ಪ್ರಯಾಣ ಈಗಷ್ಟೇ ಶುರುವಾಗಿದೆ...10 ವರ್ಷಗಳ ಮೈಲಿಗಲ್ಲಿನ ಸಂಭ್ರಮದಲ್ಲಿ ಹಾರ್ದಿಕ್ ಭಾವುಕ ಪೋಸ್ಟ್! Hardik Pandya

 ಭಾರತೀಯ ಕ್ರಿಕೆಟ್‌ನ ಆಲ್‌ ರೌಂಡರ್‌ ಹಾರ್ದಿಕ್ ಪಾಂಡ್ಯ (ಚಿತ್ರ Instagram)
ಭಾರತೀಯ ಕ್ರಿಕೆಟ್‌ನ ಆಲ್‌ ರೌಂಡರ್‌ ಹಾರ್ದಿಕ್ ಪಾಂಡ್ಯ (ಚಿತ್ರ Instagram)
Published on

ಪ್ರಮುಖ ಮುಖ್ಯಾಂಶಗಳು

  • ಹಾರ್ದಿಕ್ ಪಾಂಡ್ಯ ಭಾರತೀಯ ಕ್ರಿಕೆಟ್‌ನ ಪ್ರಮುಖ ಆಲ್‌ ರೌಂಡರ್‌ಗಳಲ್ಲಿ ಒಬ್ಬರು
  • ಪಾಂಡ್ಯ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹತ್ತು ವರ್ಷಗಳನ್ನು ಪೂರೈಸಿದ್ದಾರೆ
  • ಟೀಮ್ ಇಂಡಿಯಾದೊಂದಿಗಿನ ತಮ್ಮ ಪ್ರಯಾಣ ಇನ್ನೂ ಮುಗಿದಿಲ್ಲ. ಸಾಧಿಸಬೇಕಾದದ್ದು ಬಹಳಷ್ಟಿದೆ
  • ಗಣರಾಜ್ಯೋತ್ಸವದಂದು ಭಾರತ ತಂಡದ ಪರವಾಗಿ ಆಡಲು ಅವಕಾಶ ಸಿಕ್ಕಿರುವುದು ನನಗೆ ದೊಡ್ಡ ಯೋಜನೆ
ನವದೆಹಲಿ: ಭಾರತೀಯ ಕ್ರಿಕೆಟ್‌ನ ಪ್ರಮುಖ ಆಲ್‌ ರೌಂಡರ್‌ಗಳಲ್ಲೊಬ್ಬರಾದ (Hardik Pandya) ಹಾರ್ದಿಕ್ ಪಾಂಡ್ಯ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹತ್ತು ವರ್ಷಗಳನ್ನು ಪೂರೈಸಿದ್ದಾರೆ. ಈ ಸುದೀರ್ಘ ಪಯಣದ ಬಗ್ಗೆ ಸೋಮವಾರ ಭಾವನಾತ್ಮಕವಾಗಿ ಮಾತನಾಡಿದ ಹಾರ್ದಿಕ್, ಟೀಮ್ ಇಂಡಿಯಾದೊಂದಿಗಿನ ತಮ್ಮ ಪ್ರಯಾಣ ಇನ್ನೂ ಮುಗಿದಿಲ್ಲ. ಸಾಧಿಸಬೇಕಾದದ್ದು ಬಹಳಷ್ಟಿದೆ ಎಂದಿದ್ದಾರೆ.

ಹತ್ತು ವರ್ಷಗಳ ಹಿಂದೆ ಆರಂಭವಾದ ಕನಸಿನ ಪಯಣ

2016 ಜನವರಿಯಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೂಲಕ ಹಾರ್ದಿಕ್ ಪಾಂಡ್ಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ 10 ವರ್ಷಗಳ ಕಾಲ ತಮ್ಮ ವೃತ್ತಿ ಜೀವನವನ್ನು ಪೂರೈಸಿರುವ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. 
ಈ ಪ್ರಯಾಣದ 10 ವರ್ಷಗಳು, ನನಗೆ 33 ವರ್ಷ ತುಂಬಿದ ವರ್ಷ. ನಾನು ಪ್ರೀತಿಸುವ ಕ್ರೀಡೆಯನ್ನು ಪೂರ್ಣ ಹೃದಯದಿಂದ ಆಡುವುದು ಒಂದು ಸಂತೋಷವಾದರೆ, ಅದರ ಮೂಲಕ ದೇಶ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ಅದಕ್ಕಿಂತ ದೊಡ್ಡ ಭಾಗ್ಯ. ಆದಾಗ್ಯೂ, ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿದ ನಂತರವೇ ಈ ಮಟ್ಟಕ್ಕೆ ಬಂದು ನಿಂತಿದ್ದೇನೆ. ಈ ಹತ್ತು ವರ್ಷಗಳು ಕೇವಲ ಮುನ್ನುಡಿಯಷ್ಟೇ, ನಾನು ಸಾಗಬೇಕಾದ ಹಾದಿ ಈಗಷ್ಟೇ ಆರಂಭವಾಗಿದೆ ಎಂದರು.
ತನ್ನ ಬಾಲ್ಯದ ವರ್ಷಗಳನ್ನು ಹಿಂತಿರುಗಿ ನೋಡುತ್ತಾ, ಹಾರ್ದಿಕ್ ತನ್ನ ಏಳಿಗೆಯನ್ನು ವ್ಯಾಖ್ಯಾನಿಸಿದ ತ್ಯಾಗಗಳು ಮತ್ತು ಹಿನ್ನಡೆಗಳ ಬಗ್ಗೆ ಮಾತನಾಡಿದರು. ಬರೋಡಾದಲ್ಲಿ ಅವರು ಮೈಲುಗಟ್ಟಲೆ ಓಡುತ್ತಿದ್ದ ಬಾಲ್ಯದ ದಿನಗಳು, ನೆಟ್​ಗಳಲ್ಲಿ ಹೆಚ್ಚುವರಿ ಬೌಲಿಂಗ್​ನಲ್ಲಿ ಮಾಡುತ್ತಿರುವುದು, ಹಾಗೂ ತಮ್ಮ 19 ನೇ ವಯಸ್ಸಿನಲ್ಲಿ ಆಲ್​ರೌಂಡರ್​ ಆಗಿ ಬದಲಾದ ಎಲ್ಲಾ ಕ್ಷಣಗಳನ್ನು ನೆನಪಿಸಿಕೊಂಡು, ತಿರಸ್ಕಾರದಿಂದ ಹಿಡಿದು ದೇಶಕ್ಕೆ ಆಡುವವರೆಗೂ ಪಡೆದ ಪಯಣ ಅತ್ಯಂತ ಸಾರ್ಥಕವಾಯಿತು ಎಂದು ಹೇಳಿದ್ದಾರೆ.
ಜನವರಿ 26 ಗಣರಾಜ್ಯೋತ್ಸವದಂದು ಭಾರತ ತಂಡದ ಪರವಾಗಿ ಆಡಲು ಅವಕಾಶ ಸಿಕ್ಕಿರುವುದು ನನಗೆ ದೊಡ್ಡ ಯೋಜನೆಯಾಗಿದೆ. ನಾನು ಕ್ರೀಡೆಯನ್ನು ಆಡುತ್ತಲೇ ಮನುಷ್ಯನಾಗಿದ್ದೇನೆ. ಈ ಮುಂದೆ ಕ್ರೀಡೆಯನ್ನು ಆಡುತ್ತಲೇ ಮುಪ್ಪಾಗುತ್ತೇನೆ ಎಂದು ಹೇಳುವ ಮೂಲಕ ಕ್ರಿಕೆಟ್​ ಮೇಲಿರುವ ಪ್ರೀತಿಯನ್ನು ಎತ್ತಿ ತೋರಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಭಾರತದ ಬೌಲಿಂಗ್ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ. 2016ರಲ್ಲಿ ಪದಾರ್ಪಣೆ ಮಾಡಿದ ಅವರು, ತಮ್ಮ ಸ್ಫೋಟಕ ಬ್ಯಾಟಿಂಗ್ ಮತ್ತು ಚುರುಕಾದ ಬೌಲಿಂಗ್‌ನಿಂದ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. 2024ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಇವರ ಪಾತ್ರ ಪ್ರಮುಖವಾಗಿದೆ.
ಪಾಂಡ್ಯ  2024ರ ಟಿ20 ವಿಶ್ವಕಪ್ ಫೈನಲ್‌ನ ಅಂತಿಮ ಓವರ್‌ನಲ್ಲಿ ನಿರ್ಣಾಯಕ ವಿಕೆಟ್ ಪಡೆದು ಭಾರತಕ್ಕೆ ಜಯ ತಂದುಕೊಟ್ಟರು. ಆದಾಗ್ಯೂ, ಚಾಂಪಿಯನ್ಸ್ ಟ್ರೋಫಿ (2017) ಫೈನಲ್‌ನಲ್ಲಿ ಕೇವಲ 32 ಎಸೆತಗಳಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದರು. ಟಿ20 ಕ್ರಿಕೆಟ್‌ನಲ್ಲಿ ಒಂದೇ ಪಂದ್ಯದಲ್ಲಿ 30+ ರನ್ ಮತ್ತು 4 ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರ ಎಂಬ ಬಿರುದನ್ನು ಪಡೆದಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net