WPL: ಮುಂಬೈ ಇಂಡಿಯನ್ಸ್​ ಜಯಭೇರಿ; ಗುಜರಾತ್​ ಜೈಂಟ್ಸ್​ಗೆ ಮೊದಲ ಸೋಲು

WPL: ಮುಂಬೈ ಇಂಡಿಯನ್ಸ್​ ಜಯಭೇರಿ; ಗುಜರಾತ್​ ಜೈಂಟ್ಸ್​ಗೆ ಮೊದಲ ಸೋಲು
WPL: ಮುಂಬೈ ಇಂಡಿಯನ್ಸ್​ ಜಯಭೇರಿ; ಗುಜರಾತ್​ ಜೈಂಟ್ಸ್​ಗೆ ಮೊದಲ ಸೋಲು
Published on
ಮುಂಬೈ: ನಾಯಕಿ ಹರ್ಮಾನ್​ಪ್ರೀತ್​ ಕೌರ್​ (71*ರನ್​, 43 ಎಸೆತ, 7 ಬೌಂಡರಿ, 2 ಸಿಕ್ಸರ್​) ಜವಾಬ್ದಾರಿಯುತ ಬ್ಯಾಟಿಂಗ್​ ಬಲದಿಂದ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ (Mumbai Indians) ತಂಡ ಡಬ್ಲ್ಯುಪಿಎಲ್​ (Women''s Premier League) 4ನೇ ಆವೃತ್ತಿಯಲ್ಲಿ ಗುಜರಾತ್​ ಜೈಂಟ್ಸ್​ (Gujarat Giants) ಎದುರು 7 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ. ಗುಜರಾತ್​ಗೆ ಇದು ಟೂರ್ನಿಯಲ್ಲಿ ಮೊದಲ ಸೋಲಾಗಿದೆ.

ನವಿ ಮುಂಬೈನ ಡಾ. ಡಿವೈ ಪಾಟೀಲ್​ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಟೂರ್ನಿಯ 6ನೇ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಗುಜರಾತ್​, ಜಾರ್ಜಿಯಾ ವರೆಹ್ಯಾಂ (43*ರನ್​, 33 ಎಸೆತ, 4 ಬೌಂಡರಿ, 1 ಸಿಕ್ಸರ್​) ಮತ್ತು ಭಾರತಿ ಫುಲ್ಮಲಿ (36*ರನ್​, 15 ಎಸೆತ, 3 ಬೌಂಡರಿ, 3 ಸಿಕ್ಸರ್​) ದಿಟ್ಟ ಬ್ಯಾಟಿಂಗ್​ ನಿರ್ವಹಣೆಯ ನೆರವಿನಿಂದ 5 ವಿಕೆಟ್​ಗೆ 192 ರನ್​ ಪೇರಿಸಿತು. ಸತತ 3ನೇ ಪಂದ್ಯದಲ್ಲಿ 200 ಪ್ಲಸ್​ ಮೊತ್ತ ಪೇರಿಸುವ ಅವಕಾಶದಿಂದ ಗುಜರಾತ್​ ಕೇವಲ 8 ರನ್​ಗಳಿಂದ ವಂಚಿತವಾಯಿತು. ಬೆತ್​ ಮೂನಿ (33 ರನ್​, 26 ಎಸೆತ, 3 ಬೌಂಡರಿ, 1 ಸಿಕ್ಸರ್​) ಮತ್ತು ಕನಿಕಾ ಅಹುಜಾ (35 ರನ್​, 18 ಎಸೆತ, 4 ಬೌಂಡರಿ, 2 ಸಿಕ್ಸರ್​) ಗುಜರಾತ್​ಗೆ ಉಪಯುಕ್ತ ಕೊಡುಗೆ ನೀಡಿದರು. ಜಾರ್ಜಿಯಾ-ಭಾರತಿ ಮುರಿಯದ 6ನೇ ವಿಕೆಟ್​ಗೆ 24 ಎಸೆತಗಳಲ್ಲೇ 56 ರನ್​ ಕಸಿಯುವ ಮೂಲಕ ಮೊತ್ತವನ್ನು 200ರ ಸನಿಹ ಕೊಂಡೊಯ್ದರು.

ಪ್ರತಿಯಾಗಿ ಮುಂಬೈ ಆರಂಭಿಕ ಆಘಾತದ ಬಳಿಕ ಅಮನ್​ಜೋತ್​ ಕೌರ್​ (40) ಮತ್ತು ಹರ್ಮಾನ್​ಪ್ರೀತ್​ ಹೋರಾಟದಿಂದ ಚೇತರಿಕೆ ಕಂಡಿತು. ಅಂತಿಮವಾಗಿ ಮುಂಬೈ 19.2 ಓವರ್​ಗಳಲ್ಲಿ 3 ವಿಕೆಟ್​ಗೆ 193 ರನ್​ ಗಳಿಸಿ ಜಯಭೇರಿ ಬಾರಿಸಿತು. ಕೊನೆಯಲ್ಲಿ ಹರ್ಮಾನ್​ಪ್ರೀತ್​ಗೆ ನಿಕೋಲ ಕ್ಯಾರಿ (38*) ಉತ್ತಮ ಬೆಂಬಲ ಒದಗಿಸಿದರು.

ಮುಂಬೈ ಪರ ನ್ಯಾಟ್​ ಸೀವರ್​ ಬ್ರಂಟ್​ ಬದಲಿಗೆ ಹ್ಯಾಲಿ ಮ್ಯಾಥ್ಯೂಸ್​ ಕಣಕ್ಕಿಳಿದರು. ನ್ಯಾಟ್​ ಸೀವರ್​ ಅನಾರೋಗ್ಯದಿಂದಾಗಿ ಪಂದ್ಯ ತಪ್ಪಿಸಿಕೊಂಡರು.

ಗುಜರಾತ್​ ಜೈಂಟ್ಸ್​: 5 ವಿಕೆಟ್​ಗೆ 192 (ಮೂನಿ 33, ಡಿವೈನ್​ 8, ಕನಿಕಾ 35, ಗಾರ್ಡ್​ನರ್​ 20, ಜಾರ್ಜಿಯಾ 43*, ಭಾರತಿ 36*, ಶಬ್ನಿಮ್​ 25ಕ್ಕೆ 1, ಅಮೆಲಿಯಾ 40ಕ್ಕೆ 1, ಮ್ಯಾಥ್ಯೂಸ್​ 34ಕ್ಕೆ 1). ಮುಂಬೈ ಇಂಡಿಯನ್ಸ್​: 19.2 ಓವರ್​ಗಳಲ್ಲಿ 3 ವಿಕೆಟ್​ಗೆ 193 (ಕಮಲಿನಿ 13, ಮ್ಯಾಥ್ಯೂಸ್​ 22, ಅಮನ್​ಜೋತ್​ 40, ಹರ್ಮಾನ್​ಪ್ರೀತ್​ 71*, ನಿಕೋಲ ಕ್ಯಾರಿ 38*, ಡಿವೈನ್​ 29ಕ್ಕೆ 1, ಕಾಶ್ವಿ 33ಕ್ಕೆ 1).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net