WPL: ಆರ್ಭಟಿಸಿದ ಗ್ರೇಸ್ ಹ್ಯಾರಿಸ್; ಆರ್ಸಿಬಿ ಮಹಿಳೆಯರಿಗೆ ಸತತ 2ನೇ ಗೆಲುವು
WPL: ಆರ್ಭಟಿಸಿದ ಗ್ರೇಸ್ ಹ್ಯಾರಿಸ್; ಆರ್ಸಿಬಿ ಮಹಿಳೆಯರಿಗೆ ಸತತ 2ನೇ ಗೆಲುವು
Published on:
Copied
Follow Us
ಮುಂಬೈ: ಬಿಗಿ ಬೌಲಿಂಗ್ ದಾಳಿ ಮತ್ತು ಗ್ರೇಸ್ ಹ್ಯಾರಿಸ್ (85 ರನ್, 40 ಎಸೆತ, 10 ಬೌಂಡರಿ, 5 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ (RCB) ತಂಡ ಡಬ್ಲ್ಯುಪಿಎಲ್ (Women''s Premier League) 4ನೇ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್ (UP Warriorz) ತಂಡವನ್ನು 9 ವಿಕೆಟ್ಗಳಿಂದ ಮಣಿಸಿದೆ. ಇದರೊಂದಿಗೆ ಸ್ಮೃತಿ ಮಂದನಾ ಬಳಗ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ನವಿ ಮುಂಬೈನ ಡಾ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಟೂರ್ನಿಯ 5ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಯುಪಿ ವಾರಿಯರ್ಸ್ ತಂಡ ಒಂದು ಹಂತದಲ್ಲಿ 50 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ತತ್ತರಿಸಿತು. ಬಳಿಕ ದೀಪ್ತಿ ಶರ್ಮ (45*ರನ್, 35 ಎಸೆತ, 5 ಬೌಂಡರಿ, 1 ಸಿಕ್ಸರ್) ಮತ್ತು ಡಿಯೇಂಡ್ರಾ ಡಾಟಿನ್ (40*ರನ್, 37 ಎಸೆತ, 3 ಬೌಂಡರಿ, 1 ಸಿಕ್ಸರ್) ಆಸರೆಯಲ್ಲಿ 5 ವಿಕೆಟ್ಗೆ 143 ರನ್ಗಳ ಗೌರವಯುತ ಮೊತ್ತ ಕಲೆಹಾಕಿತು. ದೀಪ್ತಿ-ಡಾಟಿನ್ ಮುರಿಯದ 6ನೇ ವಿಕೆಟ್ಗೆ 72 ಎಸೆತಗಳಲ್ಲಿ 93 ರನ್ ಜತೆಯಾಟವಾಡಿದರು.
ಪ್ರತಿಯಾಗಿ ಆರ್ಸಿಬಿ 12.1 ಓವರ್ಗಳಲ್ಲೇ 1 ವಿಕೆಟ್ಗೆ 145 ರನ್ ಗಳಿಸಿ ಜಯ ಸಾಧಿಸಿತು. ಹ್ಯಾರಿಸ್ ಮತ್ತು ನಾಯಕಿ ಸ್ಮೃತಿ ಮಂದನಾ (47*ರನ್, 32 ಎಸೆತ, 9 ಬೌಂಡರಿ) ಮೊದಲ ವಿಕೆಟ್ಗೆ 71 ಎಸೆತಗಳಲ್ಲೇ 137 ರನ್ ಜತೆಯಾಟವಾಡಿ ಗೆಲುವಿನ ಹಾದಿ ಸುಗಮಗೊಳಿಸಿದರು. ಗ್ರೇಸ್ ಹ್ಯಾರಿಸ್ 22 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು.