ಹಾಕಿ ಫೈವ್ಸ್‌: ಭಾರತ ಎದುರು ಆರು ಆಟಗಾರರನ್ನು ಆಡಿಸಿ ಮುಜುಗರಕ್ಕೀಡಾದ ಪಾಕ್!

ಹಾಕಿ ಫೈವ್ಸ್‌: ಭಾರತ ಎದುರು ಆರು ಆಟಗಾರರನ್ನು ಆಡಿಸಿ ಮುಜುಗರಕ್ಕೀಡಾದ ಪಾಕ್!
ಹಾಕಿ ಫೈವ್ಸ್‌: ಭಾರತ ಎದುರು ಆರು ಆಟಗಾರರನ್ನು ಆಡಿಸಿ ಮುಜುಗರಕ್ಕೀಡಾದ ಪಾಕ್!
Published on
ಲಾಹೋರ್: ಯೂತ್ ಹಾಕಿ ಫೈವ್ಸ್ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಪಾಕಿಸ್ತಾನ ಹಾಕಿ ಒಕ್ಕೂಟ ತೀವ್ರ ಮುಜುಗರಕ್ಕೀಡಾಗಿದೆ. ಮಸ್ಕತ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಐವರು ಆಟಗಾರರ ಬದಲಿಗೆ ಆರು ಆಟಗಾರರೊಂದಿಗೆ ಕಣಕ್ಕಿಳಿದ ಪಾಕ್ ತಂಡ, ಅಂಪೈರ್‌ಗಳಿಂದ ಶಿಕ್ಷೆಗೂ ಗುರಿಯಾಗಿದೆ.
ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಈ ಎಡವಟ್ಟು ಸಂಭವಿಸಿದ್ದು, ಪಂದ್ಯ ಆರಂಭದ ತಕ್ಷಣ ಆರು ಪಾಕ್ ಆಟಗಾರರನ್ನು ಮೈದಾನದಲ್ಲಿರುವುದು ಕಂಡ ಅಂಪೈರ್‌ಗಳು, ಮೀಸಲು ಆಟಗಾರ ಸಹಿತ ಮೂರು ಆಟಗಾರರನ್ನು ಮೈದಾನದಿಂದ ಹೊರಗೆ ಕಳುಹಿಸಿದರು. ಇದರಿಂದ ಪಾಕ್ ಐದರ ಬದಲಿಗೆ ಮೂವರು ಆಟಗಾರರೊಂದಿಗೆ ಪೂರ್ಣ ಪಂದ್ಯ ಆಡಿತು. ಇದರ ಲಾಭ ಪಡೆದ ಭಾರತ 7-3 ಅಂತರದಿಂದ ಗೆಲುವು ದಾಖಲಿಸಿತು. ಕೆಲವು ಆಟಗಾರರು ಹಾಗೂ ತರಬೇತುದಾರರೊಂದಿಗಿನ ಸಂವಹನ ಕೊರತೆಯಿಂದ ಈ ಘಟನೆ ಸಂಭವಿಸಿದೆ ಎಂದು ಪಾಕ್ ಮ್ಯಾನೇಜ್‌ಮೆಂಟ್ ತಿಳಿಸಿದೆ.
ಆದರೆ, ಪಾಕ್ ಹಾಕಿ ಫೆಡರೇಷನ್‌ನ ಹಂಗಾಮಿ ಅಧ್ಯಕ್ಷ ಅಸಮಾಧಾನ ಹೊರಹಾಕಿದ್ದು, ಮುಖ್ಯಕೋಚ್ ತಾಹಿರ್ ಜಮಾನ್ ಮತ್ತು ತರಬೇತುದಾರರಾದ ರೆಹಾನ್ ಬಟ್, ಕಮರ್ ಇಬ್ರಾಹಿಂ ಮತ್ತು ಉಮರ್ ಭುಟ್ಟಾ ಸೇರಿ ತಂಡದ ಆಡಳಿತ ಮಂಡಳಿ ಘಟನೆಯ ವಿವರಣೆ ನೀಡುವಂತೆ ತಿಳಿಸಿದ್ದಾರೆ. ಜಕಾರ್ತದಲ್ಲಿ ನಡೆದ 2022ರ ಪುರುಷರ ಹಾಕಿ ಏಷ್ಯಾ ಕಪ್‌ನಲ್ಲೂ ಪಾಕಿಸ್ತಾನ ಹಾಕಿ ತಂಡ ಇದೇ ರೀತಿಯ ಪ್ರಮಾದ ಎಸಗಿಅರ್ಹತಾ ಪಂದ್ಯದಲ್ಲಿ ಸೋತಿತ್ತು. ಇದರ ಪರಿಣಾಮವಾಗಿ ಪಾಕಿಸ್ತಾನ 2023ರ ವಿಶ್ವಕಪ್‌ಗೆ ಅರ್ಹತೆಯಿಂದ ವಂಚಿತಗೊಂಡಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net