಾಗವಾಗಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಇಂದು ಮುಖಾಮುಖಿಯಾಗಲಿವೆ
  • ಈ ಹೈವೋಲ್ಟೇಜ್ ಪಂದ್ಯಕ್ಕೆ ಕ್ರೀಡಾ ಜಗತ್ತೇ ಕಾದು ಕುಳಿತಿದ್ದು, ಕ್ಷಣಗಣನೆ ಆರಂಭವಾಗಿದೆ
  • ಶ್ರೀಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಮಳೆ ಭೀತಿ ಇದೆ
T20 World Cup : ಟಿ20 ವಿಶ್ವಕಪ್‌ನ ಭಾಗವಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಇಂದು (ಫೆ. 15) ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿರುವ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ, ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಲಂಕಾದ ಹವಾಮಾನ ಇಲಾಖೆ ತಿಳಿಸಿದೆ. ಪಂದ್ಯದ ಸಮಯದಲ್ಲೇ ಗುಡುಗು ಮತ್ತು ಮಿಂಚಿನೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಶೇ. 70 ರಿಂದ 80 ರಷ್ಟು ಇದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ, ಪಂದ್ಯ ರದ್ದಾಗುವ ಭೀತಿ ಎದುರಾಗಿದೆ.
ಪಂದ್ಯವನ್ನು ಆಯೋಜಿಸುತ್ತಿರುವ ಪ್ರೇಮದಾಸ ಕ್ರೀಡಾಂಗಣದಲ್ಲಿ ಒಳಚರಂಡಿ ವ್ಯವಸ್ಥೆ ಅತ್ಯುತ್ತಮವಾಗಿದೆ. ಮಳೆ ನಿಂತ 20 ನಿಮಿಷಗಳಲ್ಲಿ ಮೈದಾನವನ್ನು ಸಿದ್ಧಪಡಿಸಲು ಸಾಧ್ಯವಿದೆ. ಆದರೆ, ಭಾರಿ ಮಳೆ ಸುರಿದು ಹೊರಾಂಗಣ ಕೆಸರುಮಯವಾದರೆ ಪಂದ್ಯ ಆಡುವುದು ಕಷ್ಟಕರವಾಗಿರುತ್ತದೆ. ಈ ಸಮಯದಲ್ಲಿ ಬೇರೆ ದಾರಿಯಿಲ್ಲದೇ ಪಂದ್ಯವನ್ನು ರದ್ದು ಮಾಡಬೇಕಾಗುತ್ತದೆ.

ಮೀಸಲು ದಿನ ಇಲ್ಲ

ಸಾಮಾನ್ಯವಾಗಿ ಟಿ20 ಪಂದ್ಯಗಳಲ್ಲಿ ಎರಡೂ ತಂಡಗಳು ಕನಿಷ್ಠ 5 ಓವರ್ ಬೌಲ್ ಮಾಡಬೇಕಾಗುತ್ತದೆ. ಆಗ ಮಾತ್ರ ಪಂದ್ಯದ ಫಲಿತಾಂಶ ನಿರ್ಧಾರವಾಗುತ್ತದೆ. ಭಾರಿ ಮಳೆಯಿಂದಾಗಿ ಕನಿಷ್ಠ ಐದು ಓವರ್ ಬೌಲ್ ಮಾಡಲು ಸಾಧ್ಯವಾಗದೇ ಇದ್ದಾಗ ಮಾತ್ರ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಒಂದು ವೇಳೆ ಪಂದ್ಯ ಮಳೆಯಿಂದಾಗಿ ರದ್ದಾದರೆ, ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗುವುದು. ಇದು ಗ್ರೂಪ್​ ಹಂತದ ಪಂದ್ಯವಾದ್ದರಿಂದ, ಈ ಪಂದ್ಯಕ್ಕೆ ಯಾವುದೇ ಮೀಸಲು ದಿನವನ್ನು ಐಸಿಸಿ ನಿಗದಿಪಡಿಸಿಲ್ಲ.

ಇಂಡೋ-ಪಾಕ್​ ಸೂಪರ್​ 8ರ ಹಂತಕ್ಕೆ

ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಇದುವರೆಗೆ ತಲಾ ಎರಡು ಪಂದ್ಯಗಳನ್ನು ಗೆದ್ದಿವೆ. ಇದರಿಂದ ತಲಾ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿವೆ. ಭಾನುವಾರ ನಡೆಯಲಿರುವ ಪಂದ್ಯ ರದ್ದಾದರೆ, ಅವರಿಗೆ ತಲಾ ಒಂದು ಅಂಕ ನೀಡಲಾಗುತ್ತದೆ. ಆಗ ಎರಡೂ ತಂಡಗಳು ತಮ್ಮ ಖಾತೆಯಲ್ಲಿ 5 ಅಂಕಗಳನ್ನು ಹೊಂದಿರುತ್ತವೆ. ಇದರೊಂದಿಗೆ, ಎರಡೂ ತಂಡಗಳು ಸೂಪರ್-8 ಹಂತವನ್ನು ತಲುಪುತ್ತವೆ.

3 ತಂಡಗಳಿಗೆ ಗೇಟ್​ಪಾಸ್​

ಭಾರತ ಮತ್ತು ಪಾಕ್​ ಸೂಪರ್​ 8ರ ಹಂತ ಪ್ರವೇಶಿಸಿದರೆ, ಗ್ರೂಪ್ ಎ ಯಲ್ಲಿ ಉಳಿದಿರುವ ಮೂರು ತಂಡಗಳಾದ ಯುಎಸ್ಎ, ನೆದರ್ಲೆಂಡ್ಸ್​ ಮತ್ತು ನಮೀಬಿಯಾ ಪಂದ್ಯಾವಳಿಯಿಂದ ಹೊರಗುಳಿಯುತ್ತವೆ. ಏಕೆಂದರೆ, ಈ ಮೂರು ತಂಡಗಳು ಲೀಗ್ ಹಂತದಲ್ಲಿ ತಮ್ಮ ಕೊನೆಯ ಪಂದ್ಯಗಳನ್ನು ಗೆದ್ದರು ಕೂಡ ಅಂಕಗಳಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಮೀರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಟಿ20 ವಿಶ್ವಕಪ್​ ಟೂರ್ನಿಯಿಂದ ಹೊರ ನಡೆಯುತ್ತವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net