ಟಾಪ್ 2 ಸ್ಥಾನಕ್ಕೆ ಗುಜರಾತ್ ಕಣ್ಣು: ಅಹಮದಾಬಾದ್‌ನಲ್ಲಿ ಇಂದು ಚೆನ್ನೈ ಸೂಪರ್‌ಕಿಂಗ್ಸ್ ಸವಾಲು

 ಟಾಪ್ 2 ಸ್ಥಾನಕ್ಕೆ ಗುಜರಾತ್ ಕಣ್ಣು: ಅಹಮದಾಬಾದ್‌ನಲ್ಲಿ ಇಂದು ಚೆನ್ನೈ ಸೂಪರ್‌ಕಿಂಗ್ಸ್ ಸವಾಲು
ಟಾಪ್ 2 ಸ್ಥಾನಕ್ಕೆ ಗುಜರಾತ್ ಕಣ್ಣು: ಅಹಮದಾಬಾದ್‌ನಲ್ಲಿ ಇಂದು ಚೆನ್ನೈ ಸೂಪರ್‌ಕಿಂಗ್ಸ್ ಸವಾಲು
Published on
ಅಹಮದಾಬಾದ್: ಅಂಕಪಟ್ಟಿಯ ಅಗ್ರ-2ರಲ್ಲಿ ಸ್ಥಾನ ಖಾತ್ರಿಪಡಿಸಿಕೊಳ್ಳುವ ಹಂಬಲದಲ್ಲಿರುವ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್-19ರ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಸವಾಲು ಎದುರಿಸಲಿದೆ. ಪ್ಲೇಆಫ್​ಗೇರುವ ಸಣ್ಣ ಅವಕಾಶ ವೃದ್ಧಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಋತುರಾಜ್ ಗಾಯಕ್ವಾಡ್ ಬಳಗ ಹ್ಯಾಟ್ರಿಕ್ ಸೋಲು ತಪ್ಪಿಸುವ ಸವಾಲು ಹೊಂದಿದೆ.
ಸತತ 3 ಸೋಲುಗಳೊಂದಿಗೆ ಟೂರ್ನಿ ಆರಂಭಿಸಿದ್ದ ಸಿಎಸ್‌ಕೆ ದ್ವಿತೀಯಾರ್ಧದಲ್ಲಿ ನೀಡಿದ ಪ್ರದರ್ಶನದಿಂದ ಅಗ್ರ-4ರಲ್ಲಿ ಸ್ಥಾನ ಪಡೆಯುವ ರೇಸ್‌ನಲ್ಲಿ ಉಳಿದಿದೆ. ಆದರೆ, ಹಿಂದಿನ 2 ಪಂದ್ಯಗಳಲ್ಲಿ ಸೋತಿರುವುದು ಹಿನ್ನಡೆ ತಂದಿದ್ದು, ನಿರ್ಣಾಯಕ ಪಂದ್ಯದಲ್ಲಿ ಸಂಜು ಸ್ಯಾಮ್ಸನ್, ಋತುರಾಜ್ ಗಾಯಕ್ವಾಡ್ ಪುಟಿದೇಳಬೇಕಿದೆ. 2023ರಲ್ಲಿ ಪ್ರಶಸ್ತಿ ಗೆದ್ದ ನಂತರ ಕನಿಷ್ಠ ಪ್ಲೇಆಫ್​ಗೇರದ ಸಿಎಸ್‌ಕೆ ಇದುವರೆಗೆ ಆಡಿರುವ 13ರಲ್ಲಿ 6 ಜಯ, 7 ಸೋಲಿನೊಂದಿಗೆ 12 ಅಂಕ ಹೊಂದಿದೆ. ಐದು ಆವೃತ್ತಿಯಲ್ಲಿ 4ನೇ ಬಾರಿಗೆ ಪ್ಲೇಆಫ್​ ಪ್ರವೇಶಿಸಿರುವ ಗುಜರಾತ್ 13ರಲ್ಲಿ 8 ಜಯ, 4 ಸೋಲು ಕಂಡಿದ್ದು, 16 ಅಂಕದೊಂದಿಗೆ ಅಂಕಪಟ್ಟಿಯ 2ನೇ ಸ್ಥಾನದಲ್ಲಿದೆ. ಕೆಕೆಆರ್ ಎದುರು ಹಿಂದಿನ ಪಂದ್ಯದಲ್ಲಿ ಸೋತಿರುವ ಶುಭಮಾನ್ ಗಿಲ್ ಪಡೆ ಪ್ಲೇಆಫ್​ ಮುನ್ನ ಲಯಕ್ಕೆ ಮರಳುವ ಹಂಬಲದಲ್ಲಿದೆ. 
ಕಗಿಸೊ ರಬಾಡ (21 ವಿಕೆಟ್), ಮೊಹಮದ್ ಸಿರಾಜ್, ಪ್ರಸಿದ್ಧಕೃಷ್ಣ, ರಶೀದ್ ಖಾನ್ ಎದುರು ಸಿಎಸ್‌ಕೆ ಬ್ಯಾಟರ್‌ಗಳಿಗೆ ಮತ್ತೊಂದು ಕೊನೇ ಪರೀಕ್ಷೆ ಎನಿಸಿದೆ. ಸಿಎಸ್‌ಕೆ ಬೌಲಿಂಗ್ ಬಲ ಎನಿಸಿದ್ದ ಅಂಶುಲ್ ಕಂಬೋಜ್ (21) 10ರ ಸರಾಸರಿಯಲ್ಲಿ ರನ್ ನೀಡಿ ದುಬಾರಿ ಆಗಿದ್ದು, ಬೌಲಿಂಗ್ ಸಂಯೋಜನೆಯಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಮುಂದಿನ ಆವೃತ್ತಿಗೆ ಮುನ್ನ ಬದಲಿ ಆಟಗಾರರಾಗಿ ಸೇರಿರುವ ಕನ್ನಡಿಗ ಮ್ಯಾಕ್ನೀಲ್ ನೋರೋನ್ಹಾ, ವೇಗಿ ಆಕಾಶ್ ಮಧ್ವಲ್‌ರನ್ನು ಸಿಎಸ್‌ಕೆ ಪರೀಕ್ಷಿಸುವ ನಿರೀಕ್ಷೆ ಇದೆ. 
ಟೈಟಾನ್ಸ್ ಅಗ್ರ-2ರ ಲೆಕ್ಕಾಚಾ
ಅಂಕಪಟ್ಟಿಯ ಅಗ್ರ 2 ತಂಡಗಳು ಕ್ವಾಲಿಫೈಯರ್-1ರಲ್ಲಿ ಸೆಣಸಲಿದ್ದು, ಗೆದ್ದ ತಂಡ ನೇರವಾಗಿ ಫೈನಲ್‌ಗೇರಿದರೆ, ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಇದರಿಂದ, +0.400 ರನ್‌ರೇಟ್ ಹೊಂದಿರುವ ಗುಜರಾತ್ ಟೈಟಾನ್ಸ್, ಸಿಎಸ್‌ಕೆ ಎದುರು ಸುಲಭವಾಗಿ ಗೆದ್ದರೆ, ಅಗ್ರ-2ರಲ್ಲಿ ಸ್ಥಾನ ಖಾತ್ರಿಪಡಿಸಿಕೊಳ್ಳಲಿದೆ. ಜತೆಗೆ ಆರ್‌ಸಿಬಿ ತನ್ನ ಕೊನೇ ಪಂದ್ಯದಲ್ಲಿ 88 ರನ್ ಅಂತರದಿಂದ ಸೋತರೆ, ಗುಜರಾತ್ ಅಗ್ರಸ್ಥಾನಕ್ಕೂ ಏರಲಿದೆ. ಗುಜರಾತ್ 12ಕ್ಕಿಂತ ಹೆಚ್ಚಿನ ರನ್ ಅಂತರದಲ್ಲಿ ಸೋತು, ಇಷ್ಟೇ ಅಂತರದಿಂದ ಸನ್‌ರೈಸರ್ಸ್‌ ಗೆದ್ದರೆ ಗುಜರಾತ್ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಗುಜರಾತ್, ಸನ್‌ರೈಸರ್ಸ್‌ ಎರಡೂ ತಂಡಗಳು ಸೋತರೆ, 16 ಅಂಕದೊಂದಿಗೆ ಅಗ್ರ-2ರಲ್ಲಿ ಸ್ಥಾನ ಪಡೆಯುವ ಅವಕಾಶ ರಾಜಸ್ಥಾನಕ್ಕೂ ಸಿಗಲಿದೆ.
ಸಿಎಸ್‌ಕೆ ಪ್ಲೇಆಫ್ ಹಾದಿ
*ಗುಜರಾತ್ ವಿರುದ್ಧ ಕನಿಷ್ಠ 25 ರನ್‌ಗಳಿಂದ ಗೆದ್ದು, ರನ್‌ರೇಟ್‌ನಲ್ಲಿ ರಾಜಸ್ಥಾನವನ್ನು ಹಿಂದಿಕ್ಕಬೇಕು.
*ಪಂಜಾಬ್, ರಾಜಸ್ಥಾನ, ಕೆಕೆಆರ್ ತಂಡಗಳು ಕೊನೇ ಪಂದ್ಯದಲ್ಲಿ ಸೋಲಬೇಕು.
ಮುಖಾಮುಖಿ: 9
ಸಿಎಸ್‌ಕೆ: 4
ಗುಜರಾತ್: 5
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net