ಬೆಂಗಳೂರು: ದೇಶದ ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆ ಎನಿಸಿರುವ ಕರ್ನಾಟಕದ ಹೊಂಬಾಳೆ ಫಿಲ್ಮ್ಸ್, ಐಪಿಎಲ್ 18ನೇ ಆವೃತ್ತಿಯ ಚಾಂಪಿಯನ್ ಆರ್ಸಿಬಿ ತಂಡವನ್ನು ಖರೀದಿಸಲು ಆಸಕ್ತಿ ತೋರಿಸಿದೆ ಎಂದು ವರದಿಯಾಗಿದೆ.
ಹಾಲಿ ವಿತ್ತ ವರ್ಷ ಮುಗಿಯುವುದರೊಳಗಾಗಿ ಅಂದರೆ ಮಾರ್ಚ್ 31ರೊಳಗೆ ಆರ್ಸಿಬಿ ತಂಡವನ್ನು ಮಾರಾಟ ಮಾಡಲಾಗುವುದು ಎಂದು ಫ್ರಾಂಚೈಸಿ ಒಡೆತನ ಹೊಂದಿರುವ ಡಿಯಾಜಿಯೋ ಈಗಾಗಲೆ ಪ್ರಕಟಿಸಿದೆ. ಹೀಗಾಗಿ ಆರ್ಸಿಬಿ ತಂಡದ ಹೊಸ ಮಾಲೀಕರಾಗಬಹುದಾದವರ ಪಟ್ಟಿಯಲ್ಲಿ ಈಗಾಗಲೆ ಹಲವು ಉದ್ಯಮಿಗಳ ಹೆಸರು ಕಾಣಿಸಿದೆ. ಇದರ ಜತೆಗೆ ಕೆಜಿಎಫ್, ಸಲಾರ್, ಕಾಂತಾರದಂಥ ಬ್ಲಾಕ್ಬಾಸ್ಟರ್ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್ ಹೆಸರು ಕೂಡ ಕಳೆದ ಕೆಲದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಚಾಲ್ತಿಯಲ್ಲಿದೆ.
ಆರ್ಸಿಬಿ ತಂಡವನ್ನು ವಿಜಯ್ ಕಿರಗಂದೂರ್ ಒಡೆತನದ ಹೊಂಬಾಳೆ ಸಂಸ್ಥೆ ಖರೀದಿಸುವುದು ಖಚಿತ ಎಂಬ ಸುದ್ದಿಯೂ ಭಾನುವಾರ ಜಾಲತಾಣದಲ್ಲಿ ಸದ್ದುಮಾಡಿದೆ. ಕರ್ನಾಟಕದ ತಂಡವನ್ನು ಕನ್ನಡಿಗರೇ ಖರೀದಿಸುತ್ತಿರುವ ಬಗ್ಗೆ ಹಲವಾರು ಅಭಿಮಾನಿಗಳು ಸಂಭ್ರಮವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಆರ್ಸಿಬಿ ಮಾಲೀಕರು, ವಿರಾಟ್ ಕೊಹ್ಲಿ ಅವರಂಥ ಸ್ಟಾರ್ ಕ್ರಿಕೆಟಿಗರನ್ನು ಒಳಗೊಂಡ ತಂಡಕ್ಕೆ 2 ಬಿಲಿಯನ್ ಡಾಲರ್ ಅಂದರೆ 17 ಸಾವಿರ ಕೋಟಿ ರೂ. ಮೌಲ್ಯ ನಿಗದಿಪಡಿಸಿದ್ದಾರೆ. 3 ಸಾವಿರ ಕೋಟಿ ರೂ.ಗೂ ಕಡಿಮೆ ಮೌಲ್ಯ ಹೊಂದಿರುವ ಹೊಂಬಾಳೆಗೆ ಆರ್ಸಿಬಿ ಖರೀದಿ ಸಾಧ್ಯವೇ ಎಂದೂ ಹಲವರು ಪ್ರಶ್ನಿಸಿದ್ದಾರೆ.