ಈ ಬಾರಿ ಟೀಮ್​ ಇಂಡಿಯಾ ಏಕದಿನ ವಿಶ್ವಕಪ್​ ಗೆಲ್ಲಬೇಕಾದ್ರೆ ಈ ಇಬ್ಬರು ಆಟಗಾರರು ತುಂಬಾನೇ ಮುಖ್ಯವೆಂದ ಜಾಂಟಿ ರೋಡ್ಸ್​! World Cup 2027

ಈ ಬಾರಿ ಟೀಮ್​ ಇಂಡಿಯಾ ಏಕದಿನ ವಿಶ್ವಕಪ್​ ಗೆಲ್ಲಬೇಕಾದ್ರೆ ಈ ಇಬ್ಬರು ಆಟಗಾರರು ತುಂಬಾನೇ ಮುಖ್ಯವೆಂದ ಜಾಂಟಿ ರೋಡ್ಸ್​! World Cup 2027
ಈ ಬಾರಿ ಟೀಮ್​ ಇಂಡಿಯಾ ಏಕದಿನ ವಿಶ್ವಕಪ್​ ಗೆಲ್ಲಬೇಕಾದ್ರೆ ಈ ಇಬ್ಬರು ಆಟಗಾರರು ತುಂಬಾನೇ ಮುಖ್ಯವೆಂದ ಜಾಂಟಿ ರೋಡ್ಸ್​! World Cup 2027
Published on: 

ಪ್ರಮುಖ ಮುಖ್ಯಾಂಶಗಳು

  • 2027ರ ವಿಶ್ವಕಪ್ ಗೆಲುವಿಗೆ ರೋಹಿತ್ ಕೊಹ್ಲಿ ಅನುಭವವೇ ಅತಿ ದೊಡ್ಡ ಬಲ
  • ದೊಡ್ಡ ಟೂರ್ನಿಗಳಲ್ಲಿ ಆಡಲು ಆಟಗಾರರಿಗೆ ಮಾನಸಿಕ ದೃಢತೆ ಅತ್ಯಗತ್ಯ
  • ರನ್ ಚೇಸ್ ಮಾಡುವಾಗ ವಿರಾಟ್ ಕೊಹ್ಲಿ ವಿಶ್ವದಲ್ಲೇ ಅತ್ಯುತ್ತಮ ಆಟಗಾರ
  • ಹಿರಿಯರ ಸಲಹೆ ಸ್ವೀಕರಿಸುತ್ತಲೇ ನಾಯಕತ್ವ ನಿರ್ವಹಿಸಬೇಕು ಗಿಲ್
  • ದಕ್ಷಿಣ ಆಫ್ರಿಕಾದ ಪಿಚ್‌ಗಳು ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಅನುಕೂಲ
ನವದೆಹಲಿ: ಕ್ರಿಕೆಟ್ ಜಗತ್ತಿನ ಕಣ್ಣು ಈಗ 2027ರ ಏಕದಿನ ವಿಶ್ವಕಪ್ ( World Cup 2027 ) ಮೇಲೆ ನೆಟ್ಟಿದೆ. 2023ರ ಫೈನಲ್ ಸೋಲಿನ ನೋವನ್ನು ಮರೆತು ಈ ಬಾರಿ ಟ್ರೋಫಿ ಜಯಿಸುವ ಸಿದ್ಧತೆಯಲ್ಲಿರುವ ಟೀಮ್ ಇಂಡಿಯಾಗೆ ದಕ್ಷಿಣ ಆಫ್ರಿಕಾದ ದಿಗ್ಗಜ ಜಾಂಟಿ ರೋಡ್ಸ್ ಕೆಲವು ಅಮೂಲ್ಯ ಸಲಹೆಗಳನ್ನು ನೀಡಿದ್ದು, ರೋಹಿತ್ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಅನುಭವವೇ ತಂಡದ ಅತಿ ದೊಡ್ಡ ಬಲ ಎಂದು ಬಣ್ಣಿಸಿದ್ದಾರೆ.
ಕೇವಲ ಪ್ರತಿಭೆ ಮತ್ತು ಉತ್ತಮ ಫಾರ್ಮ್, ವಿಶ್ವಕಪ್‌ನಂತಹ ಮಹಾಸಂಗ್ರಾಮದಲ್ಲಿ ಗೆಲುವನ್ನು ತಂದುಕೊಡಲಾರದು ಎಂದು ಜಾಂಟಿ ರೋಡ್ಸ್ ಸ್ಪಷ್ಟಪಡಿಸಿದ್ದಾರೆ. ನಾಲ್ಕು ವಿಶ್ವಕಪ್‌ಗಳನ್ನು ಆಡಿದ ಅನುಭವವಿರುವ ರೋಡ್ಸ್ ಪ್ರಕಾರ, ಇಂತಹ ದೊಡ್ಡ ಟೂರ್ನಿಗಳಲ್ಲಿ ಎದುರಾಗುವ ತೀವ್ರ ಒತ್ತಡವನ್ನು ಮೆಟ್ಟಿ ನಿಲ್ಲಲು ಅಗಾಧವಾದ ಮಾನಸಿಕ ದೃಢತೆ ಬೇಕು. ಆಟಗಾರರು ದೈಹಿಕವಾಗಿ ಎಷ್ಟೇ ಫಿಟ್ ಆಗಿದ್ದರೂ, ಮೈದಾನದ ಒತ್ತಡವನ್ನು ನಿಯಂತ್ರಿಸುವ ಮಾನಸಿಕ ಸ್ಥೈರ್ಯವೇ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಂಡದಲ್ಲಿ ರೋಹಿತ್ ಶರ್ಮಾರಂತಹ ಹಿರಿಯ ಮತ್ತು ಅನುಭವಿ ಆಟಗಾರ ಇರುವುದು ಟೀಮ್ ಇಂಡಿಯಾಗೆ ನೈತಿಕ ಸ್ಥೈರ್ಯವನ್ನು ತುಂಬಲಿದೆ ಎಂದು ರೋಡ್ಸ್ ಬಣ್ಣಿಸಿದ್ದಾರೆ. ಒತ್ತಡದ ಸನ್ನಿವೇಶಗಳಲ್ಲಿ ತಂಡವನ್ನು ಮುನ್ನಡೆಸಲು ಹಾಗೂ ಕಿರಿಯ ಆಟಗಾರರಿಗೆ ಮಾರ್ಗದರ್ಶನ ನೀಡಲು ರೋಹಿತ್ ಅವರ ಸುದೀರ್ಘ ಕ್ರಿಕೆಟ್ ಅನುಭವವು ನಿರ್ಣಾಯಕ ಪಾತ್ರ ವಹಿಸಲಿದೆ. ರೋಹಿತ್ ಅವರ ಉಪಸ್ಥಿತಿಯೇ ಎದುರಾಳಿ ಬೌಲಿಂಗ್ ಪಡೆಗೆ ಒಂದು ರೀತಿಯ ನಡುಕ ಹುಟ್ಟಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ ಜಾಂಟಿ ರೋಡ್ಸ್​.
ವಿರಾಟ್ ಕೊಹ್ಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಜಾಂಟಿ ರೋಡ್ಸ್, ಆಸ್ಟ್ರೇಲಿಯಾದ ಆಟಗಾರರಂತೆ ಕೊಹ್ಲಿಗೂ ಸಹ ಪಂದ್ಯವನ್ನು ಗೆಲ್ಲಲೇಬೇಕೆಂಬ ತೀವ್ರ ಹಸಿವು ಮತ್ತು ಹಠವಿದೆ ಎಂದಿದ್ದಾರೆ. ವಿಶೇಷವಾಗಿ ರನ್ ಚೇಸ್ ಮಾಡುವಾಗ ಕೊಹ್ಲಿ ವಿಶ್ವದಲ್ಲೇ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮುತ್ತಾರೆ. ಮೈದಾನದಲ್ಲಿ ಅವರು ತೋರುವ ಆಕ್ರಮಣಕಾರಿ ಮನೋಭಾವ ಮತ್ತು ಸ್ಪರ್ಧಾತ್ಮಕ ಗುಣವೇ ಅವರನ್ನು ಇತರರಿಗಿಂತ ಭಿನ್ನವಾಗಿರಿಸುತ್ತದೆ ಎಂದು ರೋಡ್ಸ್ ಅಭಿಪ್ರಾಯಪಟ್ಟಿದ್ದಾರೆ.
ಯುವ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕುರಿತು ಪ್ರಮುಖ ಸಲಹೆ ನೀಡಿರುವ ರೋಡ್ಸ್, ನಾಯಕನಾದ ಮಾತ್ರಕ್ಕೆ ಎಲ್ಲವನ್ನೂ ತಾನೊಬ್ಬನೇ ಮಾಡಬೇಕಿಲ್ಲ ಎಂದಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸುವ ಸ್ವಾತಂತ್ರ್ಯ ಗಿಲ್‌ಗೆ ಇರಬೇಕು ಎಂದು ಸೂಚಿಸಿದ್ದಾರೆ. ಆದರೆ, ಅಂತಿಮವಾಗಿ ಸ್ವತಃ ತೀರ್ಮಾನ ಕೈಗೊಳ್ಳುವುದೇ ನಾಯಕತ್ವದ ಅತ್ಯಂತ ಕಠಿಣ ಜವಾಬ್ದಾರಿ ಎಂಬುದನ್ನು ಅವರು ನೆನಪಿಸಿದ್ದಾರೆ.
2027ರ ಏಕದಿನ ವಿಶ್ವಕಪ್ ಅನ್ನು ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆ ಜಂಟಿಯಾಗಿ ಆತಿಥ್ಯ ವಹಿಸಲಿವೆ. ಈ ಪರಿಸ್ಥಿತಿಗಳು ಭಾರತೀಯ ತಂಡದ ಪರವಾಗಿರುವ ಸಾಧ್ಯತೆಯಿದೆ ಎಂದು ರೋಡ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾದ ಪಿಚ್‌ಗಳು ಬ್ಯಾಟಿಂಗ್‌ಗೆ ಅತ್ಯಂತ ಅನುಕೂಲಕರವಾಗಿವೆ ಮತ್ತು ಬ್ಯಾಟ್‌ಗೆ ಚೆಂಡು ಸರಾಗವಾಗಿ ಬರಲಿದೆ. ಇದು ಭಾರತದ ರನ್ ಮೆಷಿನ್ ಬ್ಯಾಟ್ಸ್‌ಮನ್‌ಗಳಿಗೆ ಅತ್ಯಂತ ಸಹಕಾರಿಯಾಗಲಿದೆ ಎಂದು ರೋಡ್ಸ್​ ಹೇಳಿದ್ದಾರೆ.
ಸದ್ಯ ಭಾರತೀಯ ಬ್ಯಾಟ್ಸ್‌ಮನ್‌ಗಳು ಸ್ಕೂಪ್ (Scoop) ಮತ್ತು ರಾಂಪ್ (Ramp) ನಂತಹ ಆಧುನಿಕ ಕ್ರಿಕೆಟ್ ಶಾಟ್‌ಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಆಡುತ್ತಿದ್ದಾರೆ. ಬ್ಯಾಟಿಂಗ್ ಶೈಲಿಯಲ್ಲಿನ ಈ ಹೊಸತನವು ಆಫ್ರಿಕನ್ ಪಿಚ್‌ಗಳಲ್ಲಿ ಟೀಮ್ ಇಂಡಿಯಾಗೆ ಮಹತ್ವದ ಲಾಭವನ್ನು ತಂದುಕೊಡಲಿದೆ. ಒಟ್ಟಾರೆಯಾಗಿ, ರೋಹಿತ್ ಅನುಭವ, ಆಟದ ಮೇಲಿನ ಕೊಹ್ಲಿ ಹಸಿವು , ಗಿಲ್ ನಾಯಕತ್ವ ಮತ್ತು ಮಾಡರ್ನ್ ಬ್ಯಾಟಿಂಗ್ ಶೈಲಿಯ ಸಂಯೋಜನೆಯೇ 2027ರ ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ಪ್ರಮುಖ ಸೂತ್ರವಾಗಲಿದೆ ಎಂದು ರೋಡ್ಸ್​ ಅಭಿಪ್ರಾಯಪಟ್ಟಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net