ವೈಭವ್ ಸೂರ್ಯವಂಶಿಯನ್ನು ಸುಲಭವಾಗಿ ಔಟ್ ಮಾಡಬಲ್ಲೆ: ಅಚ್ಚರಿ ಹೇಳಿಕೆ ನೀಡಿದ ಎಸ್. ಶ್ರೀಶಾಂತ್! Vaibhav Sooryavanshi

ವೈಭವ್ ಸೂರ್ಯವಂಶಿಯನ್ನು ಸುಲಭವಾಗಿ ಔಟ್ ಮಾಡಬಲ್ಲೆ: ಅಚ್ಚರಿ ಹೇಳಿಕೆ ನೀಡಿದ ಎಸ್. ಶ್ರೀಶಾಂತ್! Vaibhav Sooryavanshi
ವೈಭವ್ ಸೂರ್ಯವಂಶಿಯನ್ನು ಸುಲಭವಾಗಿ ಔಟ್ ಮಾಡಬಲ್ಲೆ: ಅಚ್ಚರಿ ಹೇಳಿಕೆ ನೀಡಿದ ಎಸ್. ಶ್ರೀಶಾಂತ್! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಹೇಡನ್ ಅವರನ್ನೇ ಔಟ್ ಮಾಡಿರೋ ನನಗೆ ವೈಭವ್ ಸೂರ್ಯವಂಶಿ ಸವಾಲೇ ಅಲ್ಲ ಎಂದ ಶ್ರೀಶಾಂತ್​
  • ಸಚಿನ್, ಧೋನಿ, ಕೊಹ್ಲಿ ಪರಂಪರೆ ಮುಂದುವರಿಸುವ ತಾಕತ್ತು ವೈಭವ್ ಸೂರ್ಯವಂಶಿಗಿದೆ ಎಂದು ಪ್ರಶಂಸೆ
  • ವಯಸ್ಸಿನ ಕಾರಣ ನೀಡದೆ 16 ವರ್ಷದ ಯುವ ವೇಗಿಗಳಿಗೂ ಟೀಮ್ ಇಂಡಿಯಾದಲ್ಲಿ ಚಾನ್ಸ್ ಕೊಡಿ ಎಂದ ಶ್ರೀಶಾಂತ್​
  • ಉದಯೋನ್ಮುಖ ಬಾಲಪ್ರತಿಭೆ ವೈಭವ್​ರನ್ನು ಮುಕ್ತಕಂಠದಿಂದ ಶ್ಲಾಘಿಸಿದ ಕೇರಳ ಕ್ರಿಕೆಟಿಗ
Vaibhav Sooryavanshi : ಟೀಮ್​ ಇಂಡಿಯಾದ ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿಯನ್ನು ತಾನು ಅತ್ಯಂತ ಸುಲಭವಾಗಿ ಔಟ್ ಮಾಡಬಲ್ಲೆ ಎಂದು ಭಾರತ ತಂಡದ ಮಾಜಿ ವೇಗಿ ಎಸ್. ಶ್ರೀಶಾಂತ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ರಾಷ್ಟ್ರೀಯ ಮಾಧ್ಯಮವೊಂದರ ಜತೆ ಮಾತನಾಡಿದ ಶ್ರೀಶಾಂತ್​, ನಾನು ಮ್ಯಾಥ್ಯೂ ಹೇಡನ್ ಅವರನ್ನೇ ಔಟ್ ಮಾಡಿರುವಾಗ, ವೈಭವ್ ಸೂರ್ಯವಂಶಿ ಅವರ ವಿಕೆಟ್ ಪಡೆಯುವುದು ನನಗೇನು ಕಷ್ಟವಲ್ಲ ಎಂದು ಮಾಜಿ ವೇಗಿ ಎಸ್. ಶ್ರೀಶಾಂತ್ ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಶ್ರೀಶಾಂತ್​, ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಯಾವುದೇ ಭಯವಿಲ್ಲದೆ ಆಡುವಂತಹ ಇಂತಹ ಅದ್ಭುತ ಪ್ರತಿಭೆಯನ್ನು ಭಾರತೀಯ ಕ್ರಿಕೆಟ್‌ಗೆ ನೀಡಿದ ವೈಭವ್ ಅವರ ಕುಟುಂಬದ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರಂತೆ ವೈಭವ್ ಕೂಡ ಅದೇ ನಿರ್ಭಯ ಮನೋಭಾವ ಹೊಂದಿದ್ದು, ಅವರನ್ನು ಶೀಘ್ರವಾಗಿ ಮುಂದಿನ ಹಂತಕ್ಕೆ ತರಬೇಕು ಎಂದು ಶ್ರೀಶಾಂತ್ ಅಭಿಪ್ರಾಯಪಟ್ಟಿದ್ದಾರೆ. ಸಚಿನ್ ಅವರು 15ನೇ ವಯಸ್ಸಿನಲ್ಲಿಯೇ ತಮ್ಮ ಅಪ್ರತಿಮ ಪ್ರತಿಭೆಯನ್ನು ಸಾಬೀತುಪಡಿಸಿ, ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಂಪೂರ್ಣ ಸಜ್ಜಾಗಿದ್ದರು ಎಂಬುದನ್ನು ನೆನಪಿಸಿದ ಅವರು, ಇದೇ ನಿಯಮ ಯುವ ವೇಗದ ಬೌಲರ್‌ಗಳಿಗೂ ಅನ್ವಯಿಸಬೇಕು ಎಂದಿದ್ದಾರೆ. 16-17 ವರ್ಷದ ಯಾವುದೇ ಒಬ್ಬ ಯುವ ವೇಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರೆ, ವಯಸ್ಸಿನ ಕಾರಣ ನೀಡದೆ ತಕ್ಷಣವೇ ಅವರಿಗೆ ಭಾರತ ತಂಡದಲ್ಲಿ ಸ್ಥಾನ ನೀಡಬೇಕು ಎಂದು ಶ್ರೀಶಾಂತ್​ ಅವರು ಪ್ರತಿಪಾದಿಸಿದ್ದಾರೆ.
ವೈಭವ್ ಸೂರ್ಯವಂಶಿ ಭವಿಷ್ಯದಲ್ಲಿ ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ರಾಯಭಾರಿಯಾಗಬಲ್ಲರು. ಮುಂಬರುವ ದಿನಗಳಲ್ಲಿ ಕ್ರಿಕೆಟ್ ಒಲಿಂಪಿಕ್ಸ್‌ನ ಭಾಗವಾಗುತ್ತಿರುವುದರಿಂದ, ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡುವಲ್ಲಿ ವೈಭವ್ ಅತ್ಯಂತ ಪ್ರಮುಖ ಪಾತ್ರ ವಹಿಸಲಿದ್ದಾರೆ. ಒಂದು ವೇಳೆ ಅವರು ಇದರಲ್ಲಿ ಯಶಸ್ವಿಯಾದರೆ ಚೀನಾ ಮತ್ತು ಜರ್ಮನಿಯಂತಹ ದೊಡ್ಡ ದೇಶಗಳು ಕ್ರಿಕೆಟ್‌ನತ್ತ ಆಕರ್ಷಿತರಾಗಲು ಇದು ದೊಡ್ಡ ಸ್ಫೂರ್ತಿಯಾಗಲಿದೆ ಎಂದು ಶ್ರೀಶಾಂತ್ ಹಾರೈಸಿದ್ದಾರೆ.
ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರಂತಹ ಶ್ರೇಷ್ಠ ಆಟಗಾರರು ಭಾರತೀಯ ಕ್ರಿಕೆಟ್‌ ಅನ್ನು ಇಷ್ಟು ವರ್ಷಗಳ ಕಾಲ ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಈಗಿನ ಯುವ ಪೀಳಿಗೆಯಲ್ಲಿ ಆ ಭವ್ಯ ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುವ ಎಲ್ಲಾ ಅದ್ಭುತ ಪ್ರತಿಭೆ ಮತ್ತು ಸಾಮರ್ಥ್ಯ ವೈಭವ್ ಸೂರ್ಯವಂಶಿ ಅವರಲ್ಲಿದೆ ಎಂದು ಶ್ರೀಶಾಂತ್ ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net