ಹ್ಯಾಂಡ್​ಶೇಕ್ ಮಾಡಲ್ಲ ಅನ್ನೋದೆಲ್ಲ ಮುಂದೆ ಮಾತ್ರ! ಅದೇ ಹಿಂದೆ... ಇಂಗ್ಲೆಂಡ್​ ಮಾಜಿ ಕ್ಯಾಪ್ಟನ್ ಅಚ್ಚರಿ ಹೇಳಿಕೆ | Handshake Policy

ಭಾರತ-ಪಾಕ್​ ತಂಡಗಳು
ಭಾರತ-ಪಾಕ್​ ತಂಡಗಳು
Published on

ಪ್ರಮುಖ ಮುಖ್ಯಾಂಶಗಳು

  • ಭಾರತ-ಪಾಕಿಸ್ತಾನ ಹ್ಯಾಂಡ್​ಶೇಕ್​ ಮಾಡದಿರುವುದು ಕೇವಲ ಶೋ ಅಷ್ಟೇ
  • ಎರಡೂ ತಂಡಗಳು ಕೇವಲ ಮುಂದೆ ಮಾತ್ರ, ತೆರೆ ಹಿಂದೆ ಚೆನ್ನಾಗಿಯೇ ಮಾತಾಡ್ತಾರೆ
  • ಹ್ಯಾಂಡ್​ಶೇಕ್​ ಕೇವಲ ಶೋ ಅನಿಸುತ್ತೆ ಎಂದ ಆಲೆಸ್ಟೈರ್​ ಕುಕ್​
ನವದೆಹಲಿ: ಫೆ.15ರಂದು ಕೊಲೊಂಬೊದಲ್ಲಿ ನಡೆದ ಇಂಡೋ-ಪಾಕ್​ ಪಂದ್ಯವನ್ನು ಆರಂಭದಲ್ಲಿ ಬಹಿಷ್ಕರಿಸುವುದಾಗಿ ಹೇಳಿದ್ದ ಪಾಕಿಸ್ತಾನ ಕ್ರಿಕೆಟ್​ ಮಂಡಳಿ (Handshake Policy), ಆ ನಂತರ ಆಡಿದ್ದು ಟೀಕೆಗೆಳಿಗೆ ಗುರಿಯಾಯಿತು. ಪ್ರಸಕ್ತ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್​ 8 ಹಂತಕ್ಕೆ ಈ ಎರಡೂ ತಂಡಗಳು ಎಂಟ್ರಿಕೊಟ್ಟಿವೆ. ಇಂಡೋ-ಪಾಕ್​ ನಡುವೆ ಇನ್ನೊಂದು ಪಂದ್ಯ ನೋಡುವ ಬಯಕೆ ಹಲವರದ್ದಾಗಿದೆ.
ಇದೆಲ್ಲದರ ಮಧ್ಯೆ, ಮೈದಾನದಲ್ಲಿ ಭಾರತ-ಪಾಕಿಸ್ತಾನ ​ತಂಡಗಳ ಸಮರ, ಜಿದ್ದಾಜಿದ್ದಿ ಎಷ್ಟರ ಮಟ್ಟಿಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಪಹಲ್ಗಾಮ್​ ಉಗ್ರರ ದಾಳಿ ಬಳಿಕ ಭಾರತವಂತು ಪಾಕ್​ ತಂಡದೊಂದಿಗೆ ಹಸ್ತಲಾಘವ ಮಾಡುವುದೇ ಇಲ್ಲ. ಆದರೆ, ಇದನ್ನೇ ಮುಂದಿಟ್ಟು ಮಾತನಾಡಿರುವ ಇಂಗ್ಲೆಂಡ್​ನ ಮಾಜಿ ನಾಯಕ ಆಲೆಸ್ಟೈರ್​ ಕುಕ್​, ಇದೆಲ್ಲವೂ ಶೋ ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.
ಏಷ್ಯಾಕಪ್​ ಟ್ರೋಫಿ ಗೆದ್ದ ಭಾರತ, ಆ ಟೂರ್ನಿಯಲ್ಲಿ ಪಾಕಿಸ್ತಾನದೊಂದಿಗೆ ಆಡಿದ ಮೂರು ಪಂದ್ಯಗಳಲ್ಲಿಯೂ ಹ್ಯಾಂಡ್​ಶೇಕ್​ ಮಾಡದೆ ಪಂದ್ಯವನ್ನಾಡಿತು. ಇದು ಎರಡೂ ದೇಶಗಳ ನಡುವಿನ ವೈರತ್ವ, ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು. ಮತ್ತೊಂದೆಡೆ, ಈ ವಿಷಯವನ್ನು ಚರ್ಚೆಗೆ ತೆಗೆದುಕೊಂಡ ಇಂಗ್ಲೆಂಡ್ ಮಾಜಿ ನಾಯಕ, ಹಸ್ತಲಾಘವ ಮಾಡೋದಿಲ್ಲ ಎಂದು ಹೇಳೋದೆಲ್ಲ ಕೇವಲ ಶೋಗೆ ಅಂತ ನನಗೆ ಅನಿಸುತ್ತೆ ಎಂದಿದ್ದಾರೆ.
'ಸ್ಟಿಕ್​ ಟು ಕ್ರಿಕೆಟ್'​ ಪಾಡ್​ಕಾಸ್ಟ್​ನಲ್ಲಿ ಈ ಕುರಿತು ತಮ್ಮ ಸಹ ಹಿರಿಯ ಆಟಗಾರರಾದ ಮೈಕೆಲ್ ವಾಘನ್, ಡೇವಿಡ್ ಲಾಯ್ಡ್ ಮತ್ತು ಫಿಲ್ ಟಫ್ನೆಲ್ ಜತೆ ಮಾತನಾಡಿದ ಕುಕ್​, ಮೈದಾನದಲ್ಲಿ ಹ್ಯಾಂಡ್​ಶೇಕ್​ ಮಾಡದೆ ಇರಬಹುದು. ಆದರೆ, ಎರಡೂ ತಂಡಗಳ ಆಟಗಾರರು ತೆರೆ ಹಿಂದೆ ಮಾತನಾಡಲ್ವಾ? ನಾನೆಲ್ಲೋ ಓದಿದ್ದು, ಅವರೆಲ್ಲ ಚೆನ್ನಾಗಿಯೇ ಮಾತಾಡಿಕೊಂಡು ಇದ್ದಾರೆ. ಆದರೆ, ಆನ್​ಫೀಲ್ಡ್​ನಲ್ಲಿ ಮಾತ್ರ ಕೈಕುಲಕುವುದಿಲ್ಲ ಅಷ್ಟೇ ಎಂದಿದ್ದಾರೆ.

ಅಂದು ಏಷ್ಯಾಕಪ್​ನಲ್ಲಿ ಆಗಿದ್ದೇನು?

2025ರಲ್ಲಿ ನಡೆದ ಏಷ್ಯಾಕಪ್​ ಟೂರ್ನಿಯಲ್ಲಿ ಮೂರು ಬಾರಿ ಪಾಕಿಸ್ತಾನ ತಂಡದೊಂದಿಗೆ ಕಣಕ್ಕಿಳಿದ ಟೀಮ್ ಇಂಡಿಯಾ, ಪಹಲ್ಗಾಮ್ ದಾಳಿಯಲ್ಲಿ ಪಾಕ್​ ಉಗ್ರರ ಕೈವಾಡವನ್ನು ಖಂಡಿಸಿ ಪಾಕ್​ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ಮುಂದಾಗಲಿಲ್ಲ. ದುಬೈನಲ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಪಾಕ್​ ಆಟಗಾರರಿಗೆ ಹ್ಯಾಂಡ್​ಶೇಕ್​ ಮಾಡದ ಟೀಮ್ ಇಂಡಿಯಾ ವಿರುದ್ಧ ಪಿಸಿಬಿ ಭಾರೀ ಅಸಮಾಧಾನ ವ್ಯಕ್ತಪಡಿಸಿತ್ತು. ಇದನ್ನೇ ಮುಂದುವರಿಸಿಕೊಂಡು ಬಂದಿರುವ ಭಾರತ, ಟಿ20 ವಿಶ್ವಕಪ್​ ಟೂರ್ನಿಯಲ್ಲೂ ಪಾಕ್​ ಜತೆಗೆ ಹಸ್ತಲಾಘವ ಮಾಡುತ್ತಿಲ್ಲ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net