ಪಾಕ್​ ಸೊಕ್ಕು ಮುರಿದ ಐಸಿಸಿ... ಫೆ.15ರಂದು ನಡೆಯಲ್ಲ ಇಂಡೋ-ಪಾಕ್ ಹೈವೋಲ್ಟೇಜ್​ ಪಂದ್ಯ! | IND vs PAK

ಪಾಕಿಸ್ತಾನ ತಂಡ
ಪಾಕಿಸ್ತಾನ ತಂಡ
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಆಡಲ್ಲ ಎಂದಿರುವ ಪಾಕಿಸ್ತಾನ
  • ಮೂರು ಷರತ್ತುಗಳನ್ನು ಹಾಕಿದ್ದ ಪಿಸಿಬಿಗೆ ಭಾರೀ ಮುಖಭಂಗ
  • ಮೂರು ಮತ್ತೊಂದು ಡಿಮಾಂಡ್​ಗಳನ್ನು ತಿರಸ್ಕರಿಸಿದ ಐಸಿಸಿ
ನವದೆಹಲಿ: ಫೆ.7ರಿಂದ ಆರಂಭವಾಗಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲೇ ಪಾಕಿಸ್ತಾನ (Pakistan) ಹೀನಾಯ ಸೋಲಿನ ಮೂಲಕ ಭಾರೀ ಮುಖಭಂಗವನ್ನೇ ಅನುಭವಿಸಿತು. ಈ ಮಧ್ಯೆ, ಮೆಗಾ ಟೂರ್ನಮೆಂಟ್​ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಆಡೋದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ) ಮಾಡುತ್ತಿರುವ ಹೈಡ್ರಾಮಾಕ್ಕೆ ಕಡೆಗೂ ಐಸಿಸಿ ಫುಲ್​​ಸ್ಟಾಪ್​ ಹಾಕಿದೆ.
ಫೆ.15ರಂದು ಶ್ರೀಲಂಕಾದ ಕೊಲೊಂಬಾ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ವಿರುದ್ಧದ ಪಂದ್ಯವನ್ನು ನಾವು ಆಡೋದಿಲ್ಲ, ಬದಲಿಗೆ ಬಹಿಷ್ಕರಿಸುತ್ತಿದ್ದೇವೆ ಎಂದಿರುವ ಪಿಸಿಬಿ ನಾಟಕವಂತು ಕ್ರಿಕೆಟ್​ ಪ್ರಿಯರ ಕೆಂಗಣ್ಣಿಗೆ ಗುರಿಯಾಯಿತು. ಬಿಸಿಸಿಐ ಮತ್ತು ಐಸಿಸಿಗೂ ಈ ವಿಚಾರದಲ್ಲಿ ಸಾಕಾಗಿ ಹೋಗಿತ್ತು. ಇಲ್ಲಿಗೆ ಸುಮ್ಮನಾಗದ ಪಾಕ್​, ಮತ್ತೊಮ್ಮೆ ಐಸಿಸಿಗೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿತ್ತು. ಪೂರೈಕೆ ಮಾಡಿದ್ದೇ ಆದಲ್ಲಿ, ಭಾರತ ವಿರುದ್ಧ ಆಡುವುದಾಗಿ ಹೇಳಿತ್ತು. ಆದರೆ, ಇದ್ಯಾವುದಕ್ಕೂ ಮಣಿಯದ ಐಸಿಸಿ, ಮತ್ತೊಮ್ಮೆ ಪಿಸಿಬಿ ಡಿಮಾಂಡ್​ಗಳನ್ನು ತಿರಸ್ಕರಿಸುವ ಮೂಲಕ ಭಾರೀ ಮುಖಭಂಗವನ್ನೇ ತಂದೊಡ್ಡಿದೆ.

ಏನದು 3 ಷರತ್ತುಗಳು?

ಮೊದಲನೆಯದು, ಟಿ20 ವಿಶ್ವಕಪ್ 2026ರ ಟೂರ್ನಮೆಂಟ್‌ನ ಭಾಗವಾಗಿ ಎಲ್ಲ ತಂಡಗಳಿಗಿಂತ ಹೆಚ್ಚಿನ ಆದಾಯದ ಪಾಲನ್ನು ತಮಗೆ ನೀಡಬೇಕೆಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಕೇಳಿತು. ಎರಡನೇಯದಾಗಿ ಭಾರತದೊಂದಿಗೆ ಪಂದ್ಯ ನಡೆದರೆ, ಕಡ್ಡಾಯವಾಗಿ ಹ್ಯಾಂಡ್‌ಶೇಕ್ ಇರಬೇಕು ಎಂದಿದೆ. ಈ ಹಿಂದೆ, ಏಷ್ಯಾ ಕಪ್ 2025ರ ಟೂರ್ನಮೆಂಟ್ ಸಮಯದಲ್ಲಿ, ಟೀಮ್ ಇಂಡಿಯಾ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ಮಾಡುತ್ತಿರಲಿಲ್ಲ. ಅಂತಹ ದೃಶ್ಯಗಳು ಈಗ ಪುನರಾವರ್ತನೆಯಾಗಬಾರದು ಎಂದಿದೆ.
ಮೂರನೆಯದು ತುಂಬಾ ವಿಚಿತ್ರವಾಗಿದೆ. ಅದೇನೆಂದರೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ವಾತಾವರಣ ಯಾವಾಗಲೂ ಇದ್ದೇ ಇರುತ್ತದೆ. ಅದನ್ನು ಬದಿಗಿಟ್ಟು, ದ್ವಿಪಕ್ಷೀಯ ಸರಣಿ ನಡೆಸಲು ಬಿಸಿಸಿಐ ಅನ್ನು ಮನವೊಲಿಸಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿ ಬಳಿ ಬೇಡಿಕೆ ಇಟ್ಟಿತ್ತು. ಆದರೀಗ, ಬಿಸಿಬಿ ಮತ್ತು ಪಿಸಿಬಿ ಆಸೆಗೆ ಐಸಿಸಿ ತಣ್ಣೀರೆರಚಿದೆ. 

ಬಿಸಿಬಿ ಪ್ರತ್ಯೇಕ ಷರತ್ತು!

ಭಾರತದೊಂದಿಗೆ ದ್ವಿಪಕ್ಷೀಯ ಸರಣಿಯನ್ನು ಆಡುವುದರ ಜೊತೆಗೆ, ಪಿಸಿಬಿ ಮತ್ತು ಬಿಸಿಬಿ ಜಂಟಿಯಾಗಿ ಭಾರತ-ಪಾಕಿಸ್ತಾನ-ಬಾಂಗ್ಲಾದೇಶ ನಡುವೆ ತ್ರಿಕೋನ ಸರಣಿಯನ್ನು ನಡೆಸುವಂತೆ ಕೋರಿತ್ತು. ಆದಾಗ್ಯೂ, ಐಸಿಸಿ ಈ ಪ್ರಸ್ತಾಪಗಳನ್ನು ಬಿಲ್ಕುಲ್​ ಒಪ್ಪಿಕೊಂಡಿಲ್ಲ. ದ್ವಿಪಕ್ಷೀಯ ಸರಣಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವು ಆಯಾ ದೇಶಗಳ ಮಂಡಳಿಗಳು ಮತ್ತು ಸರ್ಕಾರಗಳಿಗೆ ಸೇರಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ ಎಂದು ವರದಿಗಳು ತಿಳಿಸಿವೆ. 

ಇಂಡೋ-ಪಾಕ್​ ಡೌಟ್​!

ಇದನ್ನೆಲ್ಲ ನೋಡಿದರೆ, ಫೆ.15ರಂದು ಕೊಲಂಬೊದಲ್ಲಿ ಫಿಕ್ಸ್ ಆಗಿರುವ ಭಾರತ ಮತ್ತು ಪಾಕ್​ ನಡುವಿನ ಗ್ರೂಪ್​ ಸ್ಟೇಜ್ ಪಂದ್ಯ ನಡೆಯುವುದು ಬಹುತೇಕ ಅನುಮಾನವೇ. ಈಗಾಗಲೇ ತಾವು ಟೀಮ್ ಇಂಡಿಯಾ ವಿರುದ್ಧ ಆಡೋದಿಲ್ಲ ಎಂದು ಹೇಳಿರುವ ಪಿಸಿಬಿ, ತನ್ನ ನಿರ್ಧಾರಕ್ಕೆ ಬದ್ಧವಾಗಿ ಉಳಿಯುವ ಸಾಧ್ಯತೆಗಳೇ ಹೆಚ್ಚು. ಈ ವಿವಾದ ಯಾವಾಗ ಕೊನೆಗೊಳ್ಳುತ್ತೆ? ಎಲ್ಲಿಗೆ ಹೋಗಿ ತಲುಪುತ್ತೆ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net