

ಚೆನ್ನೈ: ಭಾರತದಲ್ಲಿ ಕ್ರಿಕೆಟ್ ಎಂದರೆ ಅದು ಕೇವಲ ಕ್ರೀಡೆಯಲ್ಲ, ಬದಲಿಗೆ ಎಮೊಷನ್ ಎಂದೇ ಹೇಳಬಹುದಾಗಿದೆ. ಹೀಗಾಗಿ ಭಾರತದಲ್ಲಿ ಕ್ರಿಕೆಟ್ ಅದರಲ್ಲೂ ಐಪಿಎಲ್ಗೆ ಬಹಳ ಮಹತ್ವವನ್ನು ನೀಡಲಾಗುತ್ತದೆ.
ಇನ್ನೇನು ಕೆಲವೇ ತಿಂಗಳಲ್ಲಿ 2027 ನೇ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಅಷ್ಟರಲ್ಲೇ, ಐಪಿಎಲ್ನ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ನೂತನ ಕೋಚ್ ಆಗಿ ಭಾರತ ತಂಡದ ಮಾಜಿ ವೇಗಿ ಜಹೀರ್ ಖಾನ್ (Zaheer Khan) ರನ್ನು ಆಯ್ಕೆ ಮಾಡಿದೆ. ಈಗ ಜಹೀರ್ ಖಾನ್, ಸಿಎಸ್‌ಕೆ ತಂಡಕ್ಕೆ ಕೋಚ್ ಆಗಿ ಆಯ್ಕೆಯಾದ ಬಗ್ಗೆ, ಮುಂದಿರುವ ಸವಾಲುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ತಂಡಕ್ಕೆ ಹೆಡ್ ಕೋಚ್ ಆಗಿ ಆಯ್ಕೆಯಾದ ಹಿಂದಿನ ರೋಚಕ ಕಥೆಯನ್ನು ಜಹೀರ್ ಖಾನ್ ಬಿಚ್ಚಿಟ್ಟಿದ್ದಾರೆ. ಫ್ರಾಂಚೈಸಿ ಮ್ಯಾನೇಜ್‌ಮೆಂಟ್ ತನ್ನನ್ನು ಸಂಪರ್ಕಿಸಿ, 'ನಾವು ನಿಮ್ಮನ್ನು ನಮ್ಮ ತಂಡದ ಕೋಚ್ ಆಗಿ ನೋಡಲು ಬಯಸುತ್ತೇವೆ, ನೀವು ಲಭ್ಯವಿದ್ದೀರಾ?' ಎಂದು ಕೇಳಿದರು. ನಾನು ಕೂಡ ಕ್ಷಣವೂ ಯೋಚಿಸದೆ 'ಹೌದು' ಎಂದೆ. ಚೆನ್ನೈ ಸೂಪರ್ ಕಿಂಗ್ಸ್‌ನಂತಹ ಫ್ರಾಂಚೈಸಿಯ ಭಾಗವಾಗಲು ನನಗೆ ತುಂಬಾನೇ ಖುಷಿಯಾಯಿತು, ಎಂದು ಜಹೀರ್ ತಿಳಿಸಿದ್ದಾರೆ.
ಫ್ರಾಂಚೈಸಿ ತನ್ನ ಸಾಮರ್ಥ್ಯದ ಮೇಲೆ ಇಟ್ಟಿರುವ ನಂಬಿಕೆ ತನ್ನಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬಿದೆ ಎಂದಿರುವ ಜಹೀರ್, ಈ ಹೊಸ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವುದಾಗಿ ಭರವಸೆ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಎಂ.ಎಸ್. ಧೋನಿ ಪಾತ್ರ ದೊಡ್ಡದು. ಧೋನಿ ಕುರಿತು ಮಾತನಾಡಿದ ಜಹೀರ್ ಖಾನ್, ಸಿಎಸ್‌ಕೆ ಪಾಲಿಗೆ ಧೋನಿ ನಿಜಕ್ಕೂ ಒಂದು ದೊಡ್ಡ ಶಕ್ತಿ. ತಂಡ ಯಾವ ದಿಕ್ಕಿನಲ್ಲಿ ಸಾಗಬೇಕು, ಯಶಸ್ಸಿನ ಹಾದಿಯಲ್ಲಿ ಹೇಗೆ ಮುನ್ನಡೆಯಬೇಕು ಎಂಬುದನ್ನು ನಿರ್ಧರಿಸುವಲ್ಲಿ ಅವರ ಪಾತ್ರ ನಿರ್ಣಾಯಕ, ಎಂದಿದ್ದಾರೆ.
ತಾವು ಎದುರಾಳಿಯಾಗಿ ಆಡಿದ ದಿನಗಳನ್ನು ನೆನಪಿಸಿಕೊಂಡ ಜಹೀರ್, ನಾನು ಯಾವಾಗೆಲ್ಲಾ ಸಿಎಸ್‌ಕೆ ತಂಡವನ್ನು ಎದುರಿಸಿದ್ದೇನೋ, ಆಗಲೆಲ್ಲಾ ಅವರು ಅತ್ಯಂತ ಬಲಿಷ್ಠ ಹಾಗೂ ಶಿಸ್ತಿನ ತಂಡವಾಗಿ ಕಂಡುಬಂದಿದ್ದಾರೆ. ಆ ಪರಂಪರೆಯನ್ನು ಕಾಪಾಡಿಕೊಂಡು ಹೋಗುವುದು ನನ್ನ ಮುಂದಿರುವ ದೊಡ್ಡ ಸವಾಲು, ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುದೀರ್ಘ ಕಾಲದಿಂದ ಸಿಎಸ್‌ಕೆ ತಂಡದ ಯಶಸ್ಸಿನ ಹಿಂದೆ ನಿಂತಿದ್ದ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರನ್ನು ಜಹೀರ್ ಖಾನ್ ವಿಶೇಷವಾಗಿ ಸ್ಮರಿಸಿದ್ದಾರೆ. ಫ್ಲೆಮಿಂಗ್ ಮತ್ತು ಎಂ.ಎಸ್. ಧೋನಿ ನಡುವಿನ ಬಾಂಧವ್ಯ ನಿಜಕ್ಕೂ ಅದ್ಭುತವಾಗಿತ್ತು. ಅವರ ಸ್ಥಿರತೆ ಇಡೀ ತಂಡಕ್ಕೆ ಮಾದರಿಯಾಗಿದೆ.
ಅಂತಹ ದಿಗ್ಗಜನ ಸ್ಥಾನವನ್ನು ತುಂಬುವುದು ಸುಲಭವಲ್ಲ. ಸಾಕಷ್ಟು ನಿರೀಕ್ಷೆಗಳಿವೆ, ಅದರೊಂದಿಗೆ ಒತ್ತಡವೂ ಇದೆ. ಆದರೆ ನಾನಿನ್ನು ಈ ಸವಾಲನ್ನು ಒಂದು ಅವಕಾಶವಾಗಿ ಸ್ವೀಕರಿಸಿದ್ದೇನೆ. ಮೈದಾನದಲ್ಲಿ ಹೊಸ ತಂತ್ರಗಳನ್ನು ಪ್ರಯೋಗಿಸಲು ಕಾಯುತ್ತಿದ್ದೇನೆ, ಎಂದು ಜಹೀರ್ ಖಾನ್ ಹೇಳಿದ್ದಾರೆ, (ಏಜೆನ್ಸೀಸ್).