ವಾರ್ಷಿಕ ಐಸಿಸಿ ರ‍್ಯಾಂಕಿಂಗ್ ಪ್ರಕಟ: ಅಗ್ರಸ್ಥಾನ ಕಾಯ್ದುಕೊಂಡ ಭಾರತ, ಪಾಕ್​ ಹಿಂದಿಕ್ಕಿ 4ನೇ ಸ್ಥಾನಕ್ಕೆ ಜಿಗಿದ ಸೌತ್ ಆಫ್ರಿಕಾ! ICC New ODI Rankings

ವಾರ್ಷಿಕ ಐಸಿಸಿ ರ‍್ಯಾಂಕಿಂಗ್ ಪ್ರಕಟ: ಅಗ್ರಸ್ಥಾನ ಕಾಯ್ದುಕೊಂಡ ಭಾರತ, ಪಾಕ್​ ಹಿಂದಿಕ್ಕಿ 4ನೇ ಸ್ಥಾನಕ್ಕೆ ಜಿಗಿದ ಸೌತ್ ಆಫ್ರಿಕಾ! ICC New ODI Rankings
ವಾರ್ಷಿಕ ಐಸಿಸಿ ರ‍್ಯಾಂಕಿಂಗ್ ಪ್ರಕಟ: ಅಗ್ರಸ್ಥಾನ ಕಾಯ್ದುಕೊಂಡ ಭಾರತ, ಪಾಕ್​ ಹಿಂದಿಕ್ಕಿ 4ನೇ ಸ್ಥಾನಕ್ಕೆ ಜಿಗಿದ ಸೌತ್ ಆಫ್ರಿಕಾ! ICC New ODI Rankings
Published on

ಪ್ರಮುಖ ಮುಖ್ಯಾಂಶಗಳು

  • ವಾರ್ಷಿಕ ಏಕದಿನ ರ‍್ಯಾಂಕಿಂಗ್​ ಪ್ರಕಟಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ
  • ಏಕದಿನ ರ‍್ಯಾಂಕಿಂಗ್​ನಲ್ಲಿ ತನ್ನ ನಂ.1 ಸ್ಥಾನವನ್ನು ಕಾಯ್ದುಕೊಂಡ ಭಾರತ ಪುರುಷರ ತಂಡ
  • 113 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ 2ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ ತಂಡ
  • ಮೂರನೇ ಸ್ಥಾನದಲ್ಲೇ ಮುಂದುವರಿದ ಹಾಲಿ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ
ICC New ODI Rankings : ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ICC) ಇಂದು ಪ್ರಕಟಿಸಿರುವ ವಾರ್ಷಿಕ ಏಕದಿನ ರ‍್ಯಾಂಕಿಂಗ್​ನಲ್ಲಿ ಭಾರತ ಪುರುಷರ ತಂಡ ತನ್ನ ನಂ.1 ಸ್ಥಾನವನ್ನು ಕಾಯ್ದುಕೊಂಡಿದೆ. ಆದಾಗ್ಯೂ, ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತ ಹೊಂದಿದ್ದ ಮುನ್ನಡೆಯ ಅಂಕ 8 ರಿಂದ 5 ಅಂಕಗಳಿಗೆ ಕುಸಿದಿದ್ದು, ಭಾರತದ ರೇಟಿಂಗ್ ಪಾಯಿಂಟ್ಸ್ 119 ರಿಂದ 118ಕ್ಕೆ ಇಳಿಕೆಯಾಗಿದೆ. ಇತ್ತ 2 ಅಂಕಗಳನ್ನು ಗಳಿಸಿರುವ ನ್ಯೂಜಿಲೆಂಡ್ 113 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ತೀವ್ರ ಪೈಪೋಟಿ ನೀಡುತ್ತಿದೆ.
ಇನ್ನುಳಿದಂತೆ ಹಾಲಿ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ 109 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲೇ ಮುಂದುವರಿದಿದ್ದು, ಟಾಪ್-10ರಲ್ಲಿ ಆಗಿರುವ ಏಕೈಕ ಬದಲಾವಣೆಯೆಂದರೆ ದಕ್ಷಿಣ ಆಫ್ರಿಕಾ (102 ಅಂಕ) ತಂಡ ಪಾಕಿಸ್ತಾನವನ್ನು (98 ಅಂಕ) ಹಿಂದಿಕ್ಕಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.
ಇನ್ನು ರ‍್ಯಾಂಕಿಂಗ್​ ಪಟ್ಟಿಯ ಕೆಳಭಾಗದಲ್ಲಿ, 9ನೇ ಸ್ಥಾನದಲ್ಲಿರುವ ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಅಂತರವು ಗಣನೀಯವಾಗಿ ಹೆಚ್ಚಾಗಿದೆ. ಉಭಯ ತಂಡಗಳ ನಡುವಿನ ವ್ಯತ್ಯಾಸವೀಗ 10 ಅಂಕಗಳಿಗೆ ತಲುಪಿದೆ. ಇನ್ನುಳಿದಂತೆ ಟಾಪ್-10 ರಿಂದ ಹೊರಗಿರುವ ತಂಡಗಳ ಸ್ಥಾನಗಳಲ್ಲೂ ಕೆಲವು ಅದಲುಬದಲುಗಳಾಗಿದ್ದು, ಜಿಂಬಾಬ್ವೆಯನ್ನು ಹಿಂದಿಕ್ಕಿದ ಐರ್ಲೆಂಡ್ 11ನೇ ಸ್ಥಾನಕ್ಕೆ ಜಿಗಿದಿದೆ. ಹಾಗೆಯೇ ಸ್ಕಾಟ್‌ಲ್ಯಾಂಡ್ ತಂಡವನ್ನು ಹಿಂದಿಕ್ಕಿ ಯುಎಸ್‌ಎ (USA) 13ನೇ ಸ್ಥಾನಕ್ಕೆ ಹಾಗೂ ಕೆನಡಾವನ್ನು ಹಿಂದಿಕ್ಕಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) 19ನೇ ಸ್ಥಾನಕ್ಕೆ ಏರಿಕೆ ಕಂಡಿವೆ.
ಇತ್ತೀಚೆಗೆ ಅಪ್​ಡೇಟ್​ ಮಾಡಲಾದ ಇತರ ಐಸಿಸಿ ರ‍್ಯಾಂಕಿಂಗ್​ಗಳಲ್ಲಿ ಭಾರತ ತಂಡವು ಪುರುಷರ ಟಿ20 ರ‍್ಯಾಂಕಿಂಗ್​ನಲ್ಲೂ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಇನ್ನುಳಿದಂತೆ ಆಸ್ಟ್ರೇಲಿಯಾ ತಂಡವು ಪುರುಷರ ಟೆಸ್ಟ್ ರ‍್ಯಾಂಕಿಂಗ್​ನಲ್ಲಿ ನಂ.1 ಸ್ಥಾನ ಹೊಂದಿರುವ ಜೊತೆಗೆ, ಮಹಿಳಾ ವಿಭಾಗದ ಏಕದಿನ ಮತ್ತು ಟಿ20 ಎರಡೂ ಮಾದರಿಗಳ ರ‍್ಯಾಂಕಿಂಗ್​ನಲ್ಲೂ ಮೊದಲ ಸ್ಥಾನವನ್ನು ಅಲಂಕರಿಸಿದೆ. ಇಂತಹ ಸಂದರ್ಭದಲ್ಲೇ ಭಾರತ ತಂಡವು ಶನಿವಾರದಿಂದ ಆರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ದ್ವಿಪಕ್ಷೀಯ ಏಕದಿನ ಸರಣಿಗೆ ಆತಿಥ್ಯ ವಹಿಸಲು ಸಜ್ಜಾಗಿದೆ.
ಆದರೆ, ಗಾಯದ ಸಮಸ್ಯೆಯು ಆತಿಥೇಯ ಭಾರತ ತಂಡಕ್ಕೆ ದೊಡ್ಡ ಹಿನ್ನಡೆ ತಂದಿದೆ. ಆರಂಭದಲ್ಲಿ ತಂಡಕ್ಕೆ ಆಯ್ಕೆಯಾಗಿದ್ದ ಬ್ಯಾಟಿಂಗ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಅವರು ಹ್ಯಾಮ್‌ಸ್ಟ್ರಿಂಗ್ ಗಾಯದ ಸಮಸ್ಯೆಯಿಂದಾಗಿ ಇಡೀ ಸರಣಿಯಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ ಅವರನ್ನು ಬದಲೀ ಆಟಗಾರನಾಗಿ ಸೇರಿಸಿಕೊಳ್ಳಲಾಗಿದೆ. ಇದರ ಬೆನ್ನಲ್ಲೇ, ನಾಯಕ ಶುಭಮಾನ್ ಗಿಲ್ ನೇತೃತ್ವದ ಭಾರತ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ಕ್ವಾಡ್ರಿಸೆಪ್ಸ್ ಸ್ನಾಯು ಸೆಳೆತದಿಂದ ಬಳಲುತ್ತಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ವೈದ್ಯಕೀಯ ತಂಡ ವಿಶ್ರಾಂತಿ ಸೂಚಿಸಿರುವುದರಿಂದ ಅವರು ಕೂಡ ಈ ಮೂರೂ ಪಂದ್ಯಗಳ ಸರಣಿಗೆ ಲಭ್ಯವಿರುವುದಿಲ್ಲ ಎನ್ನಲಾಗಿದೆ. 2025ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಪಾಂಡ್ಯ ಅವರ ಭಾರತ ಪರ ಕೊನೆಯ ಏಕದಿನ ಪಂದ್ಯವಾಗಿತ್ತು.

ಭಾರತ ಏಕದಿನ ತಂಡ

ಶುಭಮಾನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ (ಉಪನಾಯಕ), ಕೆ.ಎಲ್.ರಾಹುಲ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಷ್‌ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್ ಹರ್ಷ್​ ದುಬೆ ಹಾಗೂ ಹಾರ್ದಿಕ್​ ಪಾಂಡ್ಯ (ಫಿಟ್​ನೆಸ್​ ಸಮಸ್ಯೆ ಇದೆ), (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net