ಕಡೆಗೂ ಬಿಸಿಬಿಗೆ ತಕ್ಕ ಪಾಠ ಕಲಿಸಿದ ಐಸಿಸಿ! ಟಿ20 ವಿಶ್ವಕಪ್​​ನಿಂದ ಬಾಂಗ್ಲಾದೇಶ ಕಿಕ್​ಔಟ್​, ಈ ತಂಡಕ್ಕೆ ಸ್ಥಾನ ಫಿಕ್ಸ್​

ಬಾಂಗ್ಲಾ ಕ್ರಿಕೆಟ್​ ಟಿ20 ವಿಶ್ವಕಪ್​ ಟೂರ್ನಿಯಿಂದ ಹೊರಗೆ
ಬಾಂಗ್ಲಾ ಕ್ರಿಕೆಟ್​ ಟಿ20 ವಿಶ್ವಕಪ್​ ಟೂರ್ನಿಯಿಂದ ಹೊರಗೆ
Published on

ಪ್ರಮುಖ ಮುಖ್ಯಾಂಶಗಳು

  • ಐಸಿಸಿ ತಮ್ಮ ಮನವಿ ತಿರಸ್ಕರಿಸಿದ್ದಕ್ಕೆ ಬಿಸಿಬಿ ಕಟು ನಿರ್ಧಾರ
  • ನಾವು ಟೂರ್ನಿಯಲ್ಲಿ ಆಡುವುದಿಲ್ಲ ಎಂದ ಬಾಂಗ್ಲಾಗೆ ಐಸಿಸಿ ಶಾಕ್​
  • ಅವಕಾಶ ನೀಡದೆ ಟೂರ್ನಿಯಿಂದ ಕಿತ್ತುಬಿಸಾಡಿ, ಸ್ಕಾಟ್​ಲ್ಯಾಂಡ್​ಗೆ ಅವಕಾಶ
ನವದೆಹಲಿ: ಭಾರತದಲ್ಲಿ ನಮ್ಮ ಆಟಗಾರರಿಗೆ ಸುರಕ್ಷತೆ ಇಲ್ಲ. ಹೀಗಾಗಿ, ಟಿ20 ವಿಶ್ವಕಪ್​ನಲ್ಲಿ ನಮ್ಮ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿಸಬೇಕು ಎಂದು ಬಿಸಿಬಿ ಐಸಿಸಿಗೆ ಪತ್ರದ ಮುಖೇನ ಮನವಿ ಮಾಡಿಕೊಂಡಿತ್ತು. ಇದಕ್ಕೆ ಸ್ಪಂದಿಸದ ಐಸಿಸಿ, ತಿರಸ್ಕರಿಸುವ ಮೂಲಕ ಅಪಾರ ನಿರೀಕ್ಷೆಯಲ್ಲಿದ್ದ ಬಿಸಿಬಿಗೆ ಭಾರೀ ಮುಖಭಂಗವನ್ನೇ ಉಂಟುಮಾಡಿತು. ಹೀಗಾಗಿಯೇ, ಭಾರತಕ್ಕೆ ನಾವು ಪ್ರವಾಸ ಮಾಡಲ್ಲ. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದ ಬಿಸಿಬಿಯನ್ನು ಕಡೆಗೂ ಐಸಿಸಿ ವಿಶ್ವಕಪ್ ಟೂರ್ನಿಯಿಂದ ಕಿತ್ತುಬಿಸಾಡಿದೆ.

ಕೊಟ್ಟ ಅವಕಾಶ ಕಳೆದುಕೊಂಡ ಬಿಸಿಬಿ

ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಕ್ರೀಡೆಗೂ ತಟ್ಟಿದ್ದು, ಫೆಬ್ರವರಿ 7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ. ಭಾರತಕ್ಕೆ ಪ್ರವಾಸ ಮಾಡೋದಿಲ್ಲ. ಅಲ್ಲಿಗೆ ಬಂದು ನಮ್ಮ ಪಂದ್ಯಗಳನ್ನು ಆಡುವುದು ಕಷ್ಟಸಾಧ್ಯ. ಭಾರತದಲ್ಲಿ ನಮ್ಮ ಆಟಗಾರರಿಗೆ ಭದ್ರತೆ ಇಲ್ಲ. ಈ ಎಲ್ಲ ಕಾರಣಗಳಿಂದ ನಾವು ಟೂರ್ನಿಯಿಂದ ಹೊರಗುಳಿಯುತ್ತೇವೆ ಎಂದು ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ಐಸಿಸಿಗೆ ತಿಳಿಸಿತು. ತಮ್ಮ ಮಧ್ಯಂತರ ಸರ್ಕಾರದ ಮಾತಿನಂತೆ ಹೋರಾಟ ಮುಂದುವರಿಸುವುದಾಗಿ ಹೇಳಿದ ಬಾಂಗ್ಲಾವನ್ನು ಕಡೆಗೂ ಐಸಿಸಿ ಸ್ಕಾಟ್​ಲ್ಯಾಂಡ್​ ಆಡಿಸುವ ಮೂಲಕ ಟಿ20 ವಿಶ್ವಕಪ್​ ಟೂರ್ನಿಯಿಂದ ಹೊರಗಟ್ಟಿದೆ ಎಂದು ಕ್ರಿಕ್​ ಬಜ್​ ವರದಿ ಉಲ್ಲೇಖಿಸಿದೆ.

240 ಕೋಟಿ ರೂ.ಗೂ ಅಧಿಕ ನಷ್ಟ!

ಮಧ್ಯಂತರ ಸರ್ಕಾರದ ನಿರ್ಧಾರವು ಇದೀಗ ಬಾಂಗ್ಲಾದೇಶ ಕ್ರಿಕೆಟ್‌ಗೆ ಆರ್ಥಿಕವಾಗಿ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ. ಕೊನೆಯದಾಗಿ ಒಮ್ಮೆ ತಮ್ಮ ನಿರ್ಧಾರದಲ್ಲಿ ಬದಲಾವಣೆ ತರಲು ಬಾಂಗ್ಲಾದೇಶಕ್ಕೆ ಅವಕಾಶವಿತ್ತು. ಆದರೆ, ಅದನ್ನೂ ಕಳೆದುಕೊಂಡ ಬಾಂಗ್ಲಾ ಐಸಿಸಿ ಶಾಕ್​ ನೀಡಿದೆ. ಟಿ20 ವಿಶ್ವಕಪ್‌ನಿಂದ ಹಿಂದೆ ಸರಿದಿರುವ ಬಾಂಗ್ಲಾಗೆ ಈ ನಿರ್ಧಾರದಿಂದ ಐಸಿಸಿಯಿಂದ ವಾರ್ಷಿಕವಾಗಿ ಪಡೆಯುವ ಸುಮಾರು 27 ಮಿಲಿಯನ್ ಡಾಲರ್ (ಸುಮಾರು 240 ಕೋಟಿ ರೂ.) ಕಳೆದುಕೊಳ್ಳುವುದು ಖಚಿತ ಎನ್ನಲಾಗಿದೆ.
ಇದಲ್ಲದೆ, ಪ್ರಸಾರ ಹಕ್ಕುಗಳು, ಪ್ರಾಯೋಜಕತ್ವಗಳು ಮತ್ತು ಇತರ ವಾಣಿಜ್ಯ ಆದಾಯವನ್ನು ಸೇರಿಸಿದರೆ, ಇಡೀ ಹಣಕಾಸು ವರ್ಷದಲ್ಲಿ, ಈ ನಷ್ಟವು ಶೇ.60 ಅಥವಾ ಅದಕ್ಕಿಂತ ಹೆಚ್ಚು ಇರಬಹುದು ಎಂದು ಅಂದಾಜಿಸಲಾಗಿದೆ. ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳ ಮೇಲೆ ಇನ್ನಷ್ಟು ಪರಿಣಾಮ ಬೀರುವ ಎಲ್ಲ ಸಾಧ್ಯತೆಗಳಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net